ತಾಳೆಗರಿ ಹಸ್ತಪ್ರತಿಗಳಿಗೆ ಡಿಜಿಟಲ್ ಸ್ಪರ್ಶ

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಪ್ರಾಚೀನ ತಾಳೆಗರಿಯ ಹಸ್ತಪ್ರತಿ
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಪ್ರಾಚೀನ ತಾಳೆಗರಿಯ ಹಸ್ತಪ್ರತಿ
Published on

ಪ್ರಮುಖ ಮುಖ್ಯಾಂಶಗಳು

  • ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಿಂದ ಕಾಯಕಲ್ಪ
  • 1 ಕೋಟಿ ರೂ. ವೆಚ್ಚದ ಯೋಜನೆ
  • 2024-25ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಘೋಷಿಸಿದ್ದ ಸಿದ್ದರಾಮಯ್ಯ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ನಾಡಿನ ಸಂಸ್ಕೃತಿಯ ಭಂಡಾರ, ಸಾಹಿತ್ಯ ಸೃಷ್ಟಿಶೀಲ ಉತ್ಪನ್ನಗಳಾಗಿರುವ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಪ್ರಕ್ರಿಯೆಯನ್ನು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಕೈಗೆತ್ತುಕೊಂಡಿದೆ.
ಪಾರಂಪರಿಕ ಸಂರಕ್ಷಣಾ ಕ್ರಮದೊಂದಿಗೆ ಮಾಹಿತಿ ತಂತ್ರಜ್ಞಾನದ ಮೂಲಕ ಸಮರ್ಪಕವಾಗಿ ಹಾಗೂ ಬಹುಕಾಲದ ಪ್ರಯೋಜನಕ್ಕಾಗಿ ಡಿಜಿಟಲ್ ರೂಪದಲ್ಲಿ ಹಸ್ತಪ್ರತಿಗಳನ್ನು ಸಂಗ್ರಹಿಸುವ ಕಾರ್ಯ ಇದಾಗಿದೆ. 
ಶೈಕ್ಷಣಿಕ ಶಿಸ್ತುಗಳು ವೈಜ್ಞಾನಿಕ ಸ್ವರೂಪ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಹಸ್ತಪ್ರತಿಗಳಿಗೂ ಆಧುನಿಕ ಕಾಯಕಲ್ಪ ಕೊಡಲಾಗುತ್ತಿದೆ. ಇದು ನಿಜಕ್ಕೂ ಉತ್ತಮ ಬೆಳವಣಿಗೆ.
ಹಸ್ತಪ್ರತಿ(ಕೈಬರಹದ ಪ್ರತಿಗಳು) ಡಿಜಿಟಲೀಕರಣಗೊಳ್ಳುವುದರಿಂದ ಮಹತ್ತರವಾದ ಪ್ರಯೋಜನ ದೊರೆಯಲಿದೆ. ಅಕಾರಾದಿ ಪದಪ್ರಯೋಗ ಕೋಶ, ವಸ್ತುಕೋಶ, ಭಾಷಾ ಪ್ರಯೋಗ ಸಿದ್ಧಪಡಿಸಲು ಅನುಕೂಲವಾಗಲಿದೆ. 
ಈ ರೀತಿ ಕಾರ್ಯದಿಂದಾಗಿ ಹಸ್ತಪ್ರತಿಗಳ ಬಹುಮುಖ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಹಸ್ತಪ್ರತಿಗಳ ಪರಂಪರಾಗತ ತಿಳಿವಳಿಕೆ ಮತ್ತು ಅಧ್ಯಯನಗಳ ಮುಂದುವರಿಕೆಯಾಗಿ ಆಧುನಿಕ ವಿಧಿವಿಧಾನ ಅನ್ವಯಿಸಿಕೊಳ್ಳುವುದರೊಂದಿಗೆ ನವ ದೃಷ್ಟಿಕೋನ ಕಂಡುಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮಹತ್ವ ಹೆಜ್ಜೆ ಇಟ್ಟಿದೆ.

ಹಸ್ತಪ್ರತಿಗಳ ಸಂರಕ್ಷಣೆ ಮಾಡಿ ಡಿಜಿಟಲೀಕರಣ ಕೆಲಸ

ಮೈಸೂರು ವಿಶ್ವವಿದ್ಯಾಲಯದಲ್ಲಿ ತಾಳೆಗರಿಯ ಹಸ್ತಪ್ರತಿಗಳ ಸಂರಕ್ಷಣೆ ಮಾಡಿ ಡಿಜಿಟಲೀಕರಣ ಕೆಲಸ ಎರಡು ಕಡೆ ನಡೆದಿದೆ. ಪ್ರತಿಷ್ಠಿತ ಪ್ರಾಚ್ಯವಿದ್ಯಾ ಸಂಶೋಧನಾ ಸಂಸ್ಥೆಯಿಂದ ಐತಿಹಾಸಿಕ ಮಹತ್ವ ಪಡೆದಿರುವ ಹಳೇ ಕಾಲದ 70 ಸಾವಿರ ಹಸ್ತಪ್ರತಿಗಳ ಡಿಜಿಟಲೀಕರಣ ಪರಿವರ್ತನೆ ಕೆಲಸ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಇವುಗಳೇ ಸಂಸ್ಕೃತ ಹಸ್ತಪ್ರತಿಗಳು. ಕನ್ನಡ ಭಾಷೆಯಲ್ಲಿರುವ ಹಸ್ತಪ್ರತಿಗಳು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಬಳಿ ಇವೆ. ಇವುಗಳನ್ನು ಈಗ ಡಿಜಿಟಲ್ ಸ್ವರೂಪಕ್ಕೆ ಇಳಿಸಲಾಗುತ್ತಿದೆ. ಈ ಉಪಕ್ರಮದಿಂದ ಮುಂದಿನ ದಿನಗಳಲ್ಲಿ ಹಸ್ತಪ್ರತಿ, ತಾಳೆಪತ್ರಗಳನ್ನು ಸುಲಭವಾಗಿ ಓದಲು, ಸಂಶೋಧನೆ ನಡೆಸಲು ದೊಡ್ಡ ಆಕರವೇ ಸಿಗಲಿದೆ.
ಸಿದ್ದರಾಮಯ್ಯ ಅವರಿಂದ ಯೋಜನೆ 
2024-25ನೇ ಸಾಲಿನ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಮಾಡಿದ್ದ ಹಣಕಾಸು ಸಚಿವರೂ ಆಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಘೋಷಣೆ ಮಾಡಿದ್ದರು. ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆಯನ್ನು 1 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದರು. ಇದಾಗಿ 2 ವರ್ಷ ತರುವಾಯ ಸದ್ಯಕ್ಕೆ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಉಳಿದ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ. 

ಸುಮಾರು 5,821 ಹಸ್ತಪ್ರತಿ

ಈ ಅನುದಾನದಿಂದ ಹಸ್ತಪ್ರತಿಗಳ ಡಿಜಿಟಲೀಕರಣ ಕೆಲಸವನ್ನು ಆರಂಭಿಸಿದ್ದು ಮೊದಲ ಹಂತವಾಗಿ ಇವುಗಳನ್ನು ಸ್ವಚ್ಛಗೊಳಿಸಿ ಮುಂದಿನ ಹಂತಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಂಡಾರದಲ್ಲಿ ಸುಮಾರು 5,821 ಹಸ್ತಪ್ರತಿಗಳಿವೆ. ಇಲ್ಲಿ ಕ್ರಿಸ್ತಶಕ 850ರ ಆಸುಪಾಸಿನಲ್ಲಿ ರಚಿತವಾದ ಕನ್ನಡದ ಪ್ರಾಚೀನ ಉಪಲಬ್ಧ ಕೃತಿ ಕವಿರಾಜ ಮಾರ್ಗದಿಂದ ಮೊದಲ್ಗೊಂಡು 19ನೇ ಶತಮಾನದವರೆಗೆ ರಚಿತವಾದ ಹಸ್ತಪತ್ರಿಗಳೂ ಇವೆ.

 ಗ್ರಂಥಗಳ ಖಜಾನೆಯೇ ಇಲ್ಲಿದೆ.

ಇಲ್ಲಿರುವ ಅತ್ಯಂತ ಹಳೇ ಹಸ್ತಪ್ರತಿ ಕವಿರಾಜಮಾರ್ಗವಾಗಿದೆ ಎಂಬುದು ವಿಶೇಷ. ಇದು ಕ್ರಿಸ್ತಶಕ 1342ರಲ್ಲಿ ಲಿಪೀಕರಣಗೊಂಡಿದೆ. ಪಂಪ, ರನ್ನ, ಪೊನ್ನ, ಹರಿಹರ, ರಾಘವಾಂಕ, ಕುಮಾರವ್ಯಾಸ, ದುರ್ಗಸಿಂಹ ಮುಂತಾದವರಿಂದ ರಚಿತವಾದ ಕಾವ್ಯಗಳಿವೆ. ಇಲ್ಲಿ ಕಾವ್ಯ ವ್ಯಾಕರಣ, ಛಂದಸ್ಸು, ಗದ್ಯ, ನಾಟಕಗಳು, ರೂಪಾಂತರ ನಾಟಕಗಳು, ಆಯುರ್ವೇದ, ಅಶ್ವಶಾಸ್ತ್ರ, ಗಜಶಾಸ್ತ್ರ, ಪಶು ವೈದ್ಯ, ವೃಕ್ಷ ಆಯುರ್ವೇದ, ವಿಷ ವೈದ್ಯ, ಜಲವಾಸ್ತು, ರತ್ನ ಶಾಸ್ತ್ರ, ಖಡ್ಗ ಶಾಸ್ತ್ರ, ಬಾಣಗಾರಿಕೆ, ಇತಿಹಾಸ, ವಾಸ್ತು ಮತ್ತು ಜ್ಯೋತಿಷ ಇತ್ಯಾದಿಗಳಿಗೆ ಸಂಬಂಧಿಸಿದ ಗ್ರಂಥಗಳ ಖಜಾನೆಯೇ ಇಲ್ಲಿದೆ.

ಬಹುಮುಖ ಅಧ್ಯಯನಕ್ಕೆ ಅವಕಾಶ

ಮಠ-ಮಾನ್ಯಗಳಲ್ಲಿ ಲೆಕ್ಕದ ಪುಸ್ತಕಗಳಾಗಿದ್ದ ಕಡತಗಳು ಇಲ್ಲಿವೆ. ಕುಮಾರವ್ಯಾಸ ಭಾರತ, ಪ್ರಭಾವತಿ ಪರಿಣಯ, ಸೂಪ ಶಾಸ್ತ್ರ ಭಾಷಾಭೂಷಣ, ಅಶ್ವಪರೀಕ್ಷೆ, ಚದುರಂಗ ಚಕ್ರ, ಉದ್ಧಾರಣ ಪಟಲಗಳು, ಹಲ್ಲಿಬಿದ್ದ ಶಕುನ, ಬಸವ ಪುರಾಣ ವಚನಗಳು ಮುಂತಾದ ಹಲವು ಮಹತ್ವದ ಕೃತಿಗಳು ಹಸ್ತಪ್ರತಿರೂಪದಲ್ಲಿ ಇಲ್ಲಿ ಸಂಗ್ರಹಗೊಂಡಿವೆ. ಇವುಗಳೆಲ್ಲ ಡಿಜಿಟಲೀಕರಣಗೊಂಡು ಹಸ್ತಪ್ರತಿಗಳ ಬಹುಮುಖ ಅಧ್ಯಯನಕ್ಕೆ ಅವಕಾಶ ಸಿಗಲಿದೆ. ಇವುಗಳಲ್ಲಿ ಅಡಗಿರುವ ಪರಂಪರಾಗತ ತಿಳಿವಳಿಕೆ, ಅಧ್ಯಯನಗಳ ಮುಂದುವರಿಕೆಯಾಗಿ ಆಧುನಿಕ ವಿಧಿವಿಧಾನ ಅನ್ವಯಿಸಬಹುದಾಗಿದ್ದು, ಇದರಿಂದಾಗಿ ಹೊಸ ದೃಷ್ಟಿಕೋನ ಕಂಡುಕೊಳ್ಳಬಹುದಾಗಿದೆ.
ಹಸ್ತಪ್ರತಿಗಳು ಇತಿಹಾಸ, ಸಂಸ್ಕೃತಿ, ಪ್ರಾಚೀನ ಜ್ಞಾನದ ಅಮೂಲ್ಯ ಆಕರ. ಧರ್ಮ, ಸಾಹಿತ್ಯ, ವಿಜ್ಞಾನ, ಕಲೆಗೆ ಸಂಬಂಧಿಸಿದ ಮಾಹಿತಿ ನೇರವಾಗಿ ತಿಳಿಸುತ್ತವೆ. ಜತೆಗೆ, ಭಾಷೆಯ ಬೆಳವಣಿಗೆಯನ್ನು ಅಧ್ಯಯನ ಮಾಡಲು ಮತ್ತು ನಮ್ಮ ಪೂರ್ವಜರ ಜೀವನ ಪದ್ಧತಿ ಅರ್ಥಮಾಡಿಕೊಳ್ಳಲು ಸಹ ಅನುಕೂಲವಾಗುತ್ತದೆ. ಈ ಆಧುನಿಕ ಪ್ರಕ್ರಿಯೆಯಿಂದ ಹಸ್ತಪ್ರತಿಗಳನ್ನು ಸಾಮಾಜಿಕ, ಸಾಂಸ್ಕೃತಿಕ ನೆಲೆಗಟ್ಟುಗಳ ಮೂಲಕ ಸೂಕ್ಷ್ಮತರದ ಅಧ್ಯಯನ ಕೈಗೊಳ್ಳಬಹುದಾಗಿದೆ.

ವಿಶೇಷ ವರ್ಣಚಿತ್ರ ಹಸ್ತಪ್ರತಿಗಳು

ಇಲ್ಲಿಯ ಹಸ್ತಪ್ರತಿ ಭಂಡಾರದಲ್ಲಿಯ ಕ್ರಮಾಂಕ 572ನೇ ಅಶ್ವಪರೀಕ್ಷೆ ಎಂಬ ಹಸ್ತಪ್ರತಿಯು ಚಾಮರಾಜ ಒಡೆಯರ ಕಾಲದಲ್ಲಿ ರಚಿತವಾಗಿದೆ. ಅಶ್ವ ಪರೀಕ್ಷೆಯ ಲಕ್ಷಣಗಳ ಬಗೆಗಿನ 203 ಉಲ್ಲೇಖಗಳಿವೆ. ಆರಂಭದ 105 ಉಲ್ಲೇಖಗಳಿಗೆ ವರ್ಣರಂಜಿತ ಕುದುರೆಯ ಚಿತ್ರಗಳೂ ಇವೆ. ಆ ಚಿತ್ರಗಳಿಗೆ ಅನುಗುಣವಾಗಿ ವಿವರಣೆ ಕೊಡಲಾಗಿದೆ.
ಅಶ್ವವೈದ್ಯ ಸಚಿತ್ರ ಎಂಬ ಇನ್ನೊಂದು ಹಸ್ತಪ್ರತಿ ಇಲ್ಲಿದ್ದು, 84 ಪತ್ರಗಳಿವೆ. ಈ ಪತ್ರಗಳಲ್ಲಿ ಕುದುರೆಗೆ ಬರುವ ರೋಗಗಳು, ಇಲಾಜನ್ನು ಕುರಿತು ವೈವಿಧ್ಯಮಯವಾದ ಚಿತ್ರಗಳೊಂದಿಗೆ ವಿವರಿಸಲಾಗಿದೆ. ಹಸ್ತಪ್ರತಿಯಲ್ಲಿ ಏಕಪ್ರಕಾರವಾಗಿ ವರ್ಣ ಚಿತ್ರ ಹಸ್ತಪ್ರತಿಗಳು ಸಾಹಿತ್ಯಕ ಮೌಲ್ಯದೊಂದಿಗೆ ತಮ್ಮಲ್ಲಿರುವ ಚಿತ್ರ, ವರ್ಣಚಿತ್ರ ರಚನೆಗಳಿಂದಾಗಿ ಚಾರಿತ್ರಿಕ, ಸಾಂಸ್ಕೃತಿಕ, ಕಲಾ ಪರಂಪರೆಯ ಮೌಲ್ಯ ವ್ಯಕ್ತ ಪಡಿಸಿವೆ.

ಲಭ್ಯ ಇರುವ ಹಸ್ತಪ್ರತಿಗಳ ವಿವರ

1.ತಾಳೆಗರಿಯ ಹಸ್ತಪ್ರತಿಗಳು 2, 914
2.ಕಾಗದದ ಹಸ್ತಪ್ರತಿಗಳು 1,685
3.ಮೈಕ್ರೋಫಿಲಂಗಳು 1,186
4.ಕಡತಗಳು 36
ಒಟ್ಟು 5, 821
ಹಸ್ತಪ್ರತಿಗಳ ಡಿಜಿಟಲೀಕರಣ ಸುದೀರ್ಘ ಪಯಣ. ಇದಕ್ಕೆ ಬಹಳಷ್ಟ ಸಮಯ ತೆಗೆದುಕೊಳ್ಳುತ್ತದೆ. ಹಸ್ತಪ್ರತಿಯನ್ನು ಸೂಕ್ತವಾಗಿ ಸ್ವಚ್ಛಗೊಳಿಸಿ, ಹೈ-ರೆಸಲ್ಯೂಷನ್ ಸ್ಕ್ಯಾನಿಂಗ್ ಅಥವಾ ಕ್ಯಾಮರಾದಿಂದ ಚಿತ್ರ ತೆಗೆಯಲಾಗುತ್ತದೆ. ಆ ಚಿತ್ರಗಳನ್ನು ಪಿಡಿಎಫ್ ಸೇರಿದಂತೆ ಇತರ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸಲಾಗುತ್ತದೆ.
1. ಪ್ರಾಥಮಿಕ ಸಿದ್ಧತೆ ಮತ್ತು ಶುಚಿಗೊಳಿಸುವಿಕೆ ಮೌಲ್ಯಮಾಪನ
2. ಡಿಜಿಟಲ್ ಚಿತ್ರೀಕರಣ
3. ಸಂಸ್ಕರಣೆ ಮತ್ತು ಫೈಲ್ ಮ್ಯಾನೇಜ್ಮೆಂಟ್
4. ಸುರಕ್ಷಿತ ಸಂಗ್ರಹಣೆ
"

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ರಾಜ್ಯ ಸರ್ಕಾರದಿಂದ ಈಗಾಗಲೇ 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಕೆಲಸ ಪ್ರಾರಂಭಿಸಲಾಗಿದೆ.

— ಪ್ರೊ.ಎಂ.ನಂಜಯ್ಯ ಹೊಂಗನೂರು, ನಿರ್ದೇಶಕ, ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net