ದೂರ ಗ್ರಾಮದಲ್ಲಿ 51 ಮಿ.ಮೀ. ಮಳೆ ದಾಖಲು

 ಪಿರಿಯಾಪಟ್ಟಣ ತಾಲೂಕಿನ ಕಸಬಾ ಹೋಬಳಿ ಸತ್ಯಗಾಲ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು 2 ಹಸುಗಳು ಮೃತಪಟ್ಟಿರುವುದು.
ಪಿರಿಯಾಪಟ್ಟಣ ತಾಲೂಕಿನ ಕಸಬಾ ಹೋಬಳಿ ಸತ್ಯಗಾಲ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು 2 ಹಸುಗಳು ಮೃತಪಟ್ಟಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯದಲ್ಲೇ ಗರಿಷ್ಠ ಪ್ರಮಾಣದ ವರ್ಷಧಾರೆ
  • ಆರ್ಭಟದಿಂದ ಸುರಿದ ವರುಣ
ಜಿಲ್ಲೆಯಾದ್ಯಂತ ಶುಕ್ರವಾರ ತಡರಾತ್ರಿ ಭಾರಿ ಮಳೆಯಾಗಿದ್ದು, ಮೈಸೂರು ತಾಲೂಕಿನ ದೂರ ಗ್ರಾಮದಲ್ಲಿ ರಾಜ್ಯದಲ್ಲೇ ಗರಿಷ್ಠ 51 ಮಿ.ಮೀ. ದಾಖಲೆ ಮಳೆಯಾಗಿದೆ.
ತಡರಾತ್ರಿ ಸಿಡಿಲು, ಗುಡುಗು ಹಾಗೂ ಬಿರುಗಾಳಿ ಸಹಿತ ಸುರಿದ ಮಳೆ ಬಿಸಿಲಿನ ಬೇಗುದಿಯಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಜನರಿಗೆ ತಂಪೆರೆಯುವ ಜತೆಗೆ ಅನಾಹುತವನ್ನು ಸೃಷ್ಟಿಸಿತು.
ಗಾಳಿಯ ವೇಗದಷ್ಟೇ ಸಮನಾಗಿ ಮಳೆ ಸುರಿದ ಪರಿಣಾಮ, ನೂರಾರು ಮರ ಗಿಡಗಳು ಹಾಗೂ ಅಲ್ಲಲ್ಲಿ ಅಳವಡಿಸಿದ್ದ ಜಾಹೀರಾತು ದೊಡ್ಡ ಗಾತ್ರದ ಫಲಕಗಳು ನೆಲಕಚ್ಚಿವೆ.
ನಗರದ ಹಲವೆಡೆ 100ಕ್ಕೂ ಹೆಚ್ಚು ಮರ ಹಾಗೂ ಮರದ ಕೊಂಬೆಗಳು ಮುರಿದು ಬಿದ್ದು, ಅವಾಂತರ ಸೃಷ್ಟಿಯಾಯಿತು. ರಸ್ತೆಯಲ್ಲಿ ನಿಲ್ಲಿಸಿದ್ದ ಅನೇಕ ಕಾರುಗಳು ಹಾಗೂ ಬೈಕ್‌ಗಳ ಮೇಲೆ ಮರ ಬಿದ್ದ ಕಾರಣ ಜಖಂ ಗೊಂಡಿವೆ.
ಬಹುತೇಕ ಕಡೆ ನೆಲಕ್ಕುರುಳಿ ಸಂಚಾರಕ್ಕೆ ಅಡ್ಡಿಯಾಗಿದ್ದ ಮರಗಳ ಕೊಂಬೆಗಳನ್ನು ಪಾಲಿಕೆ ಸಿಬ್ಬಂದಿ ಶನಿವಾರ ಬೆಳಗ್ಗೆ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು. ಬಹುತೇಕ ಕಡೆ ವಿದ್ಯುತ್ ತಂತಿಗಳ ಮೇಲೆ ಮರಗಳ ಕೊಂಬೆ ಉರುಳಿದ ಪರಿಣಾಮ ಕೆಲಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಕೆಲವು ದಿನಗಳಿಂದ ನಗರದಲ್ಲಿ ಬಿಸಿಲಿನ ತಾಪ ದಾಖಲೆಯ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಇದದಿಂದ ಕಂಗೆಟ್ಟಿದ್ದ ಜನರಿಗೆ ವರುಣ ಸಿಂಚನ ತಣ್ಣನೆಯ ವಾತಾವರಣ ನಿರ್ಮಿಸಿತು. ತಡರಾತ್ರಿ 12.30ಕ್ಕೆ ಸಿಡಿಲಿನೊಂದಿಗೆ ಆರಂಭವಾದ ಜೋರು ಮಳೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಗಾಳಿಯೊಂದಿಗೆ ಸುರಿಯಿತು.

ಪೊಲೀಸ್ ಬಡಾವಣೆಯಲ್ಲಿ ಹೆಚ್ಚು ಹಾನಿ:

ನಗರದ ಪೊಲೀಸ್ ಬಡಾವಣೆಯಲ್ಲಿ 100ಕ್ಕೂ ಹೆಚ್ಚು ಮರ ಹಾಗೂ 40ಕ್ಕೂ ಹೆಚ್ಚು ಜಾಹೀರಾತು ಫಲಕಗಳು ಧರೆಗೆ ಉರುಳಿವೆ. ಇನ್ನುಳಿದಂತೆ ಜೆ.ಪಿ.ನಗರ ಭಾಗದಲ್ಲಿ ಕಾರಿನ ಮೇಲೆ ಮರ ಉರುಳಿಬಿದ್ದ ಪರಿಣಾಮ, ಕಾರು ಭಾಗಶಃ ಜಖಂಗೊಡಿದೆ. ಪೊಲೀಸ್ ಬಡಾವಣೆಯಲ್ಲಿಯೂ ಕೂಡ ಕಾರಿನ ಮೇಲೆ ಮರ ಬಿದ್ದು ಮುಂಭಾಗಕ್ಕೆ ಗರಿಷ್ಠ ಪ್ರಮಾಣದ ಹಾನಿಯಾಗಿದೆ.
ಆಲನಹಳ್ಳಿ ಹಾಗೂ ಪೊಲೀಸ್ ಬಡಾವಣೆ ಕೂಡುವ ರಿಂಗ್ ರಸ್ತೆಯ ಸಿಗ್ನಲ್ ನಿಂದ ಜೆ.ಪಿ.ನಗರ ಬಡಾವಣೆವರೆಗೆ ರಿಂಗ್ ರಸ್ತೆ ವಿಭಜಕ ಜಾಗದಲ್ಲಿ ಇರುವ ದೊಡ್ಡ ಗಾತ್ರದ ಬೇವಿನ ಮರಗಳೇ ಬುಡಸಮೇತ ಉರುಳಿಬಿದ್ದಿವೆ. ಇನ್ನೂ ಕೆಲವೆಡೆ ಗಾಳಿಯ ರಭಸಕ್ಕೆ ರಂಬೆಗಳೇ ತುಂಡರಿಸಿ ಬಿದ್ದಿದ್ದು, ಆ ಮಾರ್ಗದ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಮಾತ್ರವಲ್ಲ, ಹೊಟೆಲ್, ರಿಯಲ್ಎಸ್ಟೇಟ್, ಆರೋಗ್ಯ ಸೇವೆ ಸೇರಿದಂತೆ ಇನ್ನಿತರೆ ವಿಷಯಗಳುಳ್ಳ ಜಾಹಿರಾತು ಫಲಕಗಳೂ ಕೂಡ ಗಾಳಿ ರಭಸಕ್ಕೆ ರುಳಿಬಿದ್ದಿವೆ.

ಸಿದ್ದಾರ್ಥನಗರ ಬಡಾವಣೆ ಹಾಗೂ ಲಲಿತಾದ್ರಿಪುರ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಂಬಗಳ ಮೇಲೆ ಭಾರಿ ಗಾತ್ರದ ಮರಗಳು ಬಿದ್ದ ಹಿನ್ನೆಲೆಯಲ್ಲಿ ತಂತಿ ತುಂಡರಿಸಿ ಇಡೀ ವಿದ್ಯುತ್ ಪೂರೈಕೆ ಜಾಲವೇ ಅಸ್ತವ್ಯಸ್ತವಾಗಿತ್ತು. ಪರಿಣಾಮ ಶುಕ್ರವಾರ ತಡರಾತ್ರಿ 12 ಗಂಟೆ ವೇಳೆಗೆ ಸ್ಥಗಿತಗೊಂಡ ವಿದ್ಯುತ್ ಸಂಪರ್ಕ ಶನಿವಾರ ಮಧ್ಯಾಹ್ನ ಎರಡು ಗಂಟೆ ವೇಳೆಗೆ ಸರಿಪಡಿಸಲಾಯಿತು.
ಗಾಳಿಯ ರಭಸಕ್ಕೆ ಪೊಲೀಸ್ ಬಡಾವಣೆಯ ಎರಡು ಮನೆಗಳ ಮಹಡಿಯ ಮೇಲಿನ ಛಾವಣಿ ಹಾರಿ ಹೋಗಿದೆ. ಮಾತ್ರವಲ್ಲ, ರಿಂಗ್ ರಸ್ತೆಯ ಬದಿಯಲ್ಲಿದ್ದ ಬೃಹತ್ ಗಾತ್ರದ ಅರಳಿ ಮರದ ಬಹುತೇಕ ರೆಂಭೆಗಳು ಮುರಿದು ಬಿದ್ದಿದ್ದರೆ, ನಿರ್ಮಾಣ ಹಂತದಲ್ಲಿರುವ ಎರಡು ಮನೆಗಳ ಕಾವಲುಗಾರರ ಶೆಡ್‌ಗಳ ಮೇಲ್ಚಾವಣಿ ಗಾಳಿಗೆ ತೂರಿ ಹೋಗಿವೆ.

ಮಹಿಳೆ, ಎರಡು ಹಸು ಹಾಗೂ ಮಹಿಳೆ ಸಾವು:

ಪಿರಿಯಾಪಟ್ಟಣ ತಾಲೂಕಿನ ಕಸಬಾ ಹೋಬಳಿ ಸತ್ಯಗಾಲ ಗ್ರಾಮದ ಚಂದ್ರಪ್ಪಚಾರ್ ಜಮೀನಿನಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು 2 ಹಸುಗಳು ಮೃತಪಟ್ಟಿವೆ.
ಜಮೀನಿನಲ್ಲಿ ಹಸು ಮೇಯಿಸುತ್ತಿದ್ದ ಚಂದ್ರಪ್ಪಚಾರ್ ಅವರ ಸೋಸೆ ವಿನೋದಾ ಸಿಡಿಲಿಗೆ ಅಸ್ವಸ್ಥರಾಗಿದ್ದು, ತಕ್ಷಣ ಆಸ್ಪತ್ರಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವಾರ್ತಾ ಇಲಾಖೆ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net