ಹಿಂದುತ್ವ ಅಜೆಂಡಾ ಮೂಲಕ ಮಂಡ್ಯದಲ್ಲಿ ಬೇರು ಬಿಡಲು ಬಿಜೆಪಿ ಪ್ಲಾನ್: ಟಿಪ್ಪು ವಿರೋಧಿ ಅಸ್ತ್ರ ಬಳಕೆ

PM Modi in Mandya
Published on

ಮಂಡ್ಯ: ಹಿಂದುತ್ವ ಅಜೆಂಡಾ ಮೂಲಕ ಮಂಡ್ಯದಲ್ಲಿ ಬೇರು ಬಿಡಲು ಬಿಜೆಪಿ ಪ್ಲಾನ್ ಮಾಡಿದ್ದು, ಟಿಪ್ಪು ಸುಲ್ತಾನ್​ ವಿರೋಧಿ ಅಸ್ತ್ರ ಬಳಸಿ ಮತಗಳಿಕೆಗೆ ರಣತಂತ್ರವನ್ನು ರೂಪಿಸಿದೆ.

ನಾಳೆ (ಮಾ.12) ಪ್ರಧಾನಿ ಮೋದಿ ಅವರು ಮಂಡ್ಯಕ್ಕೆ ಬರುತ್ತಿದ್ದು, ಅವರ ಸ್ವಾಗತದಲ್ಲೂ ಟಿಪ್ಪು ವಿರೋಧಿ ಅಸ್ತ್ರ ಬಳಕೆ ಮಾಡಿದ್ದಾರೆ. ಉರಿಗೌಡ, ದೊಡ್ಡ ನಂಜೇಗೌಡ ಹಾಗೂ ನಾಲ್ವಡಿ ಕೃಷ್ಣರಾಜರ ಹೆಸರಲ್ಲಿ ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿ ಸ್ವಾಗತ ಕಮಾನು ನಿರ್ಮಾಣ ಮಾಡಲಾಗಿದೆ.

ಟಿಪ್ಪುವನ್ನು ಕೊಂದದ್ದು ಮಳವಳ್ಳಿ ಮೂಲದ ಒಕ್ಕಲಿಗರಾದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಎಂಬುದು ಬಿಜೆಪಿ ವಾದ. ಹೋದ ಕಡೆಯೆಲ್ಲಾ ಈ ವಿಚಾರವನ್ನು ಬಿಜೆಪಿ ನಾಯಕರು ಪ್ರಸ್ತಾಪ ಮಾಡುತ್ತಿದ್ದಾರೆ. ಬಿಜೆಪಿ ಗೆದ್ದರೆ ಮಳವಳ್ಳಿಯಲ್ಲಿ ಉರಿಗೌಡ ಮತ್ತು ನಂಜೇಗೌಡ ಪ್ರತಿಮೆಯನ್ನು ಮಾಡ್ತೀವಿ ಎಂದು ಈ ಹಿಂದೆಯೇ ಸಿಟಿ ರವಿ ಹೇಳಿದ್ದರು. ಟಿಪ್ಪು ಬೇಕಾ ಅಥವಾ ನಾಲ್ವಡಿ ಕೃಷ್ಣರಾಜರು ಬೇಕಾ ತೀರ್ಮಾನಿಸಿ ಎಂದು ಸಚಿವ ಅಶ್ವಥ್​ ನಾರಾಯಣ ಹೇಳಿದ್ದರು.

ಆದರೆ ಉರಿಗೌಡ ಹಾಗೂ ನಂಜೇಗೌಡ ಪಾತ್ರಗಳು ಬಿಜೆಪಿ ಸೃಷ್ಟಿ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಆದರೂ ಇದೇ ವಿಚಾರ ಇಟ್ಟುಕೊಂಡು ಮಂಡ್ಯದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ಉರಿಗೌಡ ಹಾಗೂ ನಂಜೇಗೌಡ ಹೆಸರಿನಲ್ಲಿ ಸ್ವಾಗತ ಕಮಾನು ನಿರ್ಮಿಸಿ ಮೋದಿಗೆ ಸ್ವಾಗತ ಕೋರಲು ಬಿಜೆಪಿ ಸಜ್ಜಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net