ಮುಡಾದಲ್ಲಿ 2018ಕ್ಕಿಂತ ಹಿಂದೆಯೇ 50:50 ಯೋಜನೆಯಡಿ ನಿವೇಶನ ಪಡೆದಿರುವ ಪ್ರಕರಣಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲಿ ಅಕ್ರಮ ಕಂಡುಬಂದರೆ ಅಂತಹ ನಿವೇಶನಗಳನ್ನೂ ರದ್ದುಪಡಿಸಲಾಗುವುದು ಎಂದು ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ 50:50 ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಿದರು.
ಮುಡಾದಲ್ಲಿ 2019ರಿಂದ 2023ರವರೆಗೆ ಹಂಚಿಕೆಯಾಗಿರುವ 1 ಸಾವಿರಕ್ಕೂ ಅಧಿಕ 50:50 ನಿವೇಶನಗಳನ್ನು ರದ್ದುಪಡಿಸಲಾಗಿದೆ. ಸಂಪೂರ್ಣ ಆದೇಶವನ್ನು ಮುಡಾ ಪ್ರಾಧಿಕಾರಕ್ಕೆ ಕಳುಹಿಸಲಾಗಿದ್ದು, ಆದೇಶ ಜಾರಿಗೊಳಿಸುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ ಎಂದರು.
50:50 ನಿವೇಶನ ಪಡೆದು ಮನೆ ನಿರ್ಮಿಸಿಕೊಂಡಿರುವವರ ಪಟ್ಟಿಯನ್ನೂ ತರಿಸಲಾಗುತ್ತಿದೆ. ಸದ್ಯಕ್ಕೆ ಎಲ್ಲ ನಿವೇಶನಗಳನ್ನೂ ರದ್ದುಪಡಿಸಲಾಗಿದೆ. ಕಾನೂನಾತ್ಮಕ ಹೋರಾಟ ನಡೆಯುತ್ತಿರುವ ನಿವೇಶನಗಳ ವಿಚಾರದಲ್ಲಿ ಮುಂದಿನ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಸ್ತೆ ನಿರ್ಮಾಣಕ್ಕಾಗಿ ಜಮೀನು ಬಿಟ್ಟುಕೊಟ್ಟು ಪರಿಹಾರ ಪಡೆದ ಪೈಕಿ ಕೆಲವರು ನಿವೇಶನವನ್ನೂ ಪಡೆದಿರುವುದು ಕಂಡುಬಂದಿದೆ. 50:50 ನಿವೇಶನ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಎಲ್ಲವನ್ನೂ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸಚಿವ ನಾಗೇಂದ್ರ ಅವರ ವಿಚಾರದಲ್ಲಿ ತಪ್ಪು ಕಂಡುಬಂದಿದ್ದರೆ ಬಿಜೆಪಿಯವರು ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕಿತ್ತು. ಆದರೆ ಗದ್ದಲ ನಡೆಸಿ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಸಚಿವರು ಆರೋಪಿಸಿದರು.