ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

ಹುಣಸೂರು ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಜಿಲ್ಲಾಧಿಕಾರಿಗೆ ವಿವಿಧ ಬೇಡಿಕೆಗೆಳ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ, ಜಿಪಂ ಸಿಇಒ ಯುಕೇಶ್‌ಕುಮಾರ್ ಇತರರಿದ್ದಾರೆ.
ಹುಣಸೂರು ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಜಿಲ್ಲಾಧಿಕಾರಿಗೆ ವಿವಿಧ ಬೇಡಿಕೆಗೆಳ ಈಡೇರಿಕೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ, ಜಿಪಂ ಸಿಇಒ ಯುಕೇಶ್‌ಕುಮಾರ್ ಇತರರಿದ್ದಾರೆ.
Published on
ಹುಣಸೂರು: ಗಿರಿಜನ ಹಾಡಿಗಳಲ್ಲಿ ಹೆಚ್ಚುತ್ತಿರುವ ಬಾಲ್ಯವಿವಾಹ ನಿಯಂತ್ರಣ, ದಲಿತರಿಗೆ ಸ್ಮಶಾನ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಬುಧವಾರ ನಗರದ ನಗರಸಭೆಯ ಡಾ.ಅಂಬೇಡ್ಕರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕ ಜಿ.ಡಿ.ಹರೀಶ್‌ಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದ ಬಳಿಕ ಮಾತನಾಡಿ, ತಾಲೂಕಿನ ಕಾಡಂಚಿನ ಹಾಡಿನಗಳಲ್ಲಿ 2 ವರ್ಷಗಳಿಂದ ಸುಮಾರು 30ಕ್ಕೂ ಹೆಚ್ಚು ಬಾಲ್ಯವಿವಾಹ ಮತ್ತು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿವೆ. ಇದರಿಂದ ಆದಿವಾಸಿಗಳು ಅನೇಕ ಸಮಸ್ಯೆಗಳಿಂದ ಪರಿತಪಿಸುವ ಸ್ಥಿತಿ ಉಂಟಾಗಿದೆ. ಕೂಡಲೇ ಈ ಸಮಸ್ಯೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಬಾಲ್ಯ ವಿವಾಹ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ತಡೆಗಟ್ಟಬೇಕು. ಕಟ್ಟೆಮಳಲವಾಡಿ ಗ್ರಾಮದಲ್ಲಿ ವಾಸಿಸುತ್ತಿರುವ ನಿರ್ಗತಿಕ ಅಲೆಮಾರಿ ಕುಟುಂಬಗಳು ಸರಿಯಾದ ಮೂಲಸೌಲಭ್ಯಗಳಿಲ್ಲದೆ ಸಂಕಷ್ಟದಲ್ಲಿದ್ದಾರೆ. ಈ ಅಲೆಮಾರಿ ಕುಟುಂಬಗಳಿಗೆ ಕಂದಾಯ ಇಲಾಖೆಯಿಂದ 1 ಎಕರೆ ಸರ್ಕಾರಿ ಜಮೀನನ್ನು ನಿವೇಶನದ ಉದ್ದೇಶಗಳಿಗೆ ಮಂಜೂರು ಮಾಡಿಸಿ ವಾಸಿಸಲು ಮನೆ ಇತರ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.  

ಹನಗೋಡು ಹೋಬಳಿ ಭರತವಾಡಿ ಗ್ರಾಮದ ಪೌರಕಾರ್ಮಿಕ ಮಹಿಳೆ ಜಾನಕಮ್ಮ ಅವರಿಗೆ 4 ಎಕರೆ ಜಮೀನಿದ್ದು, ಈ ಜಮೀನಿಗೆ ತಿರುಗಾಡಲು ಸವರ್ಣಿಯರು ರಸ್ತೆ ಬಿಡದೆ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಜಾನಕಮ್ಮ ವ್ಯವಸಾಯ ಮಾಡಲಾಗದೆ ಜಮೀನು ಪಾಳು ಬೀಳುವಂತಾಗಿದೆ. ಕೂಡಲೇ ಜಮೀನಿಗೆ ತಿರುಗಾಡುವ ರಸ್ತೆ ಬಿಡಿಸಿಕೊಡಬೇಕು. ತಾಲೂಕಿನ ಕೆಬ್ಬೇಕೊಪ್ಪಲು, ಚಿಕ್ಕಾಡನಹಳ್ಳಿ, ಮಾಚಬಾಯನಹಳ್ಳಿ, ಬಿಳಿಗೆರೆ ಮುಂತಾದ ಗ್ರಾಮಗಳಲ್ಲಿ ದಲಿತರ ಸ್ಮಶಾನ ಉಳ್ಳವರಿಂದ ಒತ್ತುವರಿಯಾಗಿದ್ದು, ಕೂಡಲೇ ಸ್ಮಶಾನವನ್ನು ಅಳತೆ ಮಾಡಿಸಿ ಒತ್ತುವರಿ ತೆರವುಗೊಳಿಸಿ ದಲಿತರ ಸ್ಮಶಾನವನ್ನು ಅಭಿವೃದ್ಧಿಪಡಿಸಬೇಕು. ತಾಲೂಕಿನ ಕೆಬ್ಬೇಕೊಪ್ಪಲು, ಅಂಬೇಡ್ಕರ್ ನಗರ ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಕುಟುಂಬಗಳು ವಾಸಿಸುತ್ತಿದ್ದು, ಈ ಕಾಲನಿಗೆ ರಸ್ತೆ, ಚರಂಡಿ, ಸಮುದಾಯ ಭವನ, ಸ್ಮಶಾನ ಮುಂತಾದ ಮೂಲಸೌಲಭ್ಯಗಳನ್ನು ಕೂಡಲೇ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು. 

ಬಿಳಿಗೆರೆ ಗ್ರಾಮದ 65 ದಲಿತ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ಹಕ್ಕುಪತ್ರ ಮಂಜೂರಾಗಿದ್ದು, ಇದರ ಪೈಕಿ 9 ಫಲಾನುಭವಿಗಳಿಗೆ ಇನ್ನೂ ನಿವೇಶನದ ಹಕ್ಕುಪತ್ರ ಕೊಟ್ಟಿಲ್ಲ. ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ತಹಸೀಲ್ದಾರ್ ಅವರನ್ನು ಒಳಗೊಂಡಂತೆ ಇತರ ಅಧಿಕಾರಿಗಳಿಗೆ ಸಭೆಯಲ್ಲಿಯೇ ನಿರ್ದೇಶನ ನೀಡಿ ಕಾಲಮಿತಿಯಲ್ಲಿ ಬಗೆಹರಿಸುವಂತೆ ಸೂಚಿಸಿದರು.

ಶಾಸಕರಾದ ಜಿ.ಡಿ. ಹರೀಶ್‌ಗೌಡ ಅವರು ಸಹ ದಲಿತರ, ಗಿರಿಜನರ ಯಾವುದೇ ಸಮಸ್ಯೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳು ಆದ್ಯತೆ ಮೇಲೆ ಪರಿಹರಿಸಲು ಕ್ರಮ ವಹಿಸಬೇಕು. ದಲಿತರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಅಧಿಕಾರಿಗಳ ನಡೆಯನ್ನು ನಾನು ಸಹಿಸುವುದಿಲ್ಲ ಎಂದರು. ದಲಿತ  ಮುಖಂಡರಾದ ಕೆ. ನಂಜಪ್ಪ ಬಸವನಗುಡಿ, ಬಲ್ಲೇನಹಳ್ಳಿ ಕೆಂಪರಾಜು, ಕಿರಿಜಾಜಿ ಗಜೇಂದ್ರ, ಬಿಳಿಗೆರೆ ಯಜಮಾನರಾದ ಸಣ್ಣಯ್ಯ, ಆದಿವಾಸಿ ಮುಖಂಡ ಗಿರೀಶ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net