ಫಸಲ್ ಬಿಮಾಗೆ ತಂಬಾಕು ಬೆಳೆ ಸೇರಿಸಿ

ಬೆಂಗಳೂರಿನ ವಿಧಾನಸೌಧದಲ್ಲಿ ರೈತ ಸಂಘದ ಪದಾಧಿಕಾರಿಗಳು ಕೃಷಿ ಸಚಿವ ಎನ್.ಚಲುವರಾಯಸ್ವಾಮಿರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಹೊಸೂರು ಕುಮಾರ್, ಅಗ್ರಹಾರ ರಾಮೇಗೌಡ, ಬೆಂಕಿಪುರ ಚಿಕ್ಕಣ್ಣ ಇತರರಿದ್ದರು.
ಬೆಂಗಳೂರಿನ ವಿಧಾನಸೌಧದಲ್ಲಿ ರೈತ ಸಂಘದ ಪದಾಧಿಕಾರಿಗಳು ಕೃಷಿ ಸಚಿವ ಎನ್.ಚಲುವರಾಯಸ್ವಾಮಿರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಹೊಸೂರು ಕುಮಾರ್, ಅಗ್ರಹಾರ ರಾಮೇಗೌಡ, ಬೆಂಕಿಪುರ ಚಿಕ್ಕಣ್ಣ ಇತರರಿದ್ದರು.
Published on
ಹುಣಸೂರು : ವರ್ಜಿನಿಯಾ ತಂಬಾಕು ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಪದಾಧಿಕಾರಿಗಳು ರಾಜ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಸೋಮವಾರ ವಿಧಾನಸೌಧದಲ್ಲಿ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ನೇತೃತ್ವದಲ್ಲಿ ಕೃಷಿ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ಹೊಸೂರು ಕುಮಾರ್ ಮಾತನಾಡಿ, ರಾಜ್ಯದಲ್ಲಿ ತಂಬಾಕು ಬೆಳೆಗಾರರು ಹಲವು ಸಮಸ್ಯೆ ಎದುರಿಸುತ್ತಿದ್ದು, ಈ ಬಾರಿ ತಂಬಾಕು ಬೆಳೆದ ರೈತರು ಅಪಾರ ನಷ್ಟ ಅನುಭವಿಸುತ್ತಿದ್ದಾರೆ. ವರ್ಜೀನಿಯಾ ತಂಬಾಕು ಬೆಳೆಯನ್ನು ಕರ್ನಾಟಕದಲ್ಲಿ ಮೈಸೂರು, ಹಾಸನ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸುಮಾರು 66 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಪ್ರತಿವರ್ಷ ಅತಿವೃಷ್ಟಿ ಅಥವಾ ಅನಾವೃಷ್ಟಿಗೆ ಒಳಗಾಗಿ ಬೆಳೆನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದರು.
ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಈ ಬೆಳೆಯನ್ನು ಫಸಲ್‌ಬಿಮಾ ಯೋಜನೆಯಡಿ ಅಲ್ಲಿನ ರಾಜ್ಯ ಸರ್ಕಾರವು ಸೇರ್ಪಡೆಗೊಳಿಸಿಕೊಂಡಿದ್ದು, ಸುಮಾರು 3-4 ವರ್ಷಗಳಿಂದ ಅಲ್ಲಿನ ರೈತರು ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಹವಾಮಾನ ವೈಪರೀತ್ಯ ರೈತರನ್ನು ಬಹುವಾಗಿ ಕಾಡುತ್ತಿದ್ದು, ರಾಜ್ಯದಲ್ಲೂ ತಂಬಾಕು ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವ್ಯಾಪ್ತಿಗೆ ತಂದಲ್ಲಿ ರೈತರಿಗೆ ಅಲ್ಪಪ್ರಮಾಣದ ಆರ್ಥಿಕ ಬೆಂಬಲ ದೊರೆತಂತಾಗುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹಳೇ ಮೈಸೂರು ಭಾಗದ ರೈತರು ಬಹುವಾಗಿ ನೆಚ್ಚಿಕೊಂಡಿರುವ ವಾಣಿಜ್ಯ ಬೆಳೆ ತಂಬಾಕು ಕೃಷಿ ದಿನದಿಂದ ದಿನಕ್ಕೆ ಹೊಸ ಹೊಸ ತೊಂದರೆ ಎದುರಿಸುತ್ತಿದೆ. ಸರ್ಕಾರಗಳು ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಲಾಗಿದೆ. ಮನವಿಯನ್ನು ಸ್ವೀಕರಿಸಿದ ಕೃಷಿ ಸಚಿವರು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವುದರೊಂದಿಗೆ ಕೇಂದ್ರ ಸರ್ಕಾರದ ಕೃಷಿ ಸಚಿವರ ಗಮನಕ್ಕೆ ತಂದು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.
ಭೇಟಿ ವೇಳೆ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಕಲ್ಲಹಳ್ಳಿ ರಮೇಶ, ರಾಜಶೇಖರ್, ಶಿವಮೂರ್ತಿ, ಮಲ್ಲೇಶ್ ಸತೀಶ್ ಕುಮಾರ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net