ಬಳಸಿದರಷ್ಟೇ ಭಾಷೆ ಉಳಿಯಲು ಸಾಧ್ಯ : ಚುಟಕು ಕವಿ ಎಚ್.ದುಂಡಿರಾಜ್ ಅಭಿಮತ

ಚುಟುಕು ಕವಿ ಎಚ್.ಡುಂಡಿರಾಜ್
ಚುಟುಕು ಕವಿ ಎಚ್.ಡುಂಡಿರಾಜ್
Published on

ಪ್ರಮುಖ ಮುಖ್ಯಾಂಶಗಳು

  • ಭಾಷೆ ಬೆಳೆಯಬೇಕಾದರೆ ಅದು ಸತತ ಬಳಕೆಯಾಗಬೇಕು
  • ಕನ್ನಡಿಗರು ಎಲ್ಲೇ ಇದ್ದರೂ ತಮ್ಮ ಭಾಷೆಯ ಬಗ್ಗೆ ಅಭಿಮಾನ ಇರಬೇಕು
ಮೈಸೂರು: ಯಾವುದೇ ಭಾಷೆ ಬಳಕೆಯಿಂದ ಮಾತ್ರ ಅದು ಉಳಿಯಲು ಸಾಧ್ಯ ಎಂದು ಚುಟುಕು ಕವಿ ಎಚ್.ಡುಂಡಿರಾಜ್ ಅಭಿಪ್ರಾಯಪಟ್ಟರು.
ಕನ್ನಡ ಉಪನ್ಯಾಸಕರ ವೇದಿಕೆಯಿಂದ ಸರಸ್ವತಿಪುರಂನ ವಿಜಯ ವಿಠ್ಠಲ ಪಿಯು ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಹಬ್ಬ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಬೆಳೆಯಬೇಕಾದರೆ ಅದು ಸತತ ಬಳಕೆಯಾಗಬೇಕು. ಇದರಿಂದ ಯಾವುದೆ ಭಾಷೆ ಉಳಿಯಲು, ಬೆಳೆಯಲು ಸಾಧ್ಯ. ಬಳಕೆ ಮಾಡದಿದ್ದಾಗ ಎಷ್ಟೇ ದೊಡ್ಡ ಭಾಷೆಯಾದರೂ ಉಳಿಯುವುದಿಲ್ಲ ಎಂದರು. 
ಸಾಹಿತ್ಯ, ಪತ್ರಿಕೆ ಓದುವುದರಿಂದ ಸಾಹಿತ್ಯಾಭಿಮಾನ ಹೆಚ್ಚಾಗಿ ಕನ್ನಡ ಭಾಷೆ ಬೆಳೆಯಲಿದೆ. ವ್ಯಾವಹಾರಕ್ಕೆ ಮಾತೃಭಾಷೆಯನ್ನೇ ಬಳಸಬೇಕು, ಕನ್ನಡಿಗರು ಎಲ್ಲೇ ಇದ್ದರೂ ತಮ್ಮ ಭಾಷೆಯ ಬಗ್ಗೆ ಅಭಿಮಾನ ಇರಬೇಕು ಎಂದರು.
ಬೋಧನೆ ಜತೆಗೆ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದು ಶಿಕ್ಷಕರ ಕರ್ತವ್ಯ. ಜತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. 
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಎಂ.ಪಿ.ನಾಗಮ್ಮ ಮಾತನಾಡಿ, ಕನ್ನಡ ಜ್ಞಾನ, ಬದುಕನ್ನು ನೀಡಿದ ಭಾಷೆಯಾಗಿದೆ. ಕನ್ನಡ ಸುಮಧುರ, ಸುಲಲಿತವಾದ ಭಾಷೆಯಾಗಿದೆ. ಶ್ರೇಷ್ಠ ಕವಿಗಳು, ಜ್ಞಾನಿಗಳನ್ನು ಕನ್ನಡ ನೀಡಿದೆ. ಆದ್ದರಿಂದ ಕನ್ನಡಿಗರು ಜ್ಞಾನದಲ್ಲಿ ಸಮೃದ್ಧರಾಗಿದ್ದಾರೆ. ಭಾಷೆಯನ್ನು ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದರು.
ವೇದಿಕೆ ಅಧ್ಯಕ್ಷ ಕ್ಯಾತಮಾರನಹಳ್ಳಿ ಎಂ.ಮಹೇಶ, ಪ್ರಧಾನ ಕಾರ್ಯದರ್ಶಿ ಪಿ.ಕೆಂಪಯ್ಯ, ಖಜಾಂಚಿ ಉಮೇಶ್ ಬೇವಿನಹಳ್ಳಿ, ವಿಜಯವಿಠಲ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್, ಬಿ.ಮಟಕೆರೆ ಸರ್ಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಸಂತೋಷ ಚೊಕ್ಕಾಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net