ರಸಗೊಬ್ಬರ, ಬಿತ್ತನೆ ಬೀಜ ಸಮರ್ಪಕವಾಗಿ ದೊರಕಲಿ

ಕರ್ನಾಟಕ ಪ್ರಾಂತ ರೈತ ಸಂಘದಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ
  • ವಿದ್ಯುತ್ ಖಾಸಗೀಕರಣರಕ್ಕೆ ವಿರೋಧ
ಡೀಸೆಲ್, ರಸಗೊಬ್ಬರ ಬೆಲೆ ಏರಿಕೆ, ಕಾಳಸಂತೆ ಮಾರಾಟ, ವಿದ್ಯುತ್ ಖಾಸಗೀಕರಣ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಮುಂಗಾರು ಮಳೆ ಆರಂಭವಾಗಿದ್ದು, ಈಗಾಲೇ ರೈತರು ಕೃಷಿ ಚಟುವಟಿಕೆ ಆರಂಭಿಸಿ ಬಿತ್ತನೆಯಲ್ಲಿ ತೊಡಗಿದ್ದಾರೆ. ಆದರೆ, ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ಸಿಗದೆ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧದ ಬಿಕ್ಕಟ್ಟು, ಕೇಂದ್ರ ಸರ್ಕಾರದ ವಿದೇಶಾಂಗ, ವಾಣಿಜ್ಯ ತಪ್ಪು ನೀತಿಗಳಿಂದಾಗಿ ರಸಗೊಬ್ಬರದ ಬೆಲೆ, ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ರೈತರು ತೊಂದರೆಗೀಡಾಗಿದ್ದಾರೆ. ಇದನ್ನು ಬಳಸಿಕೊಂಡ ಕೆಲವು ವ್ಯಾಪಾರಸ್ಥರು ದಾಸ್ತಾನಿದ್ದರೂ, ಡಿಎಪಿ, ಯೂರಿಯಾ ಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ವಿತರಿಸಿ ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಸಿಗುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಇದುವರೆಗೆ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಸಾರ್ವಜನಿಕ ಕಂಪನಿಗಳಿಗೆ ಮಾತ್ರ ಅವಕಾಶ ಇತ್ತು. ವಿದ್ಯುತ್ ವಲಯವನ್ನು ಸಂಪೂರ್ಣ ಖಾಸಗೀಕರಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣವನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರ ಮಾಡಿದ ನಂತರ ವಿತರಣೆಯನ್ನು ಕೂಡಾ ಖಾಸಗಿ ಕಂಪನಿಗಳಿಗೆ ವಹಿಸಿಕೊಡುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಂದು ವೇಳೆ ವಿದ್ಯುತ್ ವಿತರಣೆ ಖಾಸಗಿ ಕಂಪನಿಗಳಿಗೆ ವಹಿಸಿದರೆ, ವಿದ್ಯುತ್ ಬಳಕೆದಾರರು, ರೈತರು, ಸಣ್ಣ, ಮಧ್ಯಮ ಕೈಗಾರಿಕೆಗಳು, ನೌಕರರು, ವ್ಯಾಪಾರಿಗಳು ತೀವ್ರ ಬಾಧೆಗೆ ಒಳಗಾಗಲಿದ್ದಾರೆ. ಹೀಗಾಗಿ ವಿದ್ಯುತ್ ವಿತರಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಬಾರದೆಂದು ಒತ್ತಾಯಿಸಿದರು.
ಹಾಲಿನ ಉತ್ಪಾದನೆಯ ಉದ್ದೇಶಕ್ಕಾಗಿ ಸಾಕುವ ಜರ್ಸಿ ಹಸುಗಳು ವಯಸ್ಸಾದ ಮೇಲೆ ಮತ್ತು ಈ ಹಸುಗಳು ಗಂಡು ಕರುವಿಗೆ ಜನ್ಮ ನೀಡಿದರೆ, ಅದನ್ನು ಸಾಕುವುದು ರೈತ ಸಮುದಾಯಕ್ಕೆ ದೊಡ್ಡ ಹೊರೆ. ಈ ಎಲ್ಲ ಉದ್ದೇಶದಿಂದ ಅನುಪಯುಕ್ತ ರಾಸುಗಳನ್ನು ಮಾರಾಟ ಮಾಡುವ ಮೂಲಕ ಅಲ್ಪಸ್ವಲ್ಪ ಆಧಾಯ ಗಳಿಸುತ್ತಾರೆ. ಆದರೆ, ಕರ್ನಾಟಕದಲ್ಲಿ ಜಾರಿಯಲ್ಲಿರುವ ಜಾನುವಾರು ವಧೆ ಹಾಗೂ ಮಾರಾಟ ನಿಷೇಧ ಕಾಯ್ದೆ ರೈತ ವಿರೋಧಿಯಾಗಿದ್ದು, ಇದರಿಂದ ರೈತರು ರಾಸುಗಳನ್ನು ಮುಕ್ತವಾಗಿ ಮಾರಾಟ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಈ ಕಾಯ್ದೆಯನ್ನು ದುರುಪಯೋಗಪಡಿಸಿಕೊಂಡು ಕೆಲವು ಹಿಂದುತ್ವವಾದಿ ಶಕ್ತಿಗಳು, ಸಂಘಟನೆಗಳು ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸುವ ಮತ್ತು ನೈತಿಕ ಪೊಲೀಸ್ ಗಿರಿ ತೋರುವ ಕೆಲಸಕ್ಕೂ ಮುಂದಾಗಿದ್ದಾರೆ. ಹೀಗಾಗಿ ನಿಲುವು ಸಡಿಲಗೊಳಿಸಿ ಮುಕ್ತವಾಗಿ ಜಾನುವಾರು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷ ಚಿಕ್ಕಣ್ಣೇಗೌಡ, ಕಾರ್ಯದರ್ಶಿ ಜಗದೀಶ್ ಸೂರ್ಯ, ಖಜಾಂಚಿ ಪಿ.ಪಿ.ಪ್ರಶಾಂತ್, ಕೆ.ಬಸವರಾಜ್, ಮೈಸೂರು ತಾಲೂಕು ಅಧ್ಯಕ್ಷ ಲೋಕೇಶ್, ಕಾರ್ಯದರ್ಶಿ ಸಣ್ಣನಾಯಕ, ಚಂದ್ರಶೇಖರ್, ಬೀರೇಶ್ವರ, ಕೆಂಪಯ್ಯ, ರಂಗರಾಜ್, ರಾಜೇಂದ್ರ, ಸಿದ್ದಯ್ಯ, ಮುಳ್ಳೂರು ಮಹಾದೇವ, ಚಿಕ್ಕಣ್ಣ, ಗುರುರಾಜ್, ಅಣ್ಣಪ್ಪ, ಶಾಕುಂತಲ, ಸುಬ್ರಹ್ಮಣ್ಯ ಸೇರಿದಂತೆ ಹಲವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net