ರಾಜ್ಯದಲ್ಲಿ 4.79 ಲಕ್ಷ ಮಕ್ಕಳು ಕುಬ್ಜರು!

ಅಪೌಷ್ಟಿಕ ಮಕ್ಕಳು
ಅಪೌಷ್ಟಿಕ ಮಕ್ಕಳು
Published on

ಪ್ರಮುಖ ಮುಖ್ಯಾಂಶಗಳು

  • ಶೇ.14ರಷ್ಟು ಬೆಳವಣಿಗೆ ಕುಂಠಿತ
  • 32.17 ಲಕ್ಷ ಚಿಣ್ಣರ ತಪಾಸಣೆ
  • ಅಪೌಷ್ಟಿಕತೆಯೇ ಪ್ರಮುಖ ಕಾರಣ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ನಿಗದಿತ ಎತ್ತರ ಮತ್ತು ತೂಕಕ್ಕಿಂತ ಕಡಿಮೆ ಇರುವ ಕುಬ್ಜ ಮಕ್ಕಳನ್ನು ರಾಜ್ಯದಲ್ಲಿ ಗುರುತು ಮಾಡಲಾಗಿದೆ. ಹೀಗೆ ಅಸಹಜ ಬೆಳವಣಿಗೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ 4.79 ಲಕ್ಷ...!
ಇದು ಅಂಗನವಾಡಿಗಳಲ್ಲಿ ದಾಖಲಾಗಿರುವ ಮಕ್ಕಳಿರುವ ಕುಬ್ಜತೆ ಸಮಸ್ಯೆಗೆ ಸಿಲುಕಿಕೊಂಡಿರುವವರ ಸಂಖ್ಯೆಯಾಗಿದ್ದು, 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ.14 ಮಕ್ಕಳ ಬೆಳವಣಿಗೆ ಕುಂಠಿತವಾಗಿದೆ. ಆದರೆ, ಖಾಸಗಿಯಾಗಿ ನಡೆಸುತ್ತಿರುವ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ(ಎಲ್‌ಕೆಜಿ, ಯುಕೆಜಿ) ಇರುವ ಕುಬ್ಜ ಮಕ್ಕಳನ್ನು ಪತ್ತೆ ಮಾಡುವ ಕೆಲಸವಾಗಿಲ್ಲ. ಇದು ಸಹ ನಡೆದರೆ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದು ನಿಶ್ಚಿತ.
ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಯೋಜನೆಯಡಿ ನಡೆಯುತ್ತಿರುವ ರಾಜ್ಯದ ಅಂಗನವಾಡಿಗಳಲ್ಲಿ ಪ್ರವೇಶಾತಿ ಪಡೆದಿರುವ 32,29,644 ಮಕ್ಕಳ ಪೈಕಿ 32,17,112 ಮಕ್ಕಳ ಎತ್ತರ, ತೂಕದ ಅಳತೆಯನ್ನು 2025ರ ಡಿಸೆಂಬರ್‌ನಲ್ಲಿ ಮಾಡಲಾಗಿದೆ. ಅದರಲ್ಲಿ 4,79,931ಮಕ್ಕಳು ಕುಬ್ಜತೆ ಸಮಸ್ಯೆ ಎದುರಿಸುತ್ತಿರುವುದು ಪತ್ತೆಯಾಗಿದೆ. ಈ ಪರೀಕ್ಷೆಯಿಂದ 12,532 ಮಕ್ಕಳು ಹೊರಗೆ ಉಳಿದಿದ್ದಾರೆ. ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆದ ಪರೀಕ್ಷೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲೇ ಅಧಿಕ

ದೇಹದ ಬೆಳವಣಿಗೆಯಲ್ಲಿ ಅಸಹಜವಾಗಿ ತೂಕ, ಎತ್ತರ ಕಡಿಮೆ ಇರುವ ಮಕ್ಕಳನ್ನು ಸಾಮಾನ್ಯವಾಗಿ ಕುಳ್ಳ, ಗಿಡ್ಡ ಎಂದು ಕರೆಯುತ್ತಾರೆ. ಇವರ ಸಂಖ್ಯೆ ಬೆಳಗಾವಿ ಜಿಲ್ಲೆಯಲ್ಲೇ ಅಧಿಕವಾಗಿದೆ. ಚಿಕ್ಕಮಗಳೂರು ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.
ಬೆಳಗಾವಿ ಜಿಲ್ಲೆಯಲ್ಲಿ ಪರೀಕ್ಷೆ ಮಾಡಿದ 3,38,021 ಮಕ್ಕಳ ಪೈಕಿ 50,522 ಮಕ್ಕಳು ಈ ಸಮಸ್ಯೆಯಿಂದ ಬಳುತ್ತಿದ್ದಾರೆ. ಕ್ರಮವಾಗಿ 2, 3, 4ನೇ ಸ್ಥಾನದಲ್ಲಿರುವ ವಿಜಯಪುರದಲ್ಲಿ 46,434, ಕಲಬುರಗಿಯಲ್ಲಿ 43,919, ರಾಯಚೂರಿನಲ್ಲಿ 36,836 ಮಕ್ಕಳು ಕುಬ್ಜರಾಗಿದ್ದಾರೆ. ನಂತರ ಸ್ಥಾನದಲ್ಲಿ ಕೊಪ್ಪಳ, ಯಾದವಗಿರಿ, ಬೀದರ್, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ನಗರ ಜಿಲ್ಲೆಗಳು ರಾಜ್ಯದ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಇವುಗಳೆಲ್ಲವೂ ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳು ಎಂಬುದು ಗಮನಾರ್ಹ ಸಂಗತಿ.

ಕೊನೆ ಸ್ಥಾನದಲ್ಲಿ ಚಿಕ್ಕಮಗಳೂರು

1,337 ಕುಬ್ಜ ಮಕ್ಕಳಿರುವ ಚಿಕ್ಕಮಗಳೂರು ಜಿಲ್ಲೆ ರಾಜ್ಯದ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ರಾಮನಗರ, ಹಾಸನ, ದಕ್ಷಿಣ ಕನ್ನಡ, ಕೊಡಗು, ಉಡುಪಿ, ಚಿಕ್ಕಬಳ್ಳಾಪುರ, ಮಂಡ್ಯ, ಉತ್ತರ ಕನ್ನಡ, ಕೋಲಾರ ಜಿಲ್ಲೆಗಳು ಪಟ್ಟಿಯಲ್ಲಿ ಕೆಳಕ್ರಮಾಂಕದಲ್ಲಿರುವುದು ಆಶಾದಾಯಕ ಬೆಳವಣಿಗೆ. ತುಮಕೂರು, ವಿಜಯಪುರ, ಧಾರವಾಡ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ದಾವಣಗೆರೆ, ಗದಗ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು ಜಿಲ್ಲೆಗಳು(ಕ್ರಮವಾಗಿ 11ರಿಂದ 21ರ ವರೆಗಿನ ಸ್ಥಾನ) ಮಧ್ಯಕ್ರಮಾಂಕದಲ್ಲಿವೆ.

ಅಪೌಷ್ಟಿಕತೆಯೇ ಪ್ರಮುಖ ಕಾರಣ

ಮಕ್ಕಳ ಕುಬ್ಜತೆಗೆ ಅಪೌಷ್ಟಿಕತೆಯೇ ಪ್ರಮುಖ ಕಾರಣ. ಮಕ್ಕಳ ಕಡಿಮೆ ಎತ್ತರ, ಕಡಿಮೆ ತೂಕ, ಎತ್ತರಕ್ಕೆ ತಕ್ಕಂತೆ ತೂಕ ಇಲ್ಲದಿರುವುದು ಅಪೌಷ್ಟಿಕತೆಯ ಮುಖ್ಯ ಮಾನದಂಡಗಳಾಗಿವೆ. ಅಪೌಷ್ಟಿಕತೆಗೆ ವಿವಿಧ ಕಾರಣಗಳಿದ್ದರೂ, ಜಾತಿಗಳಿಗೂ ಮಕ್ಕಳ ಅಪೌಷ್ಟಿಕತೆಗೂ ಸಂಬಂಧ ಇದೆ ಎಂದು ಅಧ್ಯಯನವೊಂದು ಹೇಳಿದೆ.
ಮಕ್ಕಳ ಬೆಳವಣಿಗೆ ಕುಂಠಿತ ಆಗಿರುವುದು ಅಪೌಷ್ಟಿಕತೆಯ ಪ್ರಮುಖ ಸೂಚ್ಯಂಕ. ಒಂದು ಮಗು ತನ್ನ ವಯಸ್ಸಿಗೆ ಸಹಜವಾಗಿ ಬೆಳೆಯಬೇಕಾದ ಎತ್ತರಕ್ಕಿಂತ ಕಡಿಮೆ ಇದ್ದರೆ, ಆ ಮಗುವಿನ ಬೆಳವಣಿಗೆ ಕುಂಠಿತಗೊಂಡಿದೆ ಎಂದು ಪರಿಗಣಿಸಲಾಗುತ್ತದೆ. ಅದನ್ನು ಪೌಷ್ಟಿಕತೆಯ ಕೊರತೆ ಎಂದೇ ಹೇಳಲಾಗುತ್ತದೆ.

ಅನಾರೋಗ್ಯಕರ ವಾತಾವರಣ

ಮಗು ಹುಟ್ಟಿದ ನಂತರದ 1,000 ದಿನಗಳು ಬಹಳ ಮುಖ್ಯವಾಗಿದ್ದು, ಅದನ್ನು ‘ಬಂಗಾರದ ಅವಧಿ’ ಎಂದೇ ಕರೆಯಲಾಗುತ್ತದೆ. 2 ವರ್ಷದ ಹೊತ್ತಿಗೆ ಮಗುವಿನ ಶೇ.80 ಮಿದುಳು ಬೆಳವಣಿಗೆ ಆಗುವುದರೊಂದಿಗೆ, ಅದರ ಆರೋಗ್ಯಕರ ಜೀವನಕ್ಕೆ ಅಡಿಪಾಯ ಹಾಕಬೇಕು. ಈ ಅವಧಿಯಲ್ಲಿ ಆರೋಗ್ಯ ಸೇವೆ, ಪೌಷ್ಟಿಕ ಆಹಾರ, ಆರಂಭದ ಕಲಿಕೆ, ಉತ್ತಮ ಬೆಳವಣಿಗೆಗೆ ಪೂರಕವಾದ ವಾತಾವರಣ ಸಿಕ್ಕರೆ, ಮಗುವಿನ ಭವಿಷ್ಯ ಉತ್ತಮವಾಗಿರುತ್ತದೆ.
ಮಗುವಿನ ಬೆಳವಣಿಗೆಗೆ ಪೂರಕವಲ್ಲದ ಅನಾರೋಗ್ಯಕರ ವಾತಾವರಣ, ಆಹಾರದಲ್ಲಿ ಕಡಿಮೆ ಕ್ಯಾಲರಿಗಳ ಲಭ್ಯತೆ ಮಕ್ಕಳನ್ನು  ಅಪೌಷ್ಟಿಕತೆಗೆ ತಳ್ಳುತ್ತದೆ. ಎಷ್ಟನೇ ಮಗು, ನೈರ್ಮಲ್ಯ ಪದ್ಧತಿಗಳು, ತಾಯಿಯ ಎತ್ತರ, ಶಿಕ್ಷಣ, ರಕ್ತಹೀನತೆ, ಕುಟುಂಬದ ಸಾಮಾಜಿಕ, ಆರ್ಥಿಕ ಸ್ಥಿತಿಗಳ ಮಹತ್ವದ್ದು ಎನಿಸುತ್ತದೆ. ಇವುಗಳು ಪ್ರತ್ಯಕ್ಷ-ಪರೋಕ್ಷವಾಗಿ ಅಪೌಷ್ಟಿಕತೆ ಸಮಸ್ಯೆಗೆ ಮಕ್ಕಳು ಸಿಲುಕಿಕೊಳ್ಳಲು ಕಾರಣವಾಗುತ್ತವೆ.

ಅಪೌಷ್ಟಿಕತೆ ನಿವಾರಣೆಗೆ ಹಲವು ಕ್ರಮ

ಈ ಸಮಸ್ಯೆ ನಿವಾರಣೆಗಾಗಿ ಪೌಷ್ಟಿಕ ಆಹಾರ ಒದಗಿಸುವುದು ಪರಿಹಾರ ಕ್ರಮವಾಗಿದ್ದು, ಈ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ 300 ದಿನ ಪೂರಕ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಇಲ್ಲಿಯ ಎಲ್ಲ ಮಕ್ಕಳಿಗೆ ನಿತ್ಯ 8 ರೂ. ಮೌಲ್ಯದ ಪೂರಕ ಪೌಷ್ಟಿಕ ಆಹಾರ, ತೀವ್ರ ಪೌಷ್ಟಿಕ ಮಕ್ಕಳಿಗೆ ನಿತ್ಯ 12 ರೂ.ಮೌಲ್ಯದ ಪೂರಕ ಪೌಷ್ಟಿಕ ಆಹಾರ ಕೊಡಲಾಗುತ್ತಿದೆ. 3ರಿಂದ 6 ವರ್ಷದ ಎಲ್ಲ ಮಕ್ಕಳಿಗೆ ವಾರದಲ್ಲಿ 2 ದಿನ ಮೊಟ್ಟೆ ನೀಡಲಾಗುತ್ತದೆ. ಕ್ಷೀರಭಾಗ್ಯ ಯೋಜನೆಯಡಿ 6 ತಿಂಗಳಿಂದ 6 ವರ್ಷದ ಮಕ್ಕಳಿಗೆ 5 ದಿನ 150 ಮಿ.ಲೀಟರ್ ಹಾಲು(15 ಗ್ರಾಂ ಕೆನೆಭರಿತ ಹಾಲಿನಪುಡಿ, 5 ಗ್ರಾಂ ಸಕ್ಕರೆ ) ನೀಡಲಾಗುತ್ತದೆ.
6 ತಿಂಗಳಿಂದ 3 ವರ್ಷ ಮತ್ತು 3 ವರ್ಷದಿಂದ 6 ವರ್ಷದ ತೀವ್ರ, ಸಾಧಾರಣ ಅಪೌಷ್ಟಿಕ ಮಕ್ಕಳಿಗೆ ಕ್ರಮವಾಗಿ 3 ದಿನ ಮತ್ತು 5 ದಿನ ಮೊಟ್ಟೆ, 20 ಗ್ರಾಂ ಹಾಲಿನ ಪುಡಿಯನ್ನು ಮನೆಗೂ ವಿತರಿಸಲಾಗುತ್ತದೆ. ತೀವ್ರ ಅಪೌಷ್ಟಿಕ ಮಕ್ಕಳಿಗೆ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಪೌಷ್ಟಿಕ ಪುನರ್ವಸತಿ ಕೇಂದ್ರ(ಎನ್‌ಆರ್‌ಸಿ)ದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. 
"

ರಾಜ್ಯದ ಬೆಳಗಾವಿ, ವಿಜಯಪುರ, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ಹೆಚ್ಚು ಕುಬ್ಜ ಮಕ್ಕಳನ್ನು ಗುರುತಿಸಲಾಗಿದೆ. ಪೋಷಣ್ ಅಭಿಯಾನ ಯೋಜನೆಯಡಿ ಪ್ರತಿ ಮಾಹೆಯಲ್ಲಿ ಅಂಗನವಾಡಿ ಕೇಂದ್ರಗಳ ಎಲ್ಲ ಮಕ್ಕಳ ಎತ್ತರ, ತೂಕವನ್ನು ಪರಿಶೀಲಿಸಿ ಮಕ್ಕಳ ಅಪೌಷ್ಟಿಕ ಮಟ್ಟದ ನಿಖರ ಮಾಹಿತಿಯನ್ನು ಪಡೆಯಲು ಕ್ರಮ ವಹಿಸಲಾಗುತ್ತಿದೆ. ಮಕ್ಕಳ ಪೌಷ್ಟಿಕತೆ ನಿವಾರಣೆಗಾಗಿ ವಿವಿಧ ಉಪಕ್ರಮ ತೆಗೆದುಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net