

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ (61) ಅವರ ಅಕಾಲಿಕ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಕಾಂಗ್ರೆಸ್ ಕಟ್ಟಾಳು ಧ್ರುವನಾರಾಯಣ್ ತೀವ್ರ ಹೃದಯಾಘಾತದಿಂದ ಇಂದು ಮೈಸೂರಿನ ಡಿಆರ್ಎಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಬೆಳಗ್ಗೆ 6.30ಕ್ಕೆ ಎದೆ ಉರಿ ಎಂದು ಹೇಳಿ ವೈದ್ಯರಿಗೆ ಧ್ರುವನಾರಾಯಣ್ ಕರೆ ಮಾಡಿದರು. ನಿಮಗಾಗಿ ನಾನು ಕಾಯುತ್ತಿರುತ್ತೇನೆ ಬನ್ನಿ ಎಂದು ಖ್ಯಾತ ಹೃದಯ ತಜ್ಞ ಸದಾನಂದ ಹೇಳಿದರು. ತುರ್ತು ಚಿಕಿತ್ಸಾ ಘಟಕದಲ್ಲಿ ಧ್ರುವನಾರಾಯಣರಿಗಾಗಿ ಸದಾನಂದ ಅವರು ಕಾಯುತ್ತಿದ್ದಾಗ ತಕ್ಷಣ ಧ್ರುವನಾರಾಯಣ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.
ಆದರೆ, ಎದೆ ಉರಿಯಿಂದ ಹೃದಯದಲ್ಲಿ ರಕ್ತಸ್ರಾವವಾಗಿ ಬೆಳಗ್ಗೆ 7 ಗಂಟೆಗೆ ಧ್ರುವನಾರಾಯಣ ಅವರು ಮೃತಪಟ್ಟಿದ್ದಾರೆ. ಇಂದೇ ಧ್ರುವನಾರಾಯಣ ಅವರ ಅಂತ್ಯ ಸಂಸ್ಕಾರ ಹುಟ್ಟೂರಿನಲ್ಲಿ ನಡೆಯಲಿದೆ.
ಇಂದು ಸಂಜೆ 4 ಗಂಟೆವರಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಮೈಸೂರಿನ ವಿಜಯನಗರದಲ್ಲಿರುವ ಧ್ರುವನಾರಾಯಣ್ ಅವರ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಭಾನೋತ್ ಮಾಹಿತಿ ನೀಡಿದ್ದಾರೆ. ಸಂಜೆ 4 ಗಂಟೆಯ ನಂತರ ಧ್ರುವನಾರಾಯಣ್ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಗಣ್ಯರ ಕಂಬನಿ
ಅಕಾಲಿಕವಾಗಿ ಅಗಲಿದ ಧ್ರುವನಾರಾಯಣ್ ಅವರ ಸಾವಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.