

ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಮೂಲ್ಕಿ ನಗರ ಪಂಚಾಯಿತಿ ಮಾಸಿಕ ಸಭೆ ಬುಧವಾರ ಅಧ್ಯಕ್ಷ ಸತೀಶ್ ಅಂಚನ್ ಅಧ್ಯಕ್ಷತೆಯಲ್ಲಿ ನಡೆಯಿತು. ಮೂಲ್ಕಿ ಕೈಗಾರಿಕಾ ಪ್ರದೇಶ ಸುಮಾರು 50 ಎಕರೆ ವ್ಯಾಪ್ತಿ ಹೊಂದಿದ್ದು 88 ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. 10 ಕೈಗಾರಿಕಾ ನಿವೇಶನ ಖಾಲಿ ಇದೆ. 30 ಖಾತಾ ಹೊಂದಿದ ನಿವೇಶನಗಳಿದ್ದು, ಈ ಪ್ರದೇಶದಿಂದ ಸುಮಾರು ವಾರ್ಷಿಕ 50 ಲಕ್ಷ ರೂ. ಕರ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಅಧ್ಯಕ್ಷರು ತಿಳಿಸಿದರು. ಅಭಿವೃದ್ಧಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ಅನುದಾನ ಪಡೆಯುವುದರೊಂದಿಗೆ ಕೈಗಾರಿಕಾ ಪ್ರದೇಶ ಸುಪರ್ದಿಗೆ ಪಡೆಯಲು ಪಂಚಾಯಿತಿ ನಿರ್ಣಯಿಸಿತು.
ಅಕ್ರಮ ಮದ್ಯ: ಮೂಲ್ಕಿ ಕೆ.ಎಸ್.ರಾವ್ ನಗರದ ಲಿಂಗಪ್ಪಯ್ಯನ ಕಾಡು ಪ್ರದೇಶದಲ್ಲಿ ಮುಂಜಾನೆ ನಾಲ್ಕು ಗಂಟೆಗೆ ಅಕ್ರಮ ಮದ್ಯ ಪೂರೈಕೆ ಆರಂಭಗೊಂಡಿದ್ದು ಕೂಲಿ ಮಾಡುವ ಕುಟುಂಬಗಳ ಜನರು ಬೆಳಗ್ಗೆಯೇ ಕುಡಿದು ತೂರಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸದಸ್ಯ ಭೀಮಾ ಶಂಕರ್ ಆರ್.ಕೆ. ಹೇಳಿದರು.
ಸರ್ಕಾರಿ ಬಸ್, ಹೆದ್ದಾರಿ ತೊಂದರೆ: ರಸ್ತೆ ಬದಿಯಲ್ಲಿ ಕಾಂಕ್ರೀಟ್ ಮಿಲ್ಲರ್ ಮಿಕ್ಸರ್ ಯಂತ್ರಗಳನ್ನು ಹಾಗೂ ವಾಹನ ನಿಲ್ಲಿಸಿ ರಸ್ತೆ ತಡೆ ಮಾಡುವ ಕಾರಣ ಸರ್ಕಾರಿ ಬಸ್‌ಗಳು ಬಾರದೆ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಭೀಮಾ ಶಂಕರ್ ಆರ್.ಕೆ. ದೂರಿದರು. ಸಂಚಾರಿ ಪೊಲೀಸರಿಗೆ ತಿಳಿಸಿ ಕ್ರಮಕೈಗೊಳ್ಳುವಂತೆ ಸೂಚಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ರಾ.ಹೆ. ಅಧಿಕಾರಿ ರವಿ ಕುಮಾರ್ ಅವರನ್ನು ಹೆದ್ದಾರಿ ಸಮಸ್ಯೆ ಪರಿಹಾರಕ್ಕೆ ಪಂಚಾಯಿತಿ ಸಭೆಗೆ ಕರೆದರೂ ಸಬೂಬು ನೀಡಿ ಬರುತ್ತಿಲ್ಲ ಎಂದು ಮುಖ್ಯಾಧಿಕಾರಿ ಮಧುಕರ್ ತಿಳಿಸಿದರು.
ಬೀದಿನಾಯಿ ಕಾಟ: ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು ಸಂತಾನಶಕ್ತಿ ಹರಣ ಚಿಕಿತ್ಸೆ ನಡೆಸುವ ಬಗ್ಗೆ ಪಶು ವೈದ್ಯರಲ್ಲಿ ಸದಸ್ಯರು ತಿಳಿಸಿದರು. ಪಶುವೈದ್ಯೆ ಡಾ.ಗ್ರೀಷ್ಮಾ ರಾವ್ ಮಾತನಾಡಿ, ಮೂಲ್ಕಿಯಲ್ಲಿ ವೈದ್ಯರಿಲ್ಲ, ಚಿಕಿತ್ಸೆಗೆ ಬೇಕಾದ ಔಷಧ ಇಲಾಖೆಯಲ್ಲಿ ಲಭ್ಯವಿಲ್ಲದೆ, ಖಾಸಗಿಯಾಗಿ ತರಬೇಕಾದರೂ ಸುಮಾರು 1500 ಖರ್ಚಿದೆ. ಕೆಲವು ಎನ್‌ಜಿಒ ಮತ್ತು ಎನಿಮಲ್ ಕೇರ್ ಟ್ರಸ್ಟ್ ನಾಯಿಗೆ ಶಸ್ತ್ರ ಚಿಕಿತ್ಸೆ ನೀಡಿ ತಂದು ಬಿಡುವ ವ್ಯವಸ್ಥೆ ಮಾಡುತ್ತಾರೆ ಅವರನ್ನು ಸಂಪರ್ಕಿಸಲು ತಿಳಿಸಿದರು.
ಮೆಸ್ಕಾಂ ಅವಾಂತರ: ಮೂಲ್ಕಿ ನಗರ ವ್ಯಾಪ್ತಿಯಲ್ಲಿ ಮೆಸ್ಕಾಂ ಸಿಬ್ಬಂದಿ ಟ್ರೀ ಕಟ್ಟಿಂಗ್ ಮಾಡಿ ರಸ್ತೆ, ನೀರು ಹೋಗುವ ತೋಡಿಗೆ ಬಿಸಾಡುವುದರಿಂದ ಸಮಸ್ಯೆಯಾಗಿದೆ. ಮೂಲ್ಕಿ ಕೊಳಚಿಕಂಬಳದಲ್ಲಿ ನಾಲ್ಕು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿದಿದ್ದರೂ ಮೆಸ್ಕಾಂ ಸ್ಪಂದಿಸಿಲ್ಲ, ಮಾನಂಪಾಡಿಯಲ್ಲಿ ತೋಟದ ಒಳಗೆ ವಿದ್ಯುತ್ ಲೈನ್ ಇದ್ದು ಆಗಾಗ ತುಂಡಾಗುವ ಕಾರಣ ಕಂಬಗಳನ್ನು ರಸ್ತೆ ಬದಿ ಹಾಕಬೇಕು ಎಂದು ಸದಸ್ಯ ಸುಭಾಶ್ ಶೆಟ್ಟಿ ಸೂಚಿಸಿದರು. ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಎಸ್‌ಒ ಕೃಷ್ಣಪ್ಪ ಹೇಳಿದರು.
ಅರ್ಧಕ್ಕೆ ಬಿಟ್ಟ ಕಾಮಗಾರಿ
ಮೂಲ್ಕಿ ಕಾರ್ನಾಡು ಗೇರುಕಟ್ಟೆ ಬಳಿ ರಸ್ತೆ ಬಳಿ ಕಾಂಕ್ರೀಟ್ ತೋಡು ನಿರ್ಮಿಸಿ ಅರ್ಧಕ್ಕೆ ಬಿಡಲಾಗಿದೆ. ಸರಳು ತುಕ್ಕು ಹಿಡಿಯುತ್ತಿದೆ ಎಂದು ಸದಸ್ಯ ಪುತ್ತುಬಾವ ದೂರಿದರು. ಮೂಲ್ಕಿ ನಪಂ ಉಪಾಧ್ಯಕ್ಷೆ ಲಕ್ಷ್ಮೀ, ಮುಖ್ಯಾಧಿಕಾರಿ ಮಧುಕರ್ ಮತ್ತು ಸದಸ್ಯರು, ಪಂಚಾಯಿತಿ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮುದಾಯ ಆಸ್ಪತ್ರೆ ಅಭಿವೃದ್ಧಿ
ಮೂಲ್ಕಿ ಸಮುದಾಯ ಆಸ್ಪತ್ರೆ ಸುಸಜ್ಜಿತವಾಗಿದ್ದು ಸೀಸೇರಿಯನ್ ಸಕ್ಷನ್ ಶಸ್ತ್ರ ಚಿಕಿತ್ಸೆ ಪ್ರಾರಂಭಿಸಲಾಗಿದೆ. 4 ಡಯಾಲಿಸಿಸ್ ಯಂತ್ರ ಕಾರ್ಯನಿರ್ವಹಿಸುತ್ತಿದ್ದರೂ 27 ರೋಗಿಗಳು ಕಾಯುವ ಸ್ಥಿತಿ ಇದೆ. ಡಯಾಲಿಸಿಸ್‌ಗೆ ಪ್ರತ್ಯೇಕ ಕಟ್ಟಡ ಹಾಗೂ ಹೆಚ್ಚುವರಿ ಯಂತ್ರಕ್ಕೆ ಯೋಜನೆ ರೂಪಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಸುನಿಲ್ ಜತ್ತನ್ನಾ ಸದಸ್ಯರಿಗೆ ತಿಳಿಸಿದರು. 108 ಆಂಬ್ಯುಲೆನ್ಸ್ ರಾತ್ರಿ ಸಮಯದಲ್ಲಿ ಲಭ್ಯವಿಲ್ಲ. ಆ ಸಮಯ ಸರ್ಕಾರಿ ಆಸ್ಪತ್ರೆ ಆಂಬ್ಯುಲೆನ್ಸ್ ನೀಡಬೇಕು ಎಂದು ಭೀಮಾಶಂಕರ್ ಹೇಳಿದರು. ಆಂಬ್ಯುಲೆನ್ಸ್‌ನಲ್ಲಿ ಚಾಲಕರು ಮತ್ತು ಟೆಕ್ನಿಶಿಯನ್ ಕೊರತೆ ಇದ್ದು ಸರ್ಕಾರ ನೇಮಕಾತಿ ನಡೆಸದೆ ಸಮಸ್ಯೆಯಾಗಿದೆ. ಆಸ್ಪತ್ರೆ ಆಂಬ್ಯುಲೆನ್ಸ್ ಚಾಲಕರು ಹಗಲು ಮಾತ್ರ ಲಭ್ಯವಿದ್ದು, ರಾತ್ರಿ ಕಳುಹಿಸಲಾಗುತ್ತಿಲ್ಲ ಎಂದು ವೈದ್ಯಾಧಿಕಾರಿ ಉತ್ತರಿಸಿದರು.
ತ್ಯಾಜ್ಯ ವಿಲೇವಾರಿ ಅಸಡ್ಡೆ
ಗೃಹತ್ಯಾಜ್ಯ ವಿಲೇವಾರಿಗೆ ಎನ್‌ಜಿಒ ಕಾರ್ಯನಿರ್ವಹಿಸುತ್ತಿದ್ದು 90 ಟನ್ ಪ್ಲಾಸ್ಟಿಕ್ ವೇಸ್ಟ್ ಎಂಆರ್‌ಎಫ್ ಸಂಸ್ಥೆಗೆ ನೀಡಲಾಗಿದೆ ಎಂದು ಎನ್‌ಜಿಒ ಸೂಪರ್‌ವೈಸರ್ ವಿಶಾಲಾ ತಿಳಿಸಿದರು. ಲಿಂಗಪ್ಪಯ್ಯನ ಕಾಡಿನ ವಿಜಾಪುರ ಕಾಲನಿಯಲ್ಲಿ ಜನ ಹಸಿ ಮತ್ತು ಒಣಕಸ ಒಟ್ಟಿಗೆ ತಂದು ರಸ್ತೆ ಬದಿ ರಾಶಿ ಹಾಕುತ್ತಾರೆ ಎಂದರು. ಭೀಮಾಶಂಕರ್ ಮಾತನಾಡಿ, ಪಂಚಾಯಿತಿ ಕಾರ್ಮಿಕರು ಬೆಳಗ್ಗೆ ಬೇಗ ಹೋಗುತ್ತಿಲ್ಲ, ಪೌರ ಕಾರ್ಮಿಕರು ಒರಟಾಗಿ ವರ್ತಿಸಿ ಕಸ ವಾಪಾಸ್ ಎಸೆಯುತ್ತಾರೆ ಎಂದು ದೂರಿದರು. ಸದಸ್ಯ ಮಂಜುನಾಥ ಕಂಬಾರ ಮಾತನಾಡಿ, ವಿಜಾಪುರ ಕಾಲನಿಯಲ್ಲಿ ಒಳ ಬಾಡಿಗೆ ವಿಷಯವಾಗಿ ಪರಿಶೀಲನೆ ನಡೆಸಲು ಹೇಳುತ್ತಿದ್ದರೂ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಇದು ಪಂಚಾಯಿತಿಗೆ ಕರ ನಷ್ಟ ಎಂದರು.