ಎಚ್.ಡಿ.ಕೋಟೆಯಲ್ಲಿ ಅಂತಾರಾಷ್ಟ್ರೀಯ ಆದಿವಾಸಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಆದಿವಾಸಿಗಳ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಅರಳಿಕಟ್ಟೆ ಹಾಡಿಯ ಜವರಮ್ಮ ಹಾಗೂ ಮಾರನಾಡಿಯ ದೇವಮ್ಮ ಅವರನ್ನು ಸನ್ಮಾನಿಸಲಾಯಿತು. ಚಿಕ್ಕತಿಮ್ಮನಾಯಕ, ಸೋಮ, ಶಿವಣ್ಣ, ಮರಿಯ, ಜವರಮ್ಮ ಇತರರಿದ್ದರು.
ಎಚ್.ಡಿ.ಕೋಟೆ: ಹೆಣ್ಣು ಅಬಲೆಯಲ್ಲ, ಸಬಲೆ. ಜಗತ್ತಿನ ಸೃಷ್ಟಿಯ ಮೂಲವೇ ಮಹಿಳೆ ಎಂದು ನಿಸರ್ಗ ಸಂಸ್ಥೆಯ ನಿರ್ದೇಶಕ ಪ್ರಭು ನಂಜುಡಯ್ಯ ತಿಳಿಸಿದರು.
ಪಟ್ಟಣದ ಬೆಳಗನಹಳ್ಳಿ ರಸ್ತೆಯಲ್ಲಿರುವ
ನಿಸರ್ಗ ಫೌಂಡೇಷನ್ ಕಚೇರಿಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಆದಿವಾಸಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನೆಯ ಬೆಳಗುವ ದೀಪವಾಗಿ, ಸಮಾಜದ ಆಧಾರಸ್ತಂಭವಾಗಿ, ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿರುವ ಮಹಿಳೆ ಅಸಾಮಾನ್ಯಳು ಎಂದರು.
ಕಾರ್ಯಕ್ರಮದ ಮುಖ್ಯ ಉದ್ದೇಶ ಕೇವಲ ಮಹಿಳೆಯರನ್ನು ಅಭಿನಂದಿಸುವುದು ಮಾತ್ರವಲ್ಲ. ಬದಲಾಗಿ ಮಹಿಳೆಯರ ಸಾಧನೆಗಳನ್ನು ಗುರುತಿಸುವುದು. ಸಮಾಜದಲ್ಲಿ ಅವರಿಗೆ ಸಿಗಬೇಕಾದ ಸಮಾನ ಅವಕಾಶಗಳ ಬಗ್ಗೆ ಜಾಗೃತಿ ಮೂಡಿಸುವುದು. ನಮ್ಮ ಸುತ್ತಮುತ್ತಲಿನ ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಹೇಳಿದರು.
ಒಂದು ರಾಷ್ಟ್ರದ ಪ್ರಗತಿ ಆ ದೇಶದ ಮಹಿಳೆಯರು ಎಷ್ಟು ಪ್ರಗತಿ ಸಾಧಿಸಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ. ನಾವೆಲ್ಲರೂ ಸ್ತ್ರೀ ಶಕ್ತಿಯನ್ನು ಗೌರವಿಸೋಣ ಮತ್ತು ಲಿಂಗ ತಾರತಮ್ಯವಿಲ್ಲದ ಸುಂದರ ಸಮಾಜದ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಕರೆ ನೀಡಿದರು.
ಅಂಗನವಾಡಿ ಮೇಲ್ವಿಚಾರಕಿ ರಂಜಿತಾ ಜೈನ್ ಮಾತನಾಡಿ, ಕುಟುಂಬದ ನಿರ್ವಹಣೆಯಿಂದ ಹಿಡಿದು ದೇಶದ ಆರ್ಥಿಕತೆ ಮತ್ತು ತಂತ್ರಜ್ಞಾನದವರೆಗೆ ಮಹಿಳೆಯರು ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಒಬ್ಬ ಪುರುಷ ಕಲಿತರೆ ಆ ವ್ಯಕ್ತಿ ಮಾತ್ರ ಸುಶಿಕ್ಷಿತನಾಗುತ್ತಾನೆ. ಆದರೆ ಒಬ್ಬ ಮಹಿಳೆ ಕಲಿತರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಸಾಂತ್ವಾನ ಕೇಂದ್ರ ಆಪ್ತ ಸಮಾಲೋಚಕಿ ಜಸ್ಸಿಲಾ ಮಾತನಾಡಿ, ಮಹಿಳಾ ದಿನಾಚರಣೆ ಎಂದರೆ ಕೇವಲ ಒಂದು ದಿನದ ಆಚರಣೆಯಲ್ಲ. ಇದು ಹೆಣ್ಣಿನ ಅಸ್ತಿತ್ವದ ಸಂಭ್ರಮ. ಪ್ರಸ್ತುತ ಮಹಿಳೆಯರು ಮುಟ್ಟದ ಶಿಖರವಿಲ್ಲ. ತಲುಪದ ಗುರಿಯಿಲ್ಲ. ಅಡುಗೆ ಮನೆಯ ನಾಲ್ಕು ಗೋಡೆಗಳಿಂದ ಹಿಡಿದು ಬಾಹ್ಯಾಕಾಶದ ಅನಂತದವರೆಗೆ ಮಹಿಳೆ ತನ್ನ ಹೆಜ್ಜೆಗುರುತನ್ನು ಮೂಡಿಸಿದ್ದಾಳೆ. ಆದರೆ, ನಾವು ಕೇವಲ ಸಾಧನೆಗಳ ಬಗ್ಗೆ ಮಾತನಾಡಿದರೆ ಸಾಲದು. ಇಂದಿಗೂ ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಾವು ಚಿಂತಿಸಬೇಕಿದೆ ಎಂದರು.
ಆದಿವಾಸಿಗಳ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಅರಳಿಕಟ್ಟೆ ಹಾಡಿಯ ಜವರಮ್ಮ ಹಾಗೂ ಮಾರನಾಡಿಯ ದೇವಮ್ಮ ಅವರನ್ನು ಸನ್ಮಾನಿಸಲಾಯಿತು.