ವಿಜೃಂಭಣೆಯ ಗ್ರಾಮದೇವತೆ ಹಬ್ಬ

ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿ, ಕೆಂಪನಕೊಪ್ಪಲು, ಹಳ್ಳದಕೊಪ್ಪಲು ಮತ್ತು ಮಾರಿಗುಡಿಕೊಪ್ಪಲು ಗ್ರಾಮ ದೇವತೆ ಮಾರಮ್ಮ ದೇವರ ಉತ್ಸವ ಜರುಗಿತು.
ಕೆ.ಆರ್.ನಗರ ತಾಲೂಕಿನ ಕಾಳೇನಹಳ್ಳಿ, ಕೆಂಪನಕೊಪ್ಪಲು, ಹಳ್ಳದಕೊಪ್ಪಲು ಮತ್ತು ಮಾರಿಗುಡಿಕೊಪ್ಪಲು ಗ್ರಾಮ ದೇವತೆ ಮಾರಮ್ಮ ದೇವರ ಉತ್ಸವ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • village festival
ಕೆ.ಆರ್.ನಗರ: ಗ್ರಾಮ ದೇವತೆ ಮಾರಮ್ಮ ದೇವರ ಉತ್ಸವವನ್ನು ತಾಲೂಕಿನ ಕಾಳೇನಹಳ್ಳಿ, ಕೆಂಪನಕೊಪ್ಪಲು, ಹಳ್ಳದಕೊಪ್ಪಲು ಮತ್ತು ಮಾರಿಗುಡಿಕೊಪ್ಪಲು ಗ್ರಾಮಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಭಾನುವಾರ ಸಂಜೆ ದೇವರ ಉತ್ಸವ ಮೂರ್ತಿಗೆ ಹಳೆ ಎಡತೊರೆಯ ಕಾವೇರಿ ನದಿಯಲ್ಲಿ ಗಂಗೆಪೂಜೆ ನೆರವೇರಿಸಲಾಯಿತು. ನಂತರ ಅಲಂಕೃತಗೊಂಡ ತೆರೆದ ವಾಹನದಲ್ಲಿ ಕೆ.ಆರ್.ನಗರದ ವಿವಿ ರಸ್ತೆ ಮೂಲಕ ಮಾರಿಗುಡಿಕೊಪ್ಪಲು ಗ್ರಾಮಕ್ಕೆ ತರಲಾಯಿತು. ತಮಟೆ, ಮಂಗಳವಾದ್ಯ, ದೇವರ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ದೇವರ ಉತ್ಸವ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಸೋಮವಾರ ಬೆಳಿಗ್ಗೆ 4 ಗ್ರಾಮಗಳಲ್ಲಿ ಇರುವ ಮಾರಮ್ಮ ತಾಯಿ ದೇವಾಲಯಕ್ಕೆ ತಂಬಿಟ್ಟು ಆರತಿಯೊಂದಿಗೆ ತೆರಳಿದ ಹೆಣ್ಣು ಮಕ್ಕಳು ದೇವತೆಗೆ ವಿವಿಧ ನೈವೇದ್ಯಗಳನ್ನು ಅರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಹಿನ್ನೆಲೆಯಲ್ಲಿ ನಾಲ್ಕು ಗ್ರಾಮಗಳು ವಿದ್ಯುತ್ ದೀಪಾಲಂಕಾರ ಮತ್ತು ತಳಿರು ತೋರಣದಿಂದ ಶೃಂಗಾರಗೊಂಡಿದ್ದವು.
ಉತ್ತಮ ಮಳೆ ಬೆಳೆಯಾಗಿ ಗ್ರಾಮಗಳು ಸುಭಿಕ್ಷತೆಯಿಂದಿರಬೇಕೆಂಬ ಉದ್ದೇಶದಿಂದ ಹಿಂದಿನಿಂದಲೂ ಮುಂಗಾರು ಆರಂಭಗೊಳ್ಳುವ ಜೂನ್ ತಿಂಗಳಲ್ಲಿ ಈ ಹಬ್ಬವನ್ನು ಆಚರಿಸುತ್ತಿರುವುದು ವಾಡಿಕೆಯಾಗಿದೆ.
ಗುಡ್ಡಪ್ಪ ನಾಗೇಗೌಡ ನೇತೃತ್ವದಲ್ಲಿ ಜರುಗಿದ ಪೂಜೆಯಲ್ಲಿ ನಾಲ್ಕು ಗ್ರಾಮಗಳ ಮುಖಂಡರು, ಗ್ರಾಮಸ್ಥರು, ಯುವಕರು ಭಕ್ತಿಯಿಂದ ಪಾಲ್ಗೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net