ಈ ಬಾರಿ ವಿನೂತನ ಜಂಬೂಸವಾರಿ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ
ಮೈಸೂರು ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಯುವ ಸಂಭ್ರಮದ ಪೋಸ್ಟರ್ ಬಿಡುಗಡೆ ಮಾಡಿದರು. ಸಚಿವ ಶಿವರಾಜ್ ತಂಗಡಗಿ, ರಮೇಶ್ ಬಂಡಿಸಿದ್ದೇಗೌಡ, ಜಿ. ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಇತರರು ಇದ್ದರು
ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯ ಕಲಾ ಪ್ರದರ್ಶನ ವ್ಯವಸ್ಥಿತ ಮತ್ತು ವಿನೂತನವಾಗಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ ದಸರಾ ಮಹೋತ್ಸವ ಕಾರ್ಯಾಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದೇ ಕಲಾಪ್ರಕಾರದಲ್ಲಿ ಒಂದಕ್ಕಿಂತ ಹೆಚ್ಚು ಕಲಾತಂಡಗಳನ್ನು ಆಯ್ಕೆ ಮಾಡಿದಾಗ ಎಲ್ಲ ತಂಡಗಳು ಗುಂಪು ಅಭ್ಯಾಸ ನಡೆಸಿ ಏಕರೂಪದಲ್ಲಿ ಪ್ರದರ್ಶನ ನೀಡುವಂತೆ ಮುಂಚಿತವಾಗಿ ತಾಲೀಮು ನಡೆಸುವಂತೆ ತಿಳಿಸಿದರು.
ದಸರಾ ಮಹೋತ್ಸವ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ರಚಿಸಲಾಗಿರಯವ ಉಪಸಮಿತಿಯಲ್ಲಿ ಅಧಿಕಾರಿಗಳು ಯಾವುದೇ ಲೋಪವಾಗದಂತೆ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ವಿವಿಧ ಜಿಲ್ಲೆಗಳಿಂದ ಆಗಮಿಸುವ ಕ್ರೀಡಾ ಹಾಗೂ ಕುಸ್ತಿ ಪಟುಗಳ ವಾಸ್ತವ್ಯಕ್ಕಾಗಿ ಕೊಠಡಿಗಳ ವ್ಯವಸ್ಥೆ ಯಾಗಬೇಕು. ಮಹಿಳಾ ದಸರಾ ಸಮಿತಿ ವತಿಯಿಂದ ರಂಗೋಲಿ ಸ್ಪರ್ಧೆಗೆ ಹೆಚ್ಚಿನ ಸ್ಥಳಾವಕಾ ಶವಿರುವ ರಸ್ತೆ ಆಯ್ಕೆ ಮಾಡಿ. ರಂಗೋಲಿಗಳು ವಿನೂತನವಾಗಿ ಹಾಗೂ ಉತ್ತಮ ಸಂದೇಶ ನೀಡುವ ರೀತಿ ಇರಲಿ ಎಂದು ಸಲಹೆ ನೀಡಿದರು.
ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ನಗರದ ವಿವಿಧ ವೃತ್ತಗಳಿಗೆ ತನ್ನದೇ ಆದ ಇತಿಹಾಸವಿದೆ. ವೃತ್ತಗಳಿಗೆ ಅದರ ವಿಶೇಷತೆ ಯ ಅನುಗುಣವಾಗಿ ವಿದ್ಯುತ್ ದೀಪಾಲಂಕಾರ ಮಾಡಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಮಾತನಾಡಿ, ಈ ಬಾರಿ ವಿನೂತನವಾಗಿ ಹಾಗೂ ಶಿಸ್ತುಬದ್ಧವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಜಿಲ್ಲಾಡಳಿತದಿಂದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉಪಸಮಿತಿಗಳಲ್ಲಿ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ತೊಂದರೆಯಾದಲ್ಲಿ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು.
ಸ್ವಾಗತ ಸಮಿತಿ ವತಿಯಿಂದ ನವ ಬಣ್ಣಗಳಲ್ಲಿ ಆಹ್ವಾನ ಪತ್ರವನ್ನು ಸಿದ್ಧಪಡಿಸಿ ಗಣ್ಯರನ್ನು ಆಹ್ವಾನಿಸಲಾಗುವುದು.ವಾಸ್ತವ್ಯಕ್ಕಾಗಿ ಹೋಟೆಲ್, ಹಾಸ್ಟಲ್ ಹಾಗೂ ಡಾರ್ಮೆಟರಿಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾತನಾಡಿ, ಜಂಬೂಸವಾರಿ ಮೆರವಣಿಗೆ ಸಂದರ್ಭ ಬಂದೋಬಸ್ತ್ ಹಾಗೂ ಪಂಜಿನ ಕವಾಯತು ಸಂದರ್ಭದಲ್ಲಿ ಯಾವುದೇ ಲೋಪವಾಗದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು. ಪಂಜಿನ ಕವಾಯತಿನಲ್ಲಿ ನಲ್ಲಿ ಕಳೆದ ಸಾಲಿನಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಾಲದಂಡಿ ಮಾತನಾಡಿ, ಯುವ ದಸರಾ ಕಾರ್ಯಕ್ರಮ ಅ.13 ರಿಂದ 17 ರವರೆಗೆ ನಡೆಯಲಿದೆ. ಖ್ಯಾತ ಚಲನಚಿತ್ರ ನೃತ್ಯ ನಿರ್ದೇಶಕ ಪ್ರಭುದೇವ ಉದ್ಘಾಟಿಸಲಿದ್ದಾರೆ. ಪ್ರಖ್ಯಾತ ಕಲಾವಿದರು 5 ದಿನಗಳ ಕಾಲ ಕಾರ್ಯಕ್ರಮ ನೀಡಲಿದ್ದಾರೆ ಎಂದರು.
ಸಾಂಸ್ಕೃತಿಕ ಉಪಸಮಿತಿ ವತಿಯಿಂದ ಅರಮನೆ ಹಾಗೂ 10 ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಅರ್ಜಿ ಆಹ್ವಾನಿಸಲಾಗಿದೆ. 3000 ಕ್ಕಿಂತ ಹೆಚ್ಚಿನ ಅರ್ಜಿ ಬಂದಿದೆ. 400 ರಿಂದ 500 ತಂಡಗಳಿಗೆ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ ಮಾತನಾಡಿ, ರೈತ ದಸರಾ ಅ.16 ರಿಂದ 18ರವರೆಗೆ 3 ದಿನಗಳ ಕಾಲ ಜೆ.ಕೆ.ಮೈದಾನದಲ್ಲಿ ನಡೆಯಲಿದೆ. ಹಾಲು ಕರೆಯುವ ಸ್ಪರ್ಧೆ, 10 ಜನ ರೈತರಿಗೆ ಸನ್ಮಾನ, ರೈತರಿಗೆ ಉಪಯುಕ್ತ ಮಾಹಿತಿ ನೀಡಲು ಮಳಿಗೆ ತೆರೆಯಲಾಗುವುದು ಎಂದು ಮಾಹಿತಿ ನೀಡಿದರು.
ನಗರ ಪಾಲಿಕೆ ಆಯುಕ್ತೆ ಉಪ ಆಯಕ್ತೆ ವೀಣಾ ಮಾತನಾಡಿ, ಆಹಾರ ಮೇಳವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುವುದು. 120 ಸ್ಟಾಲ್ಗಳು ಹಾಗೂ 16 ವಿವಿಧ ಖಾದ್ಯಕ್ಕೆ ನೋಂದಣಿ ಮಾಡಲಾಗಿದೆ. ಲಾಟರಿ ಮೂಲಕ ಮಾರಾಟಗಾರರನ್ನು ಆಯ್ಕೆ ಮಾಡಲಾಗುವುದು ಎಂದರು.
ದಸರಾ ಕಾರ್ಯಕ್ರಮಗಳನ್ನು ಒಗ್ಗೂಡಿಸಿ ನ್ಯಾಷನಲ್ ಜಿಯೋಗ್ರಾಫಿಕ್ ಚಾನಲ್ ವತಿಯಿಂದ ಸಾಕ್ಷೃಚಿತ್ರ ನಿರ್ಮಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಮಂಜುಶ್ರೀ, ನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಹಾಗೂ ಇತರರು ಇದ್ದರು.