ಪತ್ನಿಗಾಗಿ ಮೂಕರೋದನೆ

Bagalkote
Published on

ಬಾಗಲಕೋಟೆ: ಅವರಿಬ್ಬರೂ ಮೂಕರು, ಸನ್ನೆ ಮೂಲಕವೇ ಇನ್​ಸ್ಟಾಗ್ರಾಂನಲ್ಲಾದ ಪರಿಚಯ ಪ್ರೀತಿಗೆ ತಿರುಗಿ ಮದುವೆಯೂ ಆದರು. ಆದರೀಗ ಯುವತಿ ಮನೆಯವರು ಆಕೆಯನ್ನು ಕರೆದುಕೊಂಡು ಹೋಗಿದ್ದು, ಪತ್ನಿ ಬೇಕು, ನ್ಯಾಯ ಕೊಡಿಸಿ ಎಂದು ಪತಿ ಬಾಗಲಕೋಟೆ ಎಸ್ಪಿ ಕಚೇರಿ ಮೆಟ್ಟಿಲು ಹತ್ತಿದ್ದಾನೆ.

ಜಮಖಂಡಿ ತಾಲೂಕಿನ ನಾಗನೂರು ಗ್ರಾಮದ ಸಿದ್ಧಾರ್ಥ ಕಾಂಬಳೆ ಹಾಗೂ ರಾಜಸ್ಥಾನ ಮೂಲದ ರೋದಿಯಾ ಅವರ ಪ್ರೇಮರೋದನೆ ಇದು. ರೋದಿಯಾ ಸಹೋದರರು ಮಿಸ್ಸಿಂಗ್ ಕೇಸ್ ಕೊಟ್ಟು ಅಲ್ಲಿನ ಪೊಲೀಸರ ಜತೆ ಬಂದು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಇತ್ತ ತನಗೆ ಅನ್ಯಾಯವಾಗಿದೆ. ಪತ್ನಿ ಬೇಕು ಎಂದು ಸಿದ್ಧಾರ್ಥ ಕಣ್ಣೀರು ಹಾಕುತ್ತ ಪೊಲೀಸರಿಗೆ ಮೊರೆ ಹೋಗಿದ್ದಾನೆ.

ಜಮಖಂಡಿಯಲ್ಲಿ ಮದುವೆ: ಇನ್​ಸ್ಟಾಗ್ರಾಮ್​ನಲ್ಲಿ ಸಿದ್ಧಾರ್ಥ ಮತ್ತು ರೋದಿಯಾ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು. ಸ್ನೇಹ, ಪ್ರೀತಿಗೆ ತಿರುಗಿದ್ದರಿಂದ ಸಿದ್ಧಾರ್ಥ ರಾಜಸ್ಥಾನಕ್ಕೆ ತೆರಳಿ ಆಕೆಯನ್ನು ಕರೆದುಕೊಂಡು ಬಂದು ಜಮಖಂಡಿಯ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಆದರೆ ನೋಂದಣಿ ಮಾಡಿಸಿಲ್ಲ. ಅತ್ತ ರೋದಿಯಾ ಸಹೋದರರು, ಸಹೋದರಿ ನಾಪತ್ತೆ ಆಗಿದ್ದಾರೆಂದು ದೂರು ಕೊಟ್ಟಿದ್ದರು. ಕೊನೆಗೆ ಜಮಖಂಡಿ ತಾಲೂಕಿನಲ್ಲಿರುವ ಬಗ್ಗೆ ಪತ್ತೆ ಮಾಡಿ ಅಲ್ಲಿನ ಪೊಲೀಸರ ಜತೆ ಆಗಮಿಸಿ ಸಾವಳಗಿ ಪೊಲೀಸರಿಗೆ ಮಾಹಿತಿ ನೀಡಿ ಕಳೆದ ವರ್ಷ ಸೆಪ್ಟೆಂಬರ್ 16 ರಂದು ಯವತಿಯನ್ನು ಕರೆದುಕೊಂಡು ಹೋಗಿದ್ದಾರೆ.

ಮದುವೆಯಾಗಿ 20 ದಿನಗಳಲ್ಲಿ ಪತಿ-ಪತ್ನಿ ಇಬ್ಬರೂ ದೂರವಾಗಿದ್ದಾರೆ. ಸದ್ಯ ರೋದಿಯಾ ವಿಡಿಯೋ ಕಾಲ್ ಮಾಡಿ ನನ್ನನ್ನು ಕರೆದುಕೊಂಡು ಹೋಗುವಂತೆ ಸಿದ್ಧಾರ್ಥಗೆ ಕೇಳಿಕೊಳ್ಳುತ್ತಿದ್ದಾಳಂತೆ. ಇದಕ್ಕಾಗಿ ತಂದೆ ಹಾಗೂ ವಕೀಲರ ಮೂಲಕ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಅವರಿಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಇಬ್ಬರಿಗೂ ಅದಾಗಲೇ ಬೇರೆಯವರ ಜತೆ ಮದುವೆ ಆಗಿತ್ತು ಎನ್ನುವ ಮಾತುಗಳು ಇದ್ದರೂ ಆ ಬಗ್ಗೆ ಸ್ಪಷ್ಟತೆ ಇಲ್ಲ.

ಸಿದ್ಧಾರ್ಥ ಕಾಂಬಳೆ ಹಾಗೂ ರೋದಿಯಾ ದೇವಸ್ಥಾನದಲ್ಲಿ ಮದುವೆ ಆಗಿರುವ ಫೋಟೋಗಳನ್ನು ಕೊಟ್ಟಿದ್ದಾರೆ. ಇಬ್ಬರಿಗೂ ಮಾತು ಬರಲ್ಲ. ರಾಜಸ್ಥಾನದಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಾಗಿದ್ದರಿಂದ ಅಲ್ಲಿನ ಪೊಲೀಸರ ಜತೆ ಬಂದ ಆಕೆಯ ಸಹೋದರರು ಸಾವಳಗಿ ಠಾಣೆಗೆ ಕರೆಸಿಕೊಂಡು ಅಲ್ಲಿಂದ ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ. ಇದೀಗ ಸಿದ್ಧಾರ್ಥ ಅವರು ನನಗೆ ಅರ್ಜಿ ಕೊಟ್ಟಿದ್ದು, ಕಾನೂನಾತ್ಮಕವಾಗಿ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು.

| ಅಮರನಾಥ ರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net