ಮಹಿಳೆ ಹಾಗೂ ಮಕ್ಕಳ ರಕ್ಷಣೆಗೆ ಅಕ್ಕ ಪಡೆ ಸಜ್ಜು

ಗಸ್ತು ವಾಹನ
ಗಸ್ತು ವಾಹನ
Published on

ಪ್ರಮುಖ ಮುಖ್ಯಾಂಶಗಳು

  • ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಕ್ರಮ
  • ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ಬೆಂಬಲ
ಮೈಸೂರು: ಮಹಿಳೆಯರು, ಮಕ್ಕಳ ಸುರಕ್ಷತೆ ಹಾಗೂ ರಕ್ಷಣೆಗಾಗಿ ಈಗ ‘ಅಕ್ಕ ಪಡೆ’ ಸಜ್ಜುಗೊಳ್ಳುತ್ತಿದೆ. ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದ್ದು, ಜಿಲ್ಲೆಯಲ್ಲಿಯೂ ಈಗ ಹೊಸ ಭದ್ರತಾ ಪಡೆ ರಚನೆಗೊಳ್ಳಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಆರಂಭವಾಗುತ್ತಿರುವ ಈ ಪಡೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ತುರ್ತು ಸಂದರ್ಭಗಳಲ್ಲಿ ತಕ್ಷಣದ ಬೆಂಬಲ ನೀಡಲು ಮುಂದಾಗಲಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇತೃತ್ವದಲ್ಲಿ ಈ ಪಡೆ, ಪೊಲೀಸ್ ಸಿಬ್ಬಂದಿ ಮತ್ತು ತರಬೇತಿ ಪಡೆದ ಎನ್‌ಸಿಸಿ ಕೆಡೆಟ್‌ಗಳ ತಂಡಗಳನ್ನು ಒಳಗೊಂಡಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗುತ್ತದೆ.
ಸಹಾನುಭೂತಿ, ಸೇವಾಭಾವನೆ ಮತ್ತು ಸಮಾಜಮುಖಿ ಚಿಂತನೆ ಹೊಂದಿರುವ ಮಹಿಳೆಯರಿಗೆ ಒಂದು ವೇದಿಕೆ ಕಲ್ಪಿಸುವುದು, ಸಮಾಜದಲ್ಲಿ ಸುರಕ್ಷತೆ ಮತ್ತು ಶಿಕ್ಷಣದ ಕಿರು ಸೇತುವಾಗಿ, ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಡುವುದು ಯೋಜನೆ ಉದ್ದೇಶವಾಗಿದೆ. ಈ ಮೂಲಕ ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ದೌರ್ಜನ್ಯವನ್ನು ತಡೆಗಟ್ಟುವುದು. ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ಬೆಂಬಲ ನೀಡಲಾಗುತ್ತದೆ.
ಯೋಜನೆಯ ಕಾರ್ಯವ್ಯಾಪ್ತಿ: ಅಕ್ಕ ಪಡೆಯನ್ನು ಬೀದರ್‌ನಲ್ಲಿ ಪ್ರಾಯೋಗಿಕ ಜಾರಿಗೊಳಿಸಲಾಗಿದ್ದು, ಈಗ ರಾಜ್ಯದಲ್ಲಿ ವಿಸ್ತರಿಸಲಾದ ಈ ಪಡೆಗಳು ಬಸ್ ನಿಲ್ದಾಣಗಳು, ಶಾಲೆಗಳು, ಕಾಲೇಜುಗಳು, ಮಾರುಕಟ್ಟೆಗಳು, ಉದ್ಯಾನಗಳು ಮತ್ತು ದೇವಾಲಯಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿವೆ.
ಕಾರ್ಯಾಚರಣೆಗಾಗಿ ಹೊಯ್ಸಳ ವಾಹನಗಳ ಮಾದರಿಯ ವಾಹನದಲ್ಲಿ ಗಸ್ತು ನಡೆಯಲಿದೆ. ಪ್ರತಿ ಘಟಕಕ್ಕೆ 6 ರಿಂದ 10 ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಕನಿಷ್ಠ ಇಬ್ಬರು ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್‌ಗಳು, ತರಬೇತಿ ಪಡೆದ ಹೋಂಗಾರ್ಡ್, ಎನ್‌ಸಿಸಿ ಕೆಡೆಟ್‌ಗಳು ಇರುತ್ತಾರೆ. ಅಕ್ಕ ಪಡೆಯು ನಿತ್ಯ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಸಹಾಯವಾಣಿ ಆರಂಭ
ಅಕ್ಕ ಪಡೆಯು ರಾಜ್ಯಾದ್ಯಂತ ಇರುವ ಸಹಾಯವಾಣಿಯ ಮೂಲಕ ಸೇವೆ ನೀಡಲಿದೆ. ಬಾಲ್ಯ ವಿವಾಹ ನಿಷೇಧ, ಪೋಕ್ಸೋ ಕಾಯ್ದೆ, ಮಹಿಳಾ ಸುರಕ್ಷತೆ ಮತ್ತು ಮೊಬೈಲ್ ಸುರಕ್ಷತಾ ನಿಯಮಗಳು ದೌರ್ಜನ್ಯ ಪ್ರಕರಣಗಳ ಕುರಿತು 1098, 112, ಮತ್ತು 1930ರಂತಹ ಸಹಾಯವಾಣಿಗಳಿಗೆ ಮಾಹಿತಿ ನೀಡಬಹುದಾಗಿದೆ. ದೂರು ಬಂದ ಕಡೆ ಈ ತಂಡವು ಸ್ಥಳಕ್ಕೆ ಹೋಗಿ ಪರಿಶೀಲಿಸಲಿದೆ. ಗಂಭೀರ ಪ್ರಕರಣಗಳಲ್ಲಿ ಆರೋಪಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸುತ್ತದೆ.
ಜಿಲ್ಲೆಯಲ್ಲಿಯೂ ಚಾಲನೆ:
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ರಚನೆಗೊಳ್ಳಲಿರುವ ಅಕ್ಕ ಪಡೆ ಜಿಲ್ಲೆಯಲ್ಲಿಯೂ ಕಾರ್ಯಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಜಿಲ್ಲೆಗೆ ಒಂದು ವಾಹನ ನಿಯೋಜನೆಗೊಂಡಿದ್ದು, ಜ.13ರಂದು ಅಧಿಕೃತವಾಗಿ ಚಾಲನೆಗೊಳ್ಳಲಿದೆ. ಬಳಿಕ ಹಂತ, ಹಂತವಾಗಿ ಜಿಲ್ಲೆಯ ಇತರ ತಾಲೂಕುಗಳು, ನಗರ ಪ್ರದೇಶಗಳಿಗೆ ವಿಸ್ತರಣೆಗೊಳ್ಳಲಿದೆ.
ಅಕ್ಕ ಪಡೆಗೆ ಮೊದಲ ಹಂತದಲ್ಲಿ ಆಯ್ಕೆಗೊಂಡ ಮಹಿಳಾ ಪೊಲೀಸ್, ಹೋಂಗಾರ್ಡ್, ಎನ್‌ಸಿಸಿ ಕೆಡೆಟ್‌ಗಳಿಗೆ ತರಬೇತಿ ಪೂರ್ಣಗೊಳಿಸಲಾಗಿದೆ. ಬಳಿಕ ಎರಡನೇ ಹಂತದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ವಿಸ್ತರಣೆಗೊಳ್ಳಲಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ನಗರದ ಮಟ್ಟದಲ್ಲಿ ಪೊಲೀಸ್ ಕಮಿಷನರ್, ಜಿಲ್ಲಾ ಮಟ್ಟದಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪಡೆಯ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಈ ಪಡೆ ಕೂಡಲೇ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸುವುದರಿಂದ ಮಹಿಳೆಯರು ಹಾಗೂ ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟಲು ಸಹಕಾರಿಯಾಗಲಿದೆ.
ಜಿಲ್ಲೆಯಲ್ಲಿಯೂ ಚಾಲನೆ
ಸರ್ಕಾರದ ಮಹತ್ವಾಕಾಂಕ್ಷಿ ಅಕ್ಕ ಪಡೆ ಯೋಜನೆಯನ್ನು ಜಿಲ್ಲೆಯಲ್ಲಿಯೂ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಜಿಲ್ಲೆಗೆ ಒಂದು ವಾಹನ ಬಂದಿದೆ. ಕಾರ್ಯಪಡೆ ಕುರಿತು ಜ.13ರಂದು ಸಭೆ ನಿಗದಿಪಡಿಸಲಾಗಿದ್ದು, ಅಂದೇ ಪಡೆಯ ವಾಹನಕ್ಕೂ ಚಾಲನೆ ನೀಡಲಾಗುವುದು.
/ ಬಸವರಾಜು
ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net