ಲಲಿತಾಭಿನಂದನದಲ್ಲಿ ಅಭಿಮಾನದ ಸಿಂಚನ

 ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಜಿಪಂ ಮಾಜಿ ಸದಸ್ಯೆ ಲಲಿತಾ ಜಿ.ಟಿ.ದೇವೇಗೌಡ ಅವರನ್ನು ಅಭಿನಂದಿಸಲಾಯಿತು. ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್,  ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಜಿ.ಟಿ.ದೇವೇಗೌಡ ಇನ್ನಿತರರಿದ್ದರು.
ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಜಿಪಂ ಮಾಜಿ ಸದಸ್ಯೆ ಲಲಿತಾ ಜಿ.ಟಿ.ದೇವೇಗೌಡ ಅವರನ್ನು ಅಭಿನಂದಿಸಲಾಯಿತು. ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಜಿ.ಟಿ.ದೇವೇಗೌಡ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲಲಿತಾಭಿನಂದನ’ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸನ್ಮಾನ
  • ರಾಜಕೀಯ ಬೇಗುದಿ ಎದುರಿಸಿದ ಸಾಧಕಿ ಲಲಿತಕ್ಕ : ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯ
  • ಗುಣಗಾನ, ಹೊಗಳಿಕೆ....ಹೀಗೆ ಅಭಿಮಾನದ ಸಿಂಚನ
ಮೈಸೂರು: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲಲಿತಾ ಜಿ.ಟಿ.ದೇವೇಗೌಡ ಅವರನ್ನು ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಲಲಿತಾಭಿನಂದನ’ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. 
ಶಾಸಕ ಜಿ.ಟಿ.ದೇವೇಗೌಡ ದಂಪತಿಯನ್ನು ಅಭಿಮಾನಪೂರ್ವಕವಾಗಿ ಪ್ರಶಂಸಿಸಲಾಯಿತು. ಅವರ ಕೌಟುಂಬಿಕ, ಸಾಮಾಜಿಕ ಜೀವನ ಹಾಗೂ ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಮೆಲುಕು ಹಾಕಲಾಯಿತು. ಈ ಸಂದರ್ಭದಲ್ಲಿ ಗುಣಗಾನ, ಹೊಗಳಿಕೆ....ಹೀಗೆ ಅಭಿಮಾನದ ಸಿಂಚನವಾಯಿತು.
ಅಭಿನಂದನಾ ಭಾಷಣ ಮಾಡಿದ ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ, ಲಲಿತಕ್ಕನಿಗೆ ಪ್ರಶಸ್ತಿ ಬಂದ ನೆಪದಲ್ಲಿ ಅಭಿನಂದನೆ ಏರ್ಪಡಿಸಿರುವುದು ನೆಪಮಾತ್ರ. ಕವಿ ಕುವೆಂಪು ಹೇಳಿದಂತೆ ಮನೆ ಮನೆಯ ತಪಸ್ವಿನಿಯರಾದ ಗೃಹಣಿಯರನ್ನು ಗೌರವಿಸಲು ಈ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜಕಾರಣಿಗಳ ಮನೆಯಲ್ಲಿ ಬೇಗುದಿಯನ್ನು ಲಲಿತಕ್ಕ ಎದುರಿಸಿದ್ದಾರೆ. ತಾಳ್ಮೆಯ ಮಾತಿನಿಂದ ಅಕ್ಕ ಅನ್ನುವ ಯೋಗ್ಯತೆ ಮತ್ತು ಅರ್ಹತೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ರಾಜಕಾರಣಿಗಳ ಪತ್ನಿಯರಾಗಿ ಬದುಕುವುದು ಸುಲಭವಲ್ಲ. ಪತಿ ಊರ ಉಸಾಬರಿಯಲ್ಲೆಲ್ಲ ಮುಗಿಸಿ ಹೈರಾಣಾಗಿ ಮನೆಗೆ ಬರುವವರೆಗೂ ಕಾಯುತ್ತಾರೆ. ರಾಜಕಾರಣದ ಸಿಟ್ಟು-ಗುಟ್ಟುಗಳು, ಅಸಮಾಧಾನ ಏನಿದ್ದರೂ ಇವರೇ ಸಮಾಧಾನವಾಗಿಬೇಕು. ಪತಿಯ ವಿಶ್ವಾಸಿಗಳು, ವಿರೋಧಿಗಳು, ಹಿತೈಷಿಗಳು, ಹಿತಶತ್ರುಗಳು ಯಾರೇ ಸಿಕ್ಕರೂ ವಿಶ್ವಾಸದಿಂದ ಮಾತನಾಡಿಸಬೇಕು. ಚುನಾವಣೆಗಳಲ್ಲಿ ಹಗಲು -ಇರುಳೆನ್ನೆದೆ ಮನೆಯ ಹೊರೆಗೂ ಒಳಗೂ ದುಡಿಯಬೇಕು. ಜತೆಗೆ ಸಂಸಾರವನ್ನೂ ನಿರ್ವಹಿಸಬೇಕು. ಹೀಗೆ ವಿವಿಧ ಹೊಣೆಗಾರಿಕೆಯನ್ನು ಸೊಗಸಾಗಿ, ನಿರುಮ್ಮಳವಾಗಿ ನಿರ್ವಹಿಸಿದವರು ಲಲಿತಕ್ಕ ಎಂದು ಬಣ್ಣಿಸಿದರು.
ರಾಯಚೂರಿನ ಕೃಷಿ ಸಾಧಕಿ ಡಾ.ಕವಿತಾ ಮಿಶ್ರಾ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಆದ್ದರಿಂದ ಈ ಕುರಿತು ಆಲೋಚಿಸಿ, ಪರಿಶ್ರಮ ಹಾಕಿ. ಬೇರೆಯವರೊಂದಿಗೆ ಹೊಲಿಕೆ ಮಾಡಿಕೊಳ್ಳಬೇಡಿ. ಬಂಗಾರ, ಸೀರೆ ಇನ್ನಿತರ ಅಲಂಕಾರಿಕ ವಸ್ತುಗಳ ಕುರಿತು ವ್ಯಾಮೋಹ ಬೇಡ. ಬೇರೆಯವರ ಬಗ್ಗೆ ಮಾತನಾಡಬೇಡಿ. ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸುವುದನ್ನು ಕಲಿಯಬೇಕು ಎಂದು ಮಹಿಳೆಯರಿಗೆ ಕಿವಿಮಾತು ಹೇಳಿದರು.
ಬದುಕು, ಕೃಷಿ ಸಾಧನೆ ಕುರಿತು ಸುದೀರ್ಘವಾಗಿ ವಿವರಿಸಿದ ಅವರು, ರೈತರು ಬಂದರೆ ಕುಳಿತುಕೊಳ್ಳಲು ನೆಲವನ್ನು  ತೋರಿಸುತ್ತಾರೆ. ಅದೇ ಅಧಿಕಾರಿ ಬಂದರೆ ಕುರ್ಚಿಯನ್ನು ಕೊಡುತ್ತಾರೆ. ಇದು ಆಗಬಾರದು. ರೈತರನ್ನು ಗೌರವಿಸುವುದನ್ನು ಪ್ರತಿಯೊಬ್ಬರೂ ಕಲಿಯಬೇಕು. ಋತು ಆಧಾರಿತ ಕೃಷಿ, ಮಿಶ್ರ ಕೃಷಿ ಪದ್ಧತಿ ಅನುಸರಿಸಿದರೆ ಪ್ರತಿ ತಿಂಗಳು ಆದಾಯ ಗಳಿಸಬಹುದು ಎಂದರು.
ಕೃಷಿ ಉತ್ಪನ್ನ ಮಾರಾಟ ಮಾಡುವ ರೈತರ ಬಳಿ ಗ್ರಾಹಕರು ಚೌಕಾಸಿ ಮಾಡಬೇಡಿ. ನೀವು ಕೊಡುವ ಹಣದಿಂದಲೇ ಅವರ ಮನೆ ಬೆಳೆಗುತ್ತದೆ ಎಂದರು.
ಯಾವ ಕೆಲಸವೂ ದೊಡ್ಡದಲ್ಲ, ಸಣ್ಣದೂ ಅಲ್ಲ. ಪ್ರತಿಯೊಂದು ಕಾಯಕವೂ ಶ್ರೇಷ್ಠವೇ. ಯಶಸ್ಸಿನ ಹಿಂದೆ ಹೋಗಬೇಡಿ. ನಿರಂತರ ಪರಿಶ್ರಮದಿಂದ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದು ಪ್ರೇರಣೆ ನೀಡಿದರು.
ಹೆಣ್ಣು ಮಗಳು ಸಮಾಜದಲ್ಲಿ ಸಾಧಿಸಲು ಸುಲಭದಲ್ಲಿ ಬಿಡುವುದಿಲ್ಲ. ಬಹಳಷ್ಟು ನಿರೀಕ್ಷಿಸಲ್ಪಟ್ಟವರು ಹೆಣ್ಣು ಮಕ್ಕಳು. ಎಲ್ಲ ಸವಾಲುಗಳ ನಡುವೆ ಸಾಧಿಸಿದ ಲಲಿಕ್ಕನವರು ಸಹಕಾರ ಬ್ಯಾಂಕ್ ಆರಂಭಿಸಿ ಹೆಣ್ಣು ಮಕ್ಕಳಿಗೆ ದಾರಿದೀಪವಾಗಿದ್ದಾರೆ ಎಂದರು. 
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಲಲಿತಾ ಜಿ.ಟಿ.ದೇವೇಗೌಡ, ನಾನು ಅಳಿಲು ಸೇವೆ ಮಾಡಿರುವೆ. ಇದಕ್ಕೆ ಅಪಾರವಾದ ಪ್ರೀತಿ ಗೌರವ ದೊರೆತಿದೆ. ಅದಕ್ಕೆ ಋಣಿ ಎಂದು ಭಾವುಕರಾದರು. 
ಜಿ.ಟಿ.ದೇವೇಗೌಡ ಅವರನ್ನು ವಿವಾಹದ ದಿನದಿಂದ ಈವರೆಗಿನ ಸಾಮಾಜಿಕ ಬದುಕಿನ ಪ್ರಮುಖ ಘಟನಾವಳಿಗಳನ್ನು ಸ್ಮರಿಸಿದರು.  
ನೆನಪಿನ ಸುರಳಿ ಕಿರುಹೊತ್ತಗೆ ಬಿಡುಗಡೆಗೊಳಿಸಿ ಮಾತನಾಡಿದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಸಾಮಾಜಿಕ ಅಥವಾ ರಾಜಕೀಯ ಕ್ಷೇತ್ರದಲ್ಲಿ ಬೆಳವಣಿಗೆ ಕಾಣಬೇಕಾದರೆ ಹೆಚ್ಚು ಮಾತಾಡಬೇಕು. ಭಾರತದಲ್ಲಿ ಮಾತಾಡದಿದ್ದರೆ ಬೆಳವಣಿಗೆಯಾಗಲ್ಲ. ಸುಳ್ಳೋ ನಿಜವೋ ಮಾತಾಡುತ್ತಿರಬೇಕು. ಸಹಕಾರ ಕ್ಷೇತ್ರದ ಲಲಿತಕ್ಕ ಹೆಚ್ಚು ಮಾತಾಡಬೇಕು. ಆ ದಿಕ್ಕಿನಲ್ಲಿ ಆಲೋಚಿಸಬೇಕು ಎಂದು ಸಲಹೆ ನೀಡಿದರು.  
ಲಲಿತಕ್ಕ ಸರಳರು ಮತ್ತು ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರೆಯುವವರು. ಜಿ.ಟಿ.ದೇವೇಗೌಡರ ರಾಜಕೀಯ ಬೆಳವಣಿಗೆಯಲ್ಲಿ ಲಲಿತಕ್ಕನ ಪ್ರೇರಣೆ ಮತ್ತು ಪ್ರೋತ್ಸಾಹ ಅಗಾಧವಾಗಿದೆ ಎಂದರು.
ಆದಿಚುಂಚನಗಿರಿ ಮಠದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಬೇಬಿ ಮಠದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್‌ರಾಜ್‌ಕುಮಾರ್, ವಿಧಾನಪರಿಷತ್ ಸದಸ್ಯ ಕೆ.ವಿವೇಕಾನಂದ, ಮುಡಾ ಮಾಜಿ ಅಧ್ಯಕ್ಷ ಹರದನಳ್ಳಿ ವಿಜಯ್, ಮದ್ದೂರು ಶಾಸಕ ತಮ್ಮಣ್ಣ ಪುತ್ರಿ ಡಾ.ಸೌಮ್ಯಾ ಪಾಲ್ಗೊಂಡಿದ್ದರು.
ಬಳಿಕ, ನೃತ್ಯ ತಾರೆಯರಾದ ನಿರುಪಮಾ- ರಾಜೇಂದ್ರ ಮತ್ತು ತಂಡದಿಂದ ನಡೆದ ‘ನೃತ್ಯ ಸಂಭ್ರಮ ವೈಭವ’ ಕಾರ್ಯಕ್ರಮವನ್ನು ಸಭಿಕರು ಉತ್ಸಾಹದಿಂದ ಆಸ್ವಾದಿಸಿದರು.

ಗದ್ಗದಿತರಾದ ಜಿಟಿಡಿ

ಕಾರ್ಯಕ್ರಮದಲ್ಲಿ ಶಾಸಕ ಜಿ.ಟಿ.ದೇವೇಗೌಡ  ಭಾವುಕರಾಗಿ ಕಣ್ಣೀರು ಹಾಕಿದರು. ಮಾತು ಆರಂಭಿಸುವಾಗಲೇ ದುಃಖಿತರಾದ ಅವರು, ನನ್ನ ಪತ್ನಿ ಒಂದು ದಿನ ಸುಖಪಟ್ಟಿಲ್ಲ. ಸಿನಿಮಾ ನೋಡಲಿಲ್ಲ. ಹೊರಗಡೆ ಹೋಗಲಿಲ್ಲ. ಪ್ರೊ.ಕೃಷ್ಣೇಗೌಡರು ಬರೆದದ್ದನ್ನು ಓದಿದ ಮೇಲೆ ಅವಳು ಇಷ್ಟು ಕಷ್ಟಪಡುತ್ತಿದ್ದಾಳೆ ಅನಿಸಿತು ಎಂದು ಗದ್ಗದಿರಾಗಿ ಹೇಳಿದರು.
ತಂದೆಯವರನ್ನು ಕಳೆದುಕೊಂಡ ಬಳಿಕ ಬಹಳ ತೊಂದರೆ ಅನುಭವಿಸಿದೆ. ಅವತ್ತಿಂದ ಸಾಲದಲ್ಲಿಯೇ ಬದುಕಿದೆ. ಹಿಂದೆ ನನ್ನ ಮೇಲೆ ದೈಹಿಕ ಹಲ್ಲೆ ಮಾಡಿದವರಿಗೂ ಒಳ್ಳೆಯದು ಮಾಡಿದ್ದೇನೆ. ಯಾವತ್ತೂ ಯಾರನ್ನೂ ದ್ವೇಷ ಮಾಡಿಲ್ಲ. ಬಡವರ ಕಣ್ಣೀರು ಒರೆಸುವುದು ದೇವರ ಕೆಲಸವೆಂದು ಮಾಡುತ್ತೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಋಣಿಯಾಗಿರುತ್ತೇನೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net