ಮೈಸೂರು: ಔಷಧಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೆ ಮಾರಾಟ ಮಾಡುವುದು ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ಎಚ್ಚರಿಸಿದರು.
ನಗರದ ನ್ಯೂ ಸಯ್ಯಜಿರಾವ್ ರಸ್ತೆಯಲ್ಲಿರುವ ರಘುಲಾಲ್ ಔಷಧ ಮಾರಾಟ ಕೇಂದ್ರಕ್ಕೆ ಬುಧವಾರ ದಿಢೀರ್ ಭೇಟಿ ನೀಡಿ ಔಷಧಗಳ ಮಾರಾಟದ ಬಿಲ್‌ಗಳು, ವೈದ್ಯರ ಸಲಹಾ ಚೀಟಿಗಳನ್ನು ಪರಿಶೀಲಿಸಿದರು.
ಔಷಧ ಮಾರಾಟ ಅಂಗಡಿಗಳು ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940ರ ಅನುಸೂಚಿ ಎಚ್.ಎಚ್-1 ಮತ್ತು ಎಕ್ಸ್ ಅಡಿಯಲ್ಲಿ ಬರುವ ಮತ್ತು ಅಮಲುಕಾರಕ, ರೋಗನಿರೋಧಕ ಮತ್ತು ಇತರ ಔಷಧಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೆ ಮಾರಾಟ ಮಾಡಬಾರದು. ಉಲ್ಲಂಘನೆಯಾದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ನಾರ್ಕೋ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ತಿಳಿಸಿದರು.
ಅಮಲುಕಾರಕ ರೀತಿಯ ಔಷಧಗಳನ್ನು ವೈದ್ಯರ ಸಲಹಾ ಚೀಟಿ ಇಲ್ಲದೆ ಖರೀದಿಸಿ ಯುವ ಜನತೆ ಮಾದಕ ವಸ್ತುಗಳ ಬಳಕೆಯ ಜಾಲದಲ್ಲಿ ಸಿಲುಕುತ್ತಿದ್ದಾರೆ. ಔಷಧ ಮಾರಾಟ ಮಳಿಗೆಗಳು ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ನೀಡಲಾಗುವ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕು.
ಔಷಧ ಮಾರಾಟ ಅಂಗಡಿಗಳ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣುವ ರೀತಿ ಎಚ್‌ಎಚ್-1 ಮತ್ತು ಎಕ್ಸ್ ಅಡಿ ಬರುವ ಔಷಧಗಳ ಖರೀದಿಗೆ ವೈದ್ಯರ ಸಲಹಾ ಚೀಟಿ ಕಡ್ಡಾಯ ಎಂದು ಪ್ರಕಟಿಸಬೇಕು ಎಂದರು.
ಔಷಧ ಮತ್ತು ಕಾಂತಿ ವರ್ಧಕ ನಿಯಮ 1940ರ ಅನುಸೂಚಿ ಎಚ್‌ಎಚ್-1 ಮತ್ತು ಎಕ್ಸ್ ಅಡಿ ಅಲ್ಪ್ರ ಜೋಲಮ್, ಕೊಡೈನ್, ಟಪೆಂಟಾಲ್ ಸೇರಿದಂತೆ 50 ಬಗೆಯ ಔಷಧಗಳಿವೆ. ಅವುಗಳ ದಾಸ್ತಾನು, ಮಾರಾಟ, ವೈದ್ಯರ ಸಲಹಾ ಚೀಟಿ ಹಾಗೂ ಬಿಲ್‌ಗಳ ದಾಖಲೆ ಔಷಧ ಮಾರಾಟ ಮಳಿಗೆಗಳು ಇಡಬೇಕು.
ಅಧಿಕಾರಿಗಳು ಪರಿಶೀಲನೆಗೆ ಬಂದ ಸಂದರ್ಭದಲ್ಲಿ ಹಾಜರುಪಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಜಿಲ್ಲೆಯಲ್ಲಿ ಬಹಳಷ್ಟು ಔಷಧ ಮಾರಾಟ ಕೇಂದ್ರಗಳಿದ್ದು, ಎಲ್ಲವನ್ನೂ ಔಷಧೀಯ ನಿಯಂತ್ರಕರು ಪರಿಶೀಲಿಸುವುದು ಕಷ್ಟವಾಗಿದ್ದು, ಪೊಲೀಸ್ ಇಲಾಖೆಯಿಂದಲೂ ಪರಿಶೀಲನೆ ತೀವ್ರಗೊಳಿಸಲಾಗುವುದು ಎಂದರು.
ಪರಿಶೀಲನೆಯ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಸಹಾಯಕ ಔಷಧ ನಿಯಂತ್ರಕರಾದ ಆಶಾ ಲತಾ ಹಾಗೂ ವಾಸೀಂ ಶರೀಫ್ ಉಪಸ್ಥಿತರಿದ್ದರು.