ಕೆಲಸ ಮಾಡದ ಜನಪ್ರತಿನಿಧಿಗಳನ್ನು ವಾಪಾಸ್ ಕರೆಸಿಕೊಳ್ಳುವ ವ್ಯವಸ್ಥೆ ಬೇಕು : ಮುಖ್ಯಮಂತ್ರಿ ಚಂದ್ರು

ಮೈಸೂರು ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮುಕ್ತ ಸಂವಾದವನ್ನು ನಟ ಡಾ.ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಿದರು. ಪ್ರೊ.ಸಿ. ನಟರಾಜ್, ಅಂಶಿ ಪ್ರಸನ್ನಕುಮಾರ್, ಎಲ್. ರಂಗಯ್ಯ, ತಗಡೂರು ವೀರೇಶ್‌ಕುಮಾರ್ ಮಹಾಮನೆ ಹಾಗೂ ಇತರರು ಇದ್ದರು.
ಮೈಸೂರು ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಮುಕ್ತ ಸಂವಾದವನ್ನು ನಟ ಡಾ.ಮುಖ್ಯಮಂತ್ರಿ ಚಂದ್ರು ಉದ್ಘಾಟಿಸಿದರು. ಪ್ರೊ.ಸಿ. ನಟರಾಜ್, ಅಂಶಿ ಪ್ರಸನ್ನಕುಮಾರ್, ಎಲ್. ರಂಗಯ್ಯ, ತಗಡೂರು ವೀರೇಶ್‌ಕುಮಾರ್ ಮಹಾಮನೆ ಹಾಗೂ ಇತರರು ಇದ್ದರು.
Published on
ಮೈಸೂರು: ಮತದಾರರಿಗೆ ಚುನಾಯಿತ ಪ್ರತಿನಿಧಿಗಳನ್ನು ವಾಪಸ್ ಕರೆಸಿಕೊಳ್ಳುವ ಅಧಿಕಾರ ಇರಬೇಕು ಎಂದು ಖ್ಯಾತ ಚಲನಚಿತ್ರ ನಟ ಡಾ.ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.
ನಗರದ ವಾಲ್ಮೀಕಿ ರಸ್ತೆಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ದಾರಿ ಫೌಂಡೇಷನ್ ಗುರುವಾರ ಆಯೋಜಿಸಿದ್ದ ‘ಭವಿಷ್ಯದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಯ ಜವಾಬ್ದಾರಿ ಯುವಶಕ್ತಿಯ ಕೈಯಲ್ಲಿ’ ಕುರಿತ ಮುಕ್ತ ಸಂವಾದ ಉದ್ಘಾಟಿಸಿ ಮಾತನಾಡಿ, ಈಗ ಆಯ್ಕೆಯಾದ ನಂತರ ಐದು ವರ್ಷ ಚುನಾಯಿತಪ್ರತಿನಿಧಿಗಳು ಏನು ಮಾಡಿದರೂ ಕೇಳುವಂತಿಲ್ಲ ಎಂಬಂತಿದೆ, ಈ ವ್ಯವಸ್ಥೆ ಹೋಗಬೇಕು. ಅವರು ಮತದಾರರಿಗೆ ಉತ್ತರದಾಯಿಗಳಾಗಿರಬೇಕು. ವಾಪಸ್ ಕರೆಸಿಕೊಳ್ಳುವ ಅಧಿಕಾರ ಇದ್ದಲ್ಲಿ ಭಯದಿಂದ ಜನರ ಕೆಲಸ ಮಾಡುತ್ತಾರೆ. ಚುನಾಯಿತ ಪ್ರತಿನಿಧಿಗಳು ಪ್ರಜೆಗಳ ಗುಲಾಮರಾಗಿರಬೇಕೇ ಹೊರತು ಪ್ರಜೆಗಳನ್ನೇ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಬಾರದು ಎಂದು ಮಾರ್ಮಿಕವಾಗಿ ಹೇಳಿದರು.
ಈಗ ಶೇ.50 ರಷ್ಚು ಮತದಾನ ಆಗದಿದ್ದರೂ, ಚಲಾಯಿತ ಮತಗಳಲ್ಲಿ ಶೇ.50 ಮತಗಳನ್ನು ಪಡೆಯದಿದ್ದರೂ ಹೆಚ್ಚು ಮತ ಪಡೆದ ವರನ್ನು ಚುನಾಯಿತ ಎಂದು ಘೋಷಿಸಲಾಗುತ್ತಿದೆ. ಇದ್ಯಾವ ರೀತಿಯ ಪ್ರಜಾಪ್ರಭುತ್ವ?, ಇದು ತಪ್ಪಬೇಕು. ಚಲಾಯಿತ ಮತಗಳಲ್ಲಿ ಶೇ.50 ಕ್ಕಿಂತ ಹೆಚ್ಚು ಪಡೆಯುವವರನ್ನು ಮಾತ್ರ ಚುನಾಯಿತ ಅಭ್ಯರ್ಥಿ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು.
ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲತತ್ವಗಳನ್ನು ಬದಲಿಸಲು ಅವಕಾಶವೇ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ಜತೆಗೆ ಅನಧಿಕೃತವಾಗಿ ಮಾಧ್ಯಮರಂಗವೂ ಇದೆ. ಇತ್ತೀಚೆಗೆ ಧರ್ಮ ಎಂಬ ಮತ್ತೊಂದು ಅಂಗವೂ ಕಾಣಿಸುತ್ತದೆ. ಧರ್ಮ ಇತಿಮಿತಿಯಲ್ಲಿರಬೇಕೇ ಹೊರತು ಅದೇ ಮುಖ್ಯವಾಗಿರಬಾರದು ಎಂದರು.
ಸರ್ಕಾರಗಳು ಉಚಿತ ಗ್ಯಾರಂಟಿಗಳನ್ನು ನೀಡುವ ಬದಲು ಎಲ್ಲರಿಗೂ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯ ಕಲ್ಪಿಸಬೇಕು. ಸರ್ಕಾರಿ ಶಾಲೆಗಳು, ಕಾಲೇಜುಗಳು ಹಾಗೂ ಆಸ್ಪತ್ರೆಗಳನ್ನು ಬಲಪಡಿಸಬೇಕು. ರೈತರಿಗೆ ಬೆಂಬಲ ಬೆಲೆ ಬದಲು ಸಮರ್ಪಕವಾಗಿ ನೀರು ಹಾಗೂ ವಿದ್ಯುತ್ ಪೂರೈಸಬೇಕು ಎಂದು ಸಲಹೆ ನೀಡಿದರು.
ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ಸಂವಿಧಾನದ 9ನೇ ಶೆಡ್ಯೂಲ್‌ನಲ್ಲಿ ಹೇಳಿರುವಂತೆ ದೇಶದಲ್ಲಿರುವ ಹಲವು ಭಾಷೆಗಳ ಪೈಕಿ ಹಿಂದಿ ಕೂಡ ಒಂದು. ಹೀಗಾಗಿ ರಾಜ್ಯದಲ್ಲಿ ಎಲ್ಲ ಹಂತಗಳಲ್ಲೂ ಕನ್ನಡಕ್ಕೆ ಆದ್ಯತೆ ಸಿಗಬೇಕು. ಇಂಗ್ಲಿಷ್ ಅನ್ನು ಕೂಡ ಚೆನ್ನಾಗಿ ಕಲಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ.ಸಿ. ನಟರಾಜ್ ಮಾತನಾಡಿ, ಪ್ರತಿಯೊಬ್ಬರೂ ಬದ್ಧತೆ, ಪ್ರಾಮಾಣಿಕತೆ ಬೆಳೆಸಿಕೊಳ್ಳಬೇಕು. ಯಾವುದೇ ಹುದ್ದೆಗೆ ಹೋದರೂ ಭ್ರಷ್ಟಾಚಾರಮುಕ್ತವಾಗಿ ಕೆಲಸ ಮಾಡುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್‌ನಲ್ಲಿ ನಗರದ 3 ಮಹಾರಾಣಿ ಕಾಲೇಜುಗಳ ಹಾಸ್ಟೆಲ್ ನಿರ್ಮಾಣಕ್ಕೆ 291 ಕೋಟಿ ರೂ. ನೀಡಿದ್ದು, ನಮ್ಮ ಕಾಲೇಜಿಗೆ 50 ಕೋಟಿ ರೂ. ದೊರೆತ್ತಿದೆ. ಈ ರೀತಿಯ ಮೂಲಸೌಕರ್ಯ ಕಲ್ಪಿಸುವ ಮೂಲಕ ರಾಜ್ಯ ಸರ್ಕಾರ ಗ್ರಾಮೀಣ ಬಡ ಹಾಗೂ ಮಧ್ಯಮವರ್ಗದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ದಾರಿ ಫೌಂಡೇಷನ್ ಅಧ್ಯಕ್ಷ ಎಲ್. ರಂಗಯ್ಯ, ಕಾರ್ಯದರ್ಶಿ ತಗಡೂರು ವೀರೇಶ್‌ಕುಮಾರ್ ಮಹಾಮನೆ, ಸಂಚಾಲಕ ಪ್ರಭಾಕರ್, ಐಕ್ಯೂಎಸಿ ಸಂಚಾಲಕ ಡಾ.ಎಸ್. ಮುತ್ತುರಾಜ, ಖಜಾಂಚಿ ರಾಘವೇಂದ್ರ, ಮಲ್ಲಣ್ಣ, ತೋಂಟೇಶ್ ಮೊದಲಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net