ಯುವ ಸಮೂಹಕ್ಕೆ ಕೃಷಿ ತರಬೇತಿ ಅವಶ್ಯ

ನಂಜನಗೂಡು ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನೂತನ ತೋಟಗಾರಿಕೆ ಕಚೇರಿಯನ್ನು ಶಾಸಕ ದರ್ಶನ್ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ, ಜಂಟಿ ನಿರ್ದೇಶಕ ಮಂಜುನಾಥ ಅಂಗಡಿ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ರಂಗಸ್ವಾಮಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸಿ ಚಂದ್ರು ಇತರರು ಇದ್ದರು.
ನಂಜನಗೂಡು ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನೂತನ ತೋಟಗಾರಿಕೆ ಕಚೇರಿಯನ್ನು ಶಾಸಕ ದರ್ಶನ್ ಉದ್ಘಾಟಿಸಿದರು. ಕಳಲೆ ಕೇಶವಮೂರ್ತಿ, ಜಂಟಿ ನಿರ್ದೇಶಕ ಮಂಜುನಾಥ ಅಂಗಡಿ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ರಂಗಸ್ವಾಮಿ, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಸಿ ಚಂದ್ರು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿಕೆ
  • ತೋಟಗಾರಿಕೆ ಇಲಾಖೆ ಕಚೇರಿ ಉದ್ಘಾಟನೆ
ನಂಜನಗೂಡು: ಸರ್ಕಾರದ ಎಲ್ಲ ಇಲಾಖೆಗಳಲ್ಲೂ ಯುವಕರಿಗೆ ತರಬೇತಿ ನೀಡಿ ಕೃಷಿ ಬಗ್ಗೆ ಆಸಕ್ತಿ ಮೂಡಿಸಬೇಕಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ತೋಟಗಾರಿಕೆ ಕಚೇರಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಮಳೆ ಕಡಿಮೆಯಿಂದ ರೈತರು ಕೃಷಿ ಚಟುವಟಿಕೆ ಬಿಟ್ಟು ಕೆಲಸಕ್ಕಾಗಿ ಮೈಸೂರಿಗೆ ಹೋಗುತ್ತಿದ್ದಾರೆ. ರೈತರ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಕೊಡುವ ಮೂಲಕ ಮುಂದಿನ ಪೀಳಿಗೆಯೂ ಕೃಷಿಯಲ್ಲಿ ಶಾಶ್ವತವಾಗಿ ತೊಡಗಿಸಿಕೊಳ್ಳುವಂತೆ ತೋಟಗಾರಿಕೆ ಇಲಾಖೆ ಕೆಲಸ ಮಾಡಬೇಕಿದೆ ಎಂದರು.
ಪ್ರಸ್ತುತ ಹಳೆಯ ಕಟ್ಟಡ ಶಿಥಿಲವಾಗಿರುವ ಕಾರಣ 2020ರಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ 71 ಲಕ್ಷ ರೂ. ವೆಚ್ಚದಲ್ಲಿ ತಾಲೂಕಿನ ರೈತರಿಗೆ ಹಾಗೂ ಅಧಿಕಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಕಚೇರಿ ನಿರ್ಮಿಸಲಾಗಿದೆ. ಇಲಾಖೆ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಿ ತೆಂಗಿನ ಜತೆಗೆ ಅಡಿಕೆ ಬೆಳೆಗೂ ಕಾಲಕ್ಕೆ ತಕ್ಕಂತೆ ಸರಿಯಾದ ಮಾಹಿತಿ ನೀಡಬೇಕು. ನಂಜನಗೂಡಿನ ಪ್ರಮುಖ ಬೆಳೆ ನಂಜನಗೂಡು ರಸಬಾಳೆ ಈ ಹಿಂದೆ ಕೇವಲ 50 ಎಕರೆ ಇತ್ತು. ಪ್ರಸ್ತುತ 150 ರಿಂದ 200 ಎಕರೆಯಷ್ಟು ಪ್ರದೇಶವನ್ನು ವಿಸ್ತರಿಸುವುದರ ಜತೆಗೆ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ ಎಂದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿ.ಚಂದ್ರು ಮಾತನಾಡಿ, ತಾಲೂಕಿನಲ್ಲಿ 35,000 ಜನ ತೋಟಗಾರಿಕೆ ರೈತರಿದ್ದಾರೆ. ಸುಮಾರು 17 ಸಾವಿರ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಈ ಹಿಂದೆ ತೋಟಗಾರಿಕೆ ಇಲಾಖೆಯ ಸಿಬ್ಬಂದಿಗೆ ಬೇಕಾದ ಸೌಕರ್ಯ ನಿರ್ವಹಣೆಗೆ ತೊಂದರೆಯಾಗಿತ್ತು. ಈಗ ಕಚೇರಿ ಉದ್ಘಾಟನೆಗೊಂಡಿರುವುದರಿಂದ ರೈತರು ಹಾಗೂ ಅಧಿಕಾರಿಗಳಿಗೆ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ರಂಗಸ್ವಾಮಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂಗಡಿ, ಶ್ರೀಕಂಠಸ್ವಾಮಿ, ಕುರಹಟ್ಟಿ ಮಹೇಶ್, ಗಾಯತ್ರಿ ಮೋಹನ್, ಜಯಮಾಲ ಬೀರೇಗೌಡ, ಗೋವಿಂದರಾಜು, ಚಂದನ ಗೌಡ ಇತರರು ಇದ್ದರು.
16 ಟಿರಿಜ ಟಿತಿ 03
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net