ಮೈಸೂರಿನಲ್ಲಿ ಪ್ರಜ್ವಲಿಸುತ್ತಿರುವ ಯೋಗ ಕ್ಷೇತ್ರ

ಯೋಗ
ಯೋಗ
Published on

ಪ್ರಮುಖ ಮುಖ್ಯಾಂಶಗಳು

  • ತರಬೇತಿ ಕೇಂದ್ರಗಳಲ್ಲಿ ಹೆಚ್ಚುತ್ತಿರುವ ಜನರು
  • ಆರೋಗ್ಯದ ಜತೆಗೆ ಸಂಸ್ಕೃತಿ ಉಳಿಸಲು ಒತ್ತು
ಅವಿನಾಶ್ ಜೈನಹಳ್ಳಿ ಮೈಸೂರು
12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಳಿಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಕ್ಷೇತ್ರ ಮತ್ತಷ್ಟು ಪ್ರಜ್ವಲಿಸುತ್ತಿದೆ. ಯೋಗ ಕಲಿಯುವವರ ಸಂಖ್ಯೆ ದಿನದ ಬಳಿಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಯೋಗ ಕಲಿಯಬೇಕು, ಮಕ್ಕಳಿಗೂ ಯೋಗ ಕಲಿಸಬೇಕು ಎಂದು ಪಾಲಕರು ಚಡಪಡಿಸುತ್ತಿದ್ದರೆ, ಯುವಜನರು ದೈಹಿಕ ಮತ್ತು ಮಾನಸಿಕ ಫಿಟ್ನೆಸ್‌ಗಾಗಿ ಯೋಗದತ್ತ ವಾಲಲು ಶುರು ಮಾಡಿದ್ದಾರೆ. ಒಟ್ಟಾರೆ ಸಾರ್ವಜನಿಕರಲ್ಲಿ ಯೋಗದ ಬಗೆಗಿನ ಭಾವನೆ ಬದಲಾಗುತ್ತಿದೆ, ಯೋಗವನ್ನು ಪೂಜ್ಯ ಭಾವನೆಯಲ್ಲಿ ನೋಡಲು ಆರಂಭಿಸಿದ್ದಾರೆ.
ಮೈಸೂರು ನಗರ ವಿವಿಧ ಸಂಸ್ಕೃತಿ, ಆಚಾರ-ವಿಚಾರಗಳನ್ನು ತನ್ನೊಳಗೆ ಹುದುಗಿಸಿಕೊಂಡಿದೆ. ಅನೇಕ ವರ್ಷಗಳಿಂದ ಪ್ರಪಂಚಾದ್ಯಂತ ‘ಯೋಗ’ದ ಕಂಪನ್ನು ಪಸರಿಸುತ್ತ ಬಂದಿದೆ. ವಿಶ್ವಾದ್ಯಂತ ಮೈಸೂರು ‘ಯೋಗ ನಗರಿ’ ಎಂದೇ ಪ್ರಖ್ಯಾತಿ ಪಡೆದಿದೆ.
ಮೈಸೂರಿನಲ್ಲಿ ನಾಲ್ಕು ವರ್ಷದ ಹಿಂದೆ ನಡೆದಿದ್ದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅರಮನೆ ಅಂಗಳದಲ್ಲಿ ಯೋಗ ಮಾಡಿದ ಬಳಿಕ ಮೈಸೂರಿನ ಯೋಗ ಪರಂಪರೆ ಪ್ರಪಂಚದಲ್ಲಿ ಮತ್ತಷ್ಟು ಪ್ರಜ್ವಲಿಸಲು ಶುರು ಮಾಡಿತ್ತು. ಕರೊನಾ ಕಾರಣದಿಂದ 2020 ಮತ್ತು 2021 ಎರಡು ವರ್ಷಗಳ ಕಾಲ ಮನೆಯಲ್ಲೇ ಅಭ್ಯಾಸ ಮುಂದುವರಿಸಿದ್ದ ಯೋಗಪಟುಗಳು ಹಾಗೂ ಆಸಕ್ತರು 2022ರ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದ ಬಳಿಕ ಮತ್ತೆ ತರಬೇತಿ ಕೇಂದ್ರಗಳ ಮೊರೆ ಹೋಗಲು ಆರಂಭಿಸಿದ್ದರು. ಆಗ ನಿತ್ಯ ಯೋಗ ಕೇಂದ್ರಗಳಿಗೆ ಬರುವವರ ಸಂಖ್ಯೆ ಮೊದಲಿಗಿಂತಲೂ ಶೇ.15ರಷ್ಟು ಹೆಚ್ಚಾಗಿತ್ತು. ಬಳಿಕ ವರ್ಷದಿಂದ ವರ್ಷ ಈ ಸಂಖ್ಯೆ ಹೆಚ್ಚುತ್ತಲೇ ಇದೆ.
ಅಷ್ಟೆ ಅಲ್ಲದೆ, ವಿದೇಶಿಗರು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಯೋಗ ಗುರುಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಬರಲು ಶುರು ಮಾಡಿದ್ದರು. ಇದೀಗ ವಿಶೇಷವಾಗಿ ವಿದೇಶಿಯರ ಜತೆಗೆ ಸ್ಥಳೀಯರೂ ಯೋಗದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿದೇಶಿಗರ ಜತೆಗೆ ಸ್ಥಳೀಯರಿಗೂ ಯೋಗದ ಬಗ್ಗೆ ಆಸಕ್ತಿ ಹೆಚ್ಚುವಂತೆ ಮಾಡಿದೆ. ಕಳೆದ ಮೂರು ನಾಲ್ಕು ದಿನಗಳಿಂದ ಯೋಗ ಕೇಂದ್ರಗಳಿಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಲೇ ಇದೆ.
ನಿತ್ಯ ಯೋಗವನ್ನು ಎಷ್ಟು ಗಂಟೆ ಮಾಡಬೇಕು? ಏನೆಲ್ಲ ಪ್ರಯೋಜನಗಳಿವೆ? ನಮ್ಮ ಬಡಾವಣೆಯಲ್ಲಿ ಕೇಂದ್ರ ಇದೆಯಾ? ಇತ್ಯಾದಿ ಮಾಹಿತಿಗಳನ್ನು ಆಸಕ್ತರು ವಿಚಾರಿಸುತ್ತಿದ್ದಾರೆ. ಇದೀಗ ಜನರಲ್ಲಿ ಆರೋಗ್ಯ ಕಾಳಜಿ ಹೆಚ್ಚಾಗಿದೆ. ಯೋಗದಿಂದ ದೈಹಿಕ, ಮಾನಸಿಕ ಸದೃಢತೆ ಸಿಗುತ್ತದೆ ಎಂಬ ಅಭಿಲಾಷೆಯೊಂದಿಗೆ ಹಲವರು ಯೋಗ ಶಿಕ್ಷಕರನ್ನು ಭೇಟಿ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ನಿತ್ಯ 30 ಸಾವಿರಕ್ಕೂ ಹೆಚ್ಚು ಜನರಿಂದ ಯೋಗ:

ಮೈಸೂರಿನಲ್ಲಿ ನಿತ್ಯ ಸುಮಾರು 30 ಸಾವಿರ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ಕೆಲವು ಬಡಾವಣೆಗಳು ಯೋಗ ಟೌನ್‌ಶಿಪ್‌ಗಳಾಗಿ ಪರಿವರ್ತನೆಯಾಗಿವೆ.
ಸದ್ಯ ಕೇಶವಮೂರ್ತಿ, ಶಂಕರನಾರಾಯಣ ಜೋಯಿಸ್, ಬಿಎನ್‌ಎಸ್ ಅಯ್ಯಂಗಾರ್ ಮೈಸೂರಿನಲ್ಲಿರುವ ಹಿರಿಯ ಯೋಗ ಗುರುಗಳಾಗಿದ್ದಾರೆ. ಜತೆಗೆ ರಾಘವೇಂದ್ರ ಪೈ, ಡಾ.ಯೋಗ ಗಣೇಶ್‌ಕುಮಾರ್, ಜಲೇಂದ್ರ ಕುಮಾರ್, ಶ್ರೀಹರಿ, ಅನಂತು, ಶಶಿಕುಮಾರ್, ಎಂ.ಎಸ್.ರಮೇಶ್‌ಕುಮಾರ್, ಎಚ್.ಟಿ.ಭಾಸ್ಕರ್, ಗೀತಾ ಕುಮಾರ್, ಎಚ್.ಪಿ.ನವೀನ್‌ಕುಮಾರ್ ಸೇರಿದಂತೆ ಅನೇಕರು ಯೋಗ ಪಸರಿಸುವ ಕೆಲಸ ಮಾಡುತ್ತಿದ್ದಾರೆ.
ಯೋಗ ಪರಂಪರೆ ಹೊಂದಿರುವ ಮೈಸೂರಿನಲ್ಲೀಗ ಮೈಸೂರು ವಿವೇಕಾನಂದ ಯೋಗ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಹಿಮಾಲಯ ಯೋಗ ಫೌಂಡೇಷನ್, ಮೈಸೂರು ಯೋಗ ಒಕ್ಕೂಟ, ಮಾರುತಿ ಯುವ ಕೇಂದ್ರ, ವೈಎಸ್‌ಎಫ್, ಜಿಎಸ್‌ಎಸ್ ಯೋಗ ಫೌಂಡೇಷನ್, ಭಾರತ್ ಸ್ವಾಭಿಮಾನಿ ಟ್ರಸ್ಟ್, ಬಾಬಾ ರಾಮದೇವ್ ಯೋಗ, ಪತಂಜಲಿ ಸೇರಿದಂತೆ ನೂರಾರು ಯೋಗ ಕೇಂದ್ರಗಳಿದ್ದು, ಯೋಗ ಪ್ರಚಾರ ಮಾಡುತ್ತಿವೆ.

ವರ್ಚುವಲ್ ಯೋಗಕ್ಕೆ ಡಿಮಾಂಡ್:

ಮೈಸೂರಿನಲ್ಲಿ ವಿದೇಶಿಗರು ಸಾಕಷ್ಟು ಸಂಖ್ಯೆಯಲ್ಲಿ ಯೋಗ ಕಲಿಯಲು ಬರುತ್ತಾರೆ. ಯುಎಸ್, ಕತಾರ್, ದುಬೈ, ಚೀನಾ, ಬ್ರಿಟನ್‌ನಿಂದಲೂ ಸಾಕಷ್ಟು ಜನ ಯೋಗ ಕಲಿತು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ಇಂದಿಗೂ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ವಿದೇಶಿಗರು ಮೈಸೂರಿನಲ್ಲಿ ಯೋಗ ಕಲಿಕೆಯಲ್ಲಿ ತೊಡಗಿದ್ದಾರೆ. ಇದೀಗ ಕೆಲವು ದೇಶದ ನಾಗರಿಕರು ಆನ್‌ಲೈನ್ ಮೂಲಕ ನಿತ್ಯ ಯೋಗ ಕಲಿಯುತ್ತಿದ್ದಾರೆ. ಲಿಂಕ್ ಮೂಲಕ ಕುಳಿತ ಜಾಗದಿಂದಲೇ ಯೋಗಾಭ್ಯಾಸ ಮಾಡುತ್ತಿರುವುದು ವಿಶೇಷ.
"

ಮೈಸೂರಿನ ಅರಮನೆ ಅಂಗಳದಲ್ಲಿ ಆಯೋಜಿಸಿದ್ದ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಯೋಗ ಮಾಡಿದ ಬಳಿಕ ಮೈಸೂರಿನ ಯೋಗ ಪರಂಪರೆ ಪ್ರಪಂಚದಲ್ಲಿ ಮತ್ತಷ್ಟು ಪ್ರಜ್ವಲಿಸಲು ಶುರು ಮಾಡಿತ್ತು. ಇದೀಗ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಳಿಕವೂ ಯೋಗ ಕಲಿಯುವವರು ಹಾಗೂ ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕರಿಗೆ ಯೋಗದ ಬಗೆಗಿನ ಭಾವನೆ ಬದಲಾಗುತ್ತಿದ್ದು, ಯೋಗವನ್ನು ಪೂಜ್ಯ ಭಾವನೆಯಲ್ಲಿ ನೋಡಲು ಆರಂಭಿಸಿದ್ದಾರೆ. ವಿದೇಶಿಗರಿಂದ ವರ್ಚುವಲ್ ಯೋಗಕ್ಕೂ ಡಿಮಾಂಡ್ ಬಂದಿದೆ.

— ಎಚ್.ಪಿ.ನವೀನ್‌ಕುಮಾರ್, ಯೋಗಗುರು


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net