ನಗರದ ಚಂಪ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾನೂನಿನ ಬಹುಮುಖ ಆಯಾಮ ಸರಣಿ ಉಪನ್ಯಾಸ ಮಾಲಿಕೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ.ಅಮರನಾಥ್ ಉದ್ಘಾಟಿಸಿದರು. ಪ್ರಾಂಶುಪಾಲರಾದ ಆಸ್ಮತ್ತುನ್ನೀಸಾ, ಭರತ್ ರಾಜ್ ಇತರರಿದ್ದರು.
ಮೈಸೂರು: ಕಾನೂನು ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ವಿದ್ಯಾರ್ಥಿ ದಿಸೆಯಲ್ಲೇ ಆಳವಾದ ಅಧ್ಯಯನ ಮಾಡಿದರೆ ಭವಿಷ್ಯ ಸುಂದರವಾಗಿರಲಿದೆ ಎಂದು ಹಿರಿಯ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಕೆ.ಅಮರನಾಥ್ ಹೇಳಿದರು.
ನಗರದ ಚಂಪ ಸ್ಕೂಲ್ ಆಫ್ ಲಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾನೂನಿನ ಬಹುಮುಖ ಆಯಾಮ ಸರಣಿ ಉಪನ್ಯಾಸ ಮಾಲಿಕೆಯನ್ನು ಉದ್ಘಾಟಿಸಿ ಮಾತನಾಡಿ, ಹಿಂದೆ ಬೇರೆ ಯಾವುದೇ ಆಯ್ಕೆಗಳು ಇಲ್ಲದವರು ಎಲ್‌ಎಲ್‌ಬಿ ಮಾಡುತ್ತಾರೆ ಎಂಬ ವಾತಾವರಣ ಇತ್ತು.
ಆದರೆ ಈಗ ಕಾನೂನಿನ ವ್ಯಾಪ್ತಿ, ಮಹತ್ವ ಸಾಕಷ್ಟು ವಿಶಾಲವಾಗಿದೆ. ವಿದ್ಯಾರ್ಥಿಯಾಗಿದ್ದಾಗಲೇ ಸೆಕ್ಷನ್‌ಗಳ ಓದು, ಬರವಣಿಗೆ, ಮನನದ ಮೂಲಕ ಕಾಯ್ದೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಬೇಕು. ಇದರಿಂದ ಮುಂದಿನ ವೃತ್ತಿ ಜೀವನ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ರಾಷ್ಟ್ರ ಮಟ್ಟದಿಂದ ತಾಲೂಕು ಮಟ್ಟದವರೆಗೂ ಕಾನೂನು ಸೇವಾ ಪ್ರಾಧಿಕಾರಗಳ ರಚನೆಯಾಗಿವೆ. ಮಹಿಳೆಯರು, ಮಕ್ಕಳು, ಎಸ್ಸಿ, ಎಸ್ಟಿ ಸಮುದಾಯ, ಅಸಹಾಯಕರು, ಬಡತನ ರೇಖೆಗಿಂತ ಕೆಳಗೆ ಇರುವ ಎಲ್ಲರಿಗೂ ಇಲ್ಲಿ ಉಚಿತ ಕಾನೂನಿನ ನೆರವು ದೊರೆಯಲಿದೆ.
ಇದರ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ಮುಖ್ಯವಾದದ್ದು. ಈ ನಿಟ್ಟಿನಲ್ಲಿ ಈಗಿನಿಂದಲೇ ಜನರಿಗೆ ಅನುಕೂಲ ಆಗುವ ರೀತಿಯ ಕೆಲಸಗಳನ್ನು ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಂಶುಪಾಲೆ ಆಸ್ಮತ್ತುನ್ನೀಸಾ, ಉಪನ್ಯಾಸಕ ಭರತ್ ರಾಜ್ ಇನ್ನಿತರರಿದ್ದರು.