ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ‌ ಬಿಜೆಪಿ ಕನಸಿನ ಕೂಸು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಪಾದನೆ

Shobha Karandlaje BJP
Published on

ಬೆಂಗಳೂರು: ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಯೋಜನೆ ಬಿಜೆಪಿ ಕನಸಿನ ಕೂಸು. ಅವರವರ ಸರ್ಕಾರ ಇದ್ದಾಗ ಯೋಜನೆ ತಮ್ಮದೇ ಎಂದು ಹೇಳಿಕೊಳ್ಳುವುದು ಸಹಜವೆಂದು ಕಾಂಗ್ರೆಸ್, ಜೆಡಿಎಸ್ ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪರೋಕ್ಷವಾಗಿ ಕುಟುಕಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗಾರರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, 2018ರ ಫೆ. 19ರಂದು ದಶಪಥ ಹೆದ್ದಾರಿ ಯೋಜನೆ ಘೋಷಿಸಿದರು. 2018ರ ಮಾ.24ರಂದು ಯಶವಂತಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಶಿಲಾನ್ಯಾಸ ಮಾಡಲಾಯಿತು. ಈ ಭಾಗದ ಬಹು ದಿನದ ಕನಸು ನಾಳೆ ನನಸಾಗಲಿದ್ದು, ದಶಪಥ ಹೆದ್ದಾರಿಯನ್ನು ಮೋದಿಯವರು ಭಾನುವಾರ ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅಧಿಕೃತ ದಿನಾಂಕ ವಿವರಿಸುವ ಮೂಲಕ ದಶಪಥ ಹೆದ್ದಾರಿ ಯೋಜನೆ ಬಿಜೆಪಿ ಸರ್ಕಾರದ್ದು ಎಂದು ಶೋಭಾ ಕರಂದ್ಲಾಜೆ ಪ್ರತಿಪಾದಿಸಿದರು.

ಗಡ್ಕರಿ ಸೂಚನೆ

ಹೆದ್ದಾರಿ ಸಂಚಾರಕ್ಕೆ ಮುಕ್ತವಾದ ಬಳಿಕ ಈ ಭಾಗದ ಉದ್ಯಮ-ವಹಿವಾಟು, ಪ್ರವಾಸೋದ್ಯಮ ಹೊಸ ಆಯಾಮ ಪಡೆದುಕೊಳ್ಳಲಿದೆ. ಹೆದ್ದಾರಿ ಪಕ್ಕದ ಬಳಕೆ ರಸ್ತೆ, ಶೌಚ ಗೃಹ ಸೇರಿ ಮೂಲ ಸವಲತ್ತುಗಳ ನಿರ್ಮಾಣ ಕಾರ್ಯ ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಸೂಚಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನೈಸ್ ಕಂಪನಿ ಹಿಡಿದು ತಂದರು. ಆದರೆ ಅದು ಬೆಂಗಳೂರು ಬಿಟ್ಟು ಮುಂದಕ್ಕೆ ಹೋಗಲೇ ಇಲ್ಲ. ಈಗಿರುವ ದ್ವಿಪಥ ರಸ್ತೆ ಇಕ್ಕಟ್ಟಾಗಿ ಸಂಚಾರದ ಅವಧಿ ನಾಲ್ಕು ತಾಸು ಹಿಡಿಯುತ್ತಿತ್ತು. ದಶಪಥ ಹೆದ್ದಾರಿಯಿಂದ ಒಂದೂವರೆ ತಾಸಿನಲ್ಲೇ ಮೈಸೂರಿನಿಂದ ಬೆಂಗಳೂರಿಗೆ ತಲುಪಬಹುದಾಗಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net