

ಮೈಸೂರು: ಕರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮೇ 28 ರಿಂದ ಜೂನ್ 7ರ ಬೆಳಗ್ಗೆ 6 ಗಂಟೆಯವರೆಗೆ ಹೊಸ ನಿಯಮ ಜಾರಿಯಲ್ಲಿರಲಿದೆ.
ಮೈಸೂರಿನಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ. ಸೋಮವಾರ ಮತ್ತು ಗುರುವಾರ ಎರಡು ದಿನ ಮಾತ್ರ ಅಗತ್ಯ ವಸ್ತು ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಬ್ಯಾಂಕ್ ಹಾಗೂ ಭಾರತೀಯ ವಿಮಾ ಯೋಜನೆಯ ವ್ಯವಹಾರಗಳಿಗೂ ಸಮಯ ನಿಗದಿಯಾಗಿದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ಹಾಲಿನ ಬೂತ್‌ಗಳು, ವೈದ್ಯಕೀಯ ಸೇವೆಗಳು, ಹಾಪ್ ಕಾಮ್ಸ್ ಅಡಿಯಲ್ಲಿ ಬರುವ ತರಕಾರಿ ಮತ್ತು ಹಣ್ಣಿನ ಅಂಗಡಿಗಳು, ನ್ಯಾಯ ಬೆಲೆ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ರೀತಿಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುತ್ತದೆ.
ನಿಷೇದಾಜ್ಞೆ ಅವಧಿಯಲ್ಲಿ ಸರಕು ಸಗಟು ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ಬೇರೆ ಯಾವುದೇ ವಾಹನ ಸಂಚಾರ, ಜನರ ಓಡಾಟಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ.
ವಿಪತ್ತು ನಿರ್ವಹಣಾ ಕಾಯ್ದೆ-2005ರ ಉಪಬಂಧಗಳು, ಭಾರತೀಯ ದಂಡ ಸಂಹಿತೆಯ ಅನುಚ್ಛೇದ 188ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.
ಕರೊನಾ ಮುಕ್ತ ಗ್ರಾಮಗಳು
ಮೈಸೂರು ಜಿಲ್ಲೆಯ 343 ಗ್ರಾಮಗಳು ಕರೊನಾ ಮುಕ್ತ ಎಂದು ಘೋಷಿಸಿ ಜಿಲ್ಲಾಡಳಿತ ಅಂಕಿ-ಅಂಶ ಬಿಡುಗಡೆ ಮಾಡಿದೆ. ಜಿಲ್ಲೆಯ 2560 ಗ್ರಾಮಗಳ ಪೈಕಿ 343 ಗ್ರಾಮಗಳಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ಇಲ್ಲ. ಜಿಲ್ಲೆಯ 247 ವಾರ್ಡ್‌ಗಳ ಪೈಕಿ 27 ವಾರ್ಡ್‌ಗಳಲ್ಲಿ ಶೂನ್ಯ ಕೋವಿಡ್ ಪ್ರಕರಣವಿದೆ. (ದಿಗ್ವಿಜಯ ನ್ಯೂಸ್)