ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 27 ಎನ್‌ಡಿಪಿಎಸ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 10.55 ಲಕ್ಷ ರೂ.ಮೌಲ್ಯದ 19 ಕೆ.ಜಿ. 420 ಗ್ರಾಂ ಮಾದಕ ವಸ್ತುಗಳನ್ನು ಗುರುವಾರ ನಿಯಮಾನುಸಾರ ನಾಶಪಡಿಸಲಾಯಿತು.
ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ 19 ಕೆ.ಜಿ. 414 ಗ್ರಾಂ ಗಾಂಜಾ ಹಾಗೂ 6 ಗ್ರಾಂ ಎಂಡಿಎಂಎ ಪೌಡರ್ ಮಾದಕ ವಸ್ತುಗಳನ್ನು ನ್ಯಾಯಾಲಯದ ಆದೇಶದಂತೆ ವಿಲೇವಾರಿ ಮಾಡಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಗೂ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬಾಲದಂಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಲೇವಾರಿಗೆ ಅನುಮೋದನೆ ನೀಡಲಾಯಿತು.
ಬಳಿಕ ಜಿಲ್ಲಾ ಮಾದಕ ವಸ್ತು ವಿಲೇವಾರಿ ಸಮಿತಿ ವತಿಯಿಂದ ಮೈಸೂರು ಜಿಲ್ಲೆಯ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಜ್ಜೇಗೌಡನಪುರ ಗ್ರಾಮದ ಜಿಐಪಿಎಸ್ ಬಯೋ-ಟೆಕ್ ಸಂಸ್ಥೆಯಲ್ಲಿ ಮಾದಕ ವಸ್ತುಗಳನ್ನು ಸುಟ್ಟು ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ಅಪರ ಪೊಲೀಸ್ ಅಧೀಕ್ಷಕ ಸಿ.ಮಲ್ಲಿಕ್, ಎಲ್.ನಾಗೇಶ್, ಮೈಸೂರು ಗ್ರಾಮಾಂತರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಬಿ.ರಾಜಣ್ಣ ಇದ್ದರು.