ನಗರದ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಾಳೆ ಮತ್ತು ತೆಂಗು ಬೆಳೆ ವಿಚಾರ ಸಂಕಿರಣವನ್ನು ಶಾಸಕ ದರ್ಶನ್ ಉದ್ಘಾಟಿಸಿದರು. ಚಂದ್ರು, ಡಾ.ಪ್ರಸಾದ್, ಡಾ.ವಿನಾಯಕ, ಡಾ.ಪ್ರಸಾದ್ ಇತರರು ಇದ್ದರು.
ನಂಜನಗೂಡು: ತಾಲೂಕಿನಲ್ಲಿ 5000 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆಯಲಾಗುತ್ತಿದ್ದು, ಜಿಲ್ಲೆಯಲ್ಲೇ ನಂಜನಗೂಡು ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಶಾಸಕ ದರ್ಶನ್ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ತೆಂಗು ಮತ್ತು ತಾಳೆ ಬೆಳೆ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ರೈತರು ತೆಂಗಿನ ಗಿಡಗಳನ್ನು ಮಗುವಿನ ಹಾಗೆ ಪೋಷಣೆ ಮಾಡಿ ಬೆಳೆಸುತ್ತಾರೆ. ಆದರೆ ಕಾಡು ಹಂದಿಗಳ ದಾಳಿಯಿಂದ ತೆಂಗಿನ ಗಿಡಗಳನ್ನು ನಾಶ ಮಾಡುತ್ತವೆ. ಇದರಿಂದ ಈ ಪ್ರದೇಶದ ಕೆಲವು ರೈತರು ಜಮೀನುಗಳನ್ನ ಮಾರಾಟ ಮಾಡುವ ಪರಿಸ್ಥಿತಿಗೆ ಹೋಗಿದ್ದಾರೆ. ಅಲ್ಲದೆ ಬೇರೆ ಬೇರೆ ಪ್ರದೇಶಗಳಿಂದ ನಮ್ಮ ತಾಲೂಕಿಗೆ ಬಂದು ಜಮೀನುಗಳನ್ನು ಖರೀದಿ ಮಾಡಿ ಕೃಷಿ ಮಾಡುತ್ತಾರೆ. ಅಧಿಕಾರಿಗಳು ತಾಲೂಕಿನ ರೈತರಿಗೆ ಹೆಚ್ಚಿನ ಸಲಹೆಗಳನ್ನು ನೀಡಿ ಕೃಷಿ ಮಾಡುವಂತೆ ಪ್ರೋತ್ಸಾಹ ನೀಡಬೇಕಿದೆ. ಕಾಲಕಾಲಕ್ಕೆ ತೆಂಗು ಮತ್ತು ತಾಳೆ ಹಾಗೂ ಅಡಕೆ ಬೆಳೆಗಳಿಗೆ ತಗಲುವ ರೋಗಗಳ ಅರಿವು, ಔಷಧ ಸಿಂಪಡಣೆ ಬಗ್ಗೆ ತರಬೇತಿಗಳನ್ನು ನೀಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ಚಂದ್ರು, ವಿಜ್ಞಾನಿಗಳಾದ ಡಾ. ಪ್ರಸಾದ್, ಡಾ.ವಿನಾಯಕ, ಡಾ.ಪ್ರಸಾದ್ ಇತರರು ಇದ್ದರು.