ಈ ವೇಳೆ ಮಾತನಾಡಿದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಯುವಕರು ಪರಿಶ್ರಮ ಮತ್ತು ಕಂಪನಿಯ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಳ್ಳುವ ಮೂಲಕ ಉದ್ಯೋಗದಲ್ಲಿ ಮುಂದುವರಿಯಬೇಕು. ಉದ್ಯೋಗ ಸಿಕ್ಕ ಕೂಡಲೇ ಲಕ್ಷ ರೂ.ಗಳ ವೇತನ ನಿರೀಕ್ಷೆ ಇಟ್ಟುಕೊಳ್ಳಬೇಡಿ. ದೊರೆತ ವೇತನವನ್ನು ಮೌಲ್ಯವರ್ಧನೆ ಮಾಡುವ, ಹಿತಮಿತ ಖರ್ಚಿನೊಂದಿಗೆ ಉಳಿತಾಯ ಮಾಡುವುದನ್ನು ಕಲಿಯಿರಿ. ಉದ್ಯೋಗಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಎನ್ನುವುದಕ್ಕೆ ಉದಾಹರಣೆಯಾಗಿ ಈ ಉದ್ಯೋಗ ಮೇಳಕ್ಕೆ ಬೆಂಗಳೂರು, ಉಡುಪಿ, ಬೆಳಗಾವಿ, ಚಿತ್ರದುರ್ಗ ಮುಂತಾದ ಕಡೆಗಳಿಂದಲೂ ನಿರುದ್ಯೋಗಿಗಳು ಬಂದಿರುವುದೇ ಸಾಕ್ಷಿ. ಸ್ನೇಹಜೀವಿ ತಂಡ ತಮ್ಮ ಹುಟ್ಟುಹಬ್ಬಕ್ಕಾಗಿ ಅತ್ಯುತ್ತಮ ಸೇವೆ ನೀಡಿರುವುದು ಶ್ಲಾಘನೀಯ ಎಂದರು.