ಸವಾಲುಗಳೊಂದಿಗೆ ಗುರಿ ಸಾಧಿಸಿದ ಸಾಧಕರು

ಎಂಎಲ್ಸಿ ಸಿ.ಟಿ.ರವಿ ಅವರಿಗೆ ಪಿಎಚ್.ಡಿ ಪದವಿಯನ್ನು ರಾಜ್ಯಪಾಲ ಥಾವರ ಚಂದ್ ಗೆಹಲೋಟ್ ಪ್ರದಾನ ಮಾಡಿದರು. ಪ್ರೊ.ಶರಣಪ್ಪ ವಿ.ಹಲಸೆ, ಡಾ.ಸಿ.ಎಸ್.ಆನಂದಕುಮಾರ್, ಪ್ರೊ.ಎಸ್.ಕೆ.ನವೀನ್‌ಕುಮಾರ್ ಇದ್ದರು
ಎಂಎಲ್ಸಿ ಸಿ.ಟಿ.ರವಿ ಅವರಿಗೆ ಪಿಎಚ್.ಡಿ ಪದವಿಯನ್ನು ರಾಜ್ಯಪಾಲ ಥಾವರ ಚಂದ್ ಗೆಹಲೋಟ್ ಪ್ರದಾನ ಮಾಡಿದರು. ಪ್ರೊ.ಶರಣಪ್ಪ ವಿ.ಹಲಸೆ, ಡಾ.ಸಿ.ಎಸ್.ಆನಂದಕುಮಾರ್, ಪ್ರೊ.ಎಸ್.ಕೆ.ನವೀನ್‌ಕುಮಾರ್ ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಕಣ್ಣಲ್ಲಿ ಉನ್ನತ ಶಿಕ್ಷಣ ಪೂರೈಸಿದ ಆನಂದ
  • ಚಿನ್ನದ ಪದಕ ಪಡೆದು ಹಿಗ್ಗಿದ ಪದವೀಧರರು
  • ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ
ನಗರದ ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸಡಗರ ಮನೆ ಮಾಡಿತ್ತು. ಚಿನ್ನ ಪದಕ ವಿಜೇತರಿಗೆ ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಂತೋಷ. ಪದವಿ ಪಡೆದವರಿಗೆ ಉನ್ನತ ಶಿಕ್ಷಣ ಪೂರೈಸಿದ ಆನಂದ...!
ಶನಿವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಸಮಾರಂಭದಲ್ಲಿ ಸಂತಸ, ಲವಲವಿಕೆ ಕಳೆಗಟ್ಟಿತ್ತು. ಅಭ್ಯರ್ಥಿಗಳ ಪಾಲಕರು, ಮಕ್ಕಳಿಗೂ ಸಂತೋಷದ ಘಳಿಗೆಯೂ ಆಗಿತ್ತು.
ದೂರ ಶಿಕ್ಷಣ ವ್ಯವಸ್ಥೆ ಮೂಲಕ ಉನ್ನತ ಶಿಕ್ಷಣ ಪೂರೈಸಿದವರಲ್ಲಿ ಬಹುತೇಕ ಮಧ್ಯವಯಸ್ಕರರು. ಅವರೆಲ್ಲೂ ವೈವಿಧ್ಯಮಯ ಹಿನ್ನೆಲೆಯಿಂದ ಬಂದವರು. ಅಧ್ಯಯನವನ್ನು ಕೆಲವರು ಕೆಲಸ ಮಾಡುತ್ತಲೇ, ಇನ್ನೂ ಕೆಲವರು ಕೌಟುಂಬಿಕ ಹೊಣೆಗಾರಿಕೆ ನಿರ್ವಹಿಸುತ್ತಲೇ ಪೂರ್ಣಗೊಳಿಸಿದವರು. ಕೆಲವರು ಆರ್ಥಿಕ ತೊಂದರೆಗಳ ನಡುವೆಯೂ ಕಲಿಕೆ ಮುಂದುವರಿಸಿದವರು.
ಘಟಿಕೋತ್ಸವದಲ್ಲಿ 10,691 ಅಭ್ಯರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಯಿತು. 23 ಮಹಿಳೆಯರು, 45 ಪುರುಷರು ಸೇರಿದಂತೆ 65 ಜನರಿಗೆ ಪಿಎಚ್.ಡಿ ಪದವಿ ನೀಡಲಾಯಿತು. 65 ಅಭ್ಯರ್ಥಿಗಳಿಗೆ ಚಿನ್ನದ ಪದಕ, 62 ಜನರಿಗೆ ನಗದು ಬಹುಮಾನ ವಿತರಿಸಲಾಯಿತು. ವಿವಿಧ ಪದವಿ ಪಡೆದುಕೊಳ್ಳುವ ಅಭ್ಯರ್ಥಿಗಳಲ್ಲಿ 6,704 ಮಹಿಳಾ, 3,987 ಪುರುಷ ಅಭ್ಯರ್ಥಿಗಳಿದ್ದರು. ನಾನಾ ಪದವಿ, ಚಿನ್ನದ ಪದಕ, ನಗದು ಬಹುಮಾನ ಪಡೆಯುವಲ್ಲಿ ಮಹಿಳೆಯರೇ ಪಾರುಪತ್ಯ ಮೆರೆದರು.

‘ಮಾನ್ಯತೆ’ ಸಮಸ್ಯೆಯಿಂದ ನಲುಗಿದ್ದ ಅಭ್ಯರ್ಥಿಗಳಲ್ಲಿ ಮಂದಹಾಸ:

ಯುಜಿಸಿ ಮಾನ್ಯತೆ ರದ್ದುಗೊಂಡಿರುವುದರಿಂದ ಅತಂತ್ರ ಸ್ಥಿತಿಗೆ ಸಿಲುಕಿಕೊಂಡಿದ್ದ 2013-14 ಮತ್ತು 2014-15ನೇ ಸಾಲಿನ ವಿದ್ಯಾರ್ಥಿಗಳ ಸಂತಸಕ್ಕೆ ಪಾರವೇ ಇರಲಿಲ್ಲ. 12 ವರ್ಷಗಳಿಂದ ಕಾಯುತ್ತಿದ್ದ ಘಟಿಕೋತ್ಸವ ಪ್ರಮಾಣಪತ್ರ ಪಡೆಯುತ್ತಿದ್ದಂತೆ ಹಿರಿಹಿರಿ ಹಿಗ್ಗಿದರು.
ಉಭಯ ಸಾಲಿನ ಇನ್ ಹೌಸ್‌ನ 96 ಸಾವಿರ ಅಭ್ಯರ್ಥಿಗಳು ಕಲಿತ ಕೋರ್ಸ್‌ಗಳಿಗೆ ಪದವಿ ಪ್ರಮಾಣಪತ್ರ ಕೊಡಲು ಯುಜಿಸಿ, ರಾಜ್ಯಪಾಲರು, ಕೋರ್ಟ್ ಸಹ ಅನುಮೋದನೆ ನೀಡಿತ್ತು. ಹೀಗಾಗಿ ಪರೀಕ್ಷೆ ತೆಗೆದುಕೊಂಡಿದ್ದ 64,102ರ ಪೈಕಿ ಪಾಸಾಗಿರುವ 30,515 ಅಭ್ಯರ್ಥಿಗಳು ಪದವಿ ಪಡೆದುಕೊಂಡು ಸಂಭ್ರಮಿಸಿದರು.
‘ಪದವಿ ಸಿಗುತ್ತದೆಯೋ ಇಲ್ಲವೋ ಗೊತ್ತಿರಲಿಲ್ಲ. ಸಿಕ್ಕರು ಅದು ಯಾವಾಗ ಸಿಗುತ್ತದೆಯೋ ತಿಳಿದಿರಲಿಲ್ಲ. ಬರೋಬ್ಬರಿ 12 ವರ್ಷಗಳ ಬಳಿಕ ಪದವಿ ಪ್ರಮಾಣಪತ್ರ ದೊರೆತಿರುವುದು ಸಂತೋಷವಾಗಿದೆ. ಇದು ಮೊದಲೇ ಸಿಕ್ಕಿದ್ದರೆ ಪಿಎಚ್.ಡಿ ಮಾಡಲು ಅನುಕೂಲವಾಗುತ್ತಿತ್ತು’ ಎಂದು ಬೆಂಗಳೂರಿನ ಅಹಮ್ಮದ್ ರೆಹಮಾನ್ ಹೇಳಿದರು. 60 ವರ್ಷದ ಇವರು ಉರ್ದು ವಿಷಯದಲ್ಲಿ ಎಂ.ಎ. ಪದವಿ ಪಡೆದುಕೊಂಡರು.

ಪದವಿ ಗಿಟ್ಟಿಸಿದ ಇಬ್ಬರು ಹಿರಿಯ ಜೀವಿಗಳು:

ಹಿರಿಯ ನಾಗರಿಕರಾದ ಬೆಂಗಳೂರಿನ ಇಬ್ಬರು ಸ್ನೇಹಿತರು ಇಳಿವಯಸ್ಸಿನಲ್ಲೂ ಸ್ನಾತಕೋತ್ತರ ಪದವಿ ಪಡೆದುಕೊಂಡು ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಸಾಬೀತು ಪಡಿಸಿದರು. 72 ವರ್ಷದ ಎಸ್.ಜ್ಞಾನಸುಂದರ್ ಮತ್ತು 65 ವರ್ಷದ ಲಕ್ಷ್ಮೀನಾರಾಯಣ್ ಅವರಿಬ್ಬರು ಮಿತ್ರರು ಒಟ್ಟಾಗಿ ಎಂ.ಎ. ಸಂಸ್ಕೃತ ವಿಷಯದಲ್ಲಿ ಉನ್ನತ ಶಿಕ್ಷಣ ಪೂರೈಸಿದ್ದು, ಮುಂದೆ ಪಿಎಚ್.ಡಿ ಮಾಡುವ ಆಸೆ ಹೊಂದಿದ್ದಾರೆ.
‘1972ರಲ್ಲೇ ಬಿಎ ಎಲೆಕ್ಟ್ರಾನಿಕ್ ಪೂರ್ಣಗೊಳಿಸಿ ಟಾಟಾ ಪವರ್ ಕಂಪನಿಯಲ್ಲಿ ಪ್ರೊಜೆಕ್ಟರ್ ನಿರ್ದೇಶಕರಾಗಿ ಕೆಲಸ ಮಾಡಿ ನಿವೃತ್ತರಾಗಿರುವೆ. ನನ್ನ ಅಕ್ಕನ ಇಬ್ಬರು ಹೆಣ್ಣು ಮಕ್ಕಳು 45-50ರ ವಯಸ್ಸಿನಲ್ಲಿ ಪದವಿ ಪಡೆದುಕೊಂಡರು. ಇವರ ಪ್ರೇರಣೆಯಿಂದ ಇದೀಗ ‘ಮಾಸ್ಟರ್ ಆಫ್ ಆರ್ಟ್ಸ್’ ಪದವಿ ಪಡೆದುಕೊಂಡಿರುವೆ. ಸಂತೋಷವಾಗುತ್ತದೆ’ ಎಂದು ಜ್ಞಾನಸುಂದರ್ ಹೇಳಿದರು.
ಲಕ್ಷ್ಮೀನಾರಾಯಣ್ ಮಾತನಾಡಿ, ‘ಶಿವಮೊಗ್ಗ ಜಿಲ್ಲೆಯ ತಾಳಗುಪ್ಪ ಮೂಲದ ನಾನು ಬೆಂಗಳೂರಿನಲ್ಲಿ ನೆಲೆಸಿರುವೆ. ತೆರಿಗೆ ಇಲಾಖೆ(ಇದೀಗ ಜಿಎಸ್‌ಟಿ ಇಲಾಖೆ)ಯಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವೆ. ಬಿ.ಎಸ್ಸಿ ಮಾಡಿದ್ದ ನಾನು ಇದೀಗ ಸಂಸ್ಕೃತ ವಿಷಯದಲ್ಲಿ ಎಂ.ಎ. ಪಡೆದುಕೊಂಡಿರುವುದಕ್ಕೆ ಸಂಸತವಾಗುತ್ತಿದೆ. ‘ವಿಜಯವಾಣಿ’ ದಿನಪತ್ರಿಕೆಯಲ್ಲಿ ಬರುವ ಸಂಸ್ಕೃತ ಅಂಕಣದ ಓದುಗ ನಾನು. ಮುಂದೆ ಪಿಎಚ್.ಡಿ ಮಾಡುವ ಆಸೆ. ಅದಕ್ಕಾಗಿ ರಾಷ್ಟ್ರ ಮಟ್ಟ ಪಿಎಚ್.ಡಿ ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವ ಉದ್ದೇಶ ಹೊಂದಿರುವೆ ಎಂದು ತಿಳಿಸಿದರು.

ಶಾಸಕ ಸಿ.ಟಿ.ರವಿಗೆ ಪಿಎಚ್.ಡಿ:

ವಿಧಾನ ಪರಿಷತ್ ಸದಸ್ಯ ಬಿಜೆಪಿ ಸಿ.ಟಿ.ರವಿ ಅವರು ಪಿಎಚ್.ಡಿ ಪದವಿಯನ್ನು ಸ್ವೀಕರಿಸಿದರು. ರಾಜ್ಯಶಾಸ್ತ್ರ ವಿಷಯದಲ್ಲಿ ಇವರು ‘ಭಾರತದಲ್ಲಿ ಸಮ್ಮಿಶ್ರ ಸರ್ಕಾರಗಳ ಸಮಸ್ಯೆಗಳು ಹಾಗೂ ಸವಾಲುಗಳು: ಒಂದು ಅಧ್ಯಯನ’ ಕುರಿತು ಸಂಶೋಧನೆ ನಡೆಸಿ ಮಂಡಿಸಿದ ಮಹಾಪ್ರಬಂಧವನ್ನು ಕರಾಮುವಿ ಅಂಗೀಕರಿಸಿತ್ತು. ಅವರಿಗೆ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಕೆ.ಜೆ.ಸುರೇಶ್ ಮಾರ್ಗದರ್ಶಕರಾಗಿದ್ದರು.
‘ಎನ್‌ಡಿಎ ಹಾಗೂ ಯುಪಿಎ ಸಮ್ಮಿಶ್ರ ಸರ್ಕಾರ ಬಗ್ಗೆ ಸುದೀರ್ಘವಾಗಿ ಅಭ್ಯಾಸ ಮಾಡಿದ್ದೆ. ಈ ವಿಷಯಕ್ಕೆ ಪಿಎಚ್.ಡಿ ಪದವಿ ಬಂದಿದೆ. ಮೊದಲಿನಿಂದಲೂ ಓದುವುದು ನನ್ನ ಅಭ್ಯಾಸ. ನಾನು ರಾಜಕೀಯ ಕ್ಷೇತ್ರದಲ್ಲಿ ಇದ್ದೀನಿ. ಅದನ್ನೇ ಅರಿಸಿಕೊಂಡಿರುವುದರಿಂದ ನನಗೆ ತೊಂದರೆಯಾಗಲಿಲ್ಲ. ಪಿಎಚ್.ಡಿ ಬಂದಿರುವುದು ಖುಷಿ ತಂದಿದೆ’ ಎಂದು ಸಿ.ಟಿ.ರವಿ ಹೇಳಿದರು.
ಶಾಸಕಿ ರೂಪಕಲಾಗೆ ಪಿಎಚ್.ಡಿ:
ಕೆಜಿಎಫ್ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಎಂ.ರೂಪಕಲಾ ಶಶಿಧರ್ ರಾಜ್ಯಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವೀಧರರಾದರು. ‘ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಮಹಿಳಾ ಸದಸ್ಯರ ಪಾತ್ರ; ಒಂದು ಅಧ್ಯಯನ’ ಕುರಿತು ಸಂಶೋಧನೆ ನಡೆಸಿ ಮಹಾಪ್ರಬಂಧವನ್ನು ಸಲ್ಲಿಸಿದ್ದರು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪುತ್ರಿಯೂ ಆಗಿರುವ ಇವರು, ಪ್ರಸ್ತುತ ಕರ್ನಾಟಕ ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಸ್‌ಪಿಗೆ ಒಲಿದ ಪಿಎಚ್.ಡಿ:

ಬೆಂಗಳೂರು ಮಹಾನಗರ ಕಾರ್ಯಪಡೆ(ಬಿಎಂಟಿಎಫ್) ಎಸ್‌ಪಿ ಗೀತಾ ಪ್ರಸನ್ನ ಅವರು ಪಿಎಚ್.ಡಿ ಪದವಿ ಮುಡಿಗೇರಿಸಿಕೊಂಡರು. ಪ್ರೊ.ರಂಗಸ್ವಾಮಿ ಮಾರ್ಗದರ್ಶನದಲ್ಲಿ ‘ಮೈಸೂರು ಜಿಲ್ಲೆಯಲ್ಲಿ ಪೊಲೀಸ್ ಸಾಂಸ್ಕೃತಿಕ ಅಧ್ಯಯನ’ ಕುರಿತು ಸಂಶೋಧನೆ ಮಾಡಿ ಮಹಾಪ್ರಬಂಧ ಮಂಡಿಸಿದ್ದರು.
‘ನಾನು ಸಹಾಯಕ ಪ್ರಾಧ್ಯಾಪಕಿಯಾಗಿದ್ದೆ. ಆಗಿನಿಂದಲೂ ಪಿಎಚ್.ಡಿ ಮಾಡುವ ಆಸೆ ಇತ್ತು. ಅಷ್ಟರಲ್ಲೇ ದೊರೆತ ಪೊಲೀಸ್ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಇದು ಆಗಿರಲಿಲ್ಲ. ಮೈಸೂರು ನಗರದ ಡಿಸಿಪಿ ಆಗಿ ಬಂದಿದ್ದರಿಂದ ಪಿಎಚ್.ಡಿ ಮಾಡಲು, ಅದಕ್ಕೆ ಸಂಬಂಧಿಸಿದ ಮಾಹಿತಿ, ಅಧ್ಯಯನ ಮಾಡಲು ಅನುಕೂಲವಾಯಿತು. ಹೀಗಾಗಿ, ಪಿಎಚ್.ಡಿ ಆಸೆ ಸಾಕಾರಗೊಂಡಿದೆ ಎಂದು ಸಂತಸದಿಂದ ಹೇಳಿದರು ಗೀತಾ ಪ್ರಸನ್ನ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net