

ಸಂದೀಪ್ ಸಾಲ್ಯಾನ್ ಬಂಟ್ವಾಳ
ತುಳುನಾಡಿನಲ್ಲಿ ತೆನೆ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಇಲ್ಲಿನ ಹಿಂದು, ಕ್ರೈಸ್ತರು ಹೊಸ ಭತ್ತದ ತೆನೆ ತಂದು ಸಾಂಪ್ರದಾಯಿಕವಾಗಿ ಮನೆ ತುಂಬಿಸಿಕೊಂಡು ಭತ್ತದ ತೆನೆಯಂತೆ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಸಂಪತ್ತು ಸಮೃದ್ಧಿಯಾಗಲಿ ಎನ್ನುವ ಆಶಯದೊಂದಿಗೆ ಹೊಸ ಅಕ್ಕಿ ಊಟ ಮಾಡುವ ಪದ್ಧತಿ ಪರಂಪರೆಯಿಂದ ನಡೆದುಕೊಂಡು ಬಂದಿದೆ. ಆಧುನಿಕ ಕಾಲಘಟ್ಟದಲ್ಲಿ ಭತ್ತದ ತೆನೆ ಹುಡುಕುವುದೇ ಕಷ್ಟಕರವಾಗಿದ್ದು, ಬಂಟ್ವಾಳದ ಪಚ್ಚಿನಡ್ಕದ ಕೃಷಿಕರೊಬ್ಬರು ತೆನೆ ಪೂರೈಸಿ ಸೌಹಾರ್ದ ಮೆರೆದಿದ್ದಾರೆ.
ತುಳುನಾಡಿನ ಭತ್ತದ ಗದ್ದೆ ಅಡಕೆ ತೋಟಗಳಾಗಿ ಬದಲಾದ ಬಳಿಕ ತೆನೆ ಹಬ್ಬ ಆಚರಿಸಲು ಭತ್ತದ ತೆನೆ ಹುಡುಕುವುದೇ ಸಾಹಸದ ಕೆಲಸವಾಗಿದೆ. ಇದನ್ನರಿತ ಬಂಟ್ವಾಳದ ಪಚ್ಚಿನಡ್ಕ ನಿವಾಸಿ ವಿಲ್ಪ್ರೆಡ್ ಡಿಸೋಜ ಅವರು ಸಾಗುವಳಿ ಮಾಡಿ ಹಲವಾರು ವರ್ಷಗಳಿಂದ ಭತ್ತ ಬೆಳೆದು ಅಗತ್ಯವುಳ್ಳ ಸರ್ವ ಧರ್ಮೀಯರಿಗೆ ನೀಡಿ ಸೌಹಾರ್ದಕ್ಕೆ ಸಾಕ್ಷಿಯಾಗಿದ್ದಾರೆ.
ವಿಲ್ಫ್ರೆಡ್ ಡಿಸೋಜ ಹಲವಾರು ವರ್ಷಗಳಿಂದ ಅವಿಭಜಿತ ದ.ಕ. ಜಿಲ್ಲೆಯ ನೂರಕ್ಕಿಂತಲೂ ಅಧಿಕ ದೇವಸ್ಥಾನ, ಚರ್ಚ್ಗಳಿಗೆ ತೆನೆ ನೀಡುತ್ತಿದ್ದಾರೆ. ಆರಂಭದಲ್ಲಿ ರಂಗಿಪೇಟೆಯ ಹಿಂದು ಧಾರ್ಮಿಕ ಸೇವಾ ಸಮಿತಿ ವತಿಯಿಂದ ನಡೆಯುವ ಗಣೇಶೋತ್ಸವದಲ್ಲಿ ತೆನೆ ವಿತರಿಸಲು ಕೃಷಿಕ ವಿಲ್ಫ್ರೆಡ್ ಡಿಸೋಜ ಅವರಲ್ಲಿ ತೆನೆ ನೀಡುವಂತೆ ವಿನಂತಿಸಿಕೊಂಡಿದ್ದರು. ಆ ವರ್ಷ ಅವರಿಗೆ ಬೇಕಾಗುವಷ್ಟು ತೆನೆ ನೀಡಿದ ಬಳಿಕ ಮುಂದಿನ ವರ್ಷದಿಂದ ತೆನೆಗೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಮನೆಯ ಪಕ್ಕ ಭತ್ತದ ಕೃಷಿ ಮಾಡಿ ಅಗತ್ಯವುಳ್ಳವರಿಗೆ ತೆನೆ ನೀಡುವ ಕಾರ್ಯ ನಡೆಸಿಕೊಂಡು ಬರುತ್ತಿದ್ದಾರೆ.
ಪ್ರಸ್ತುತ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಾದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ, ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬ ದೇವಸ್ಥಾನ, ಮಂಗಳೂರಿನ ಶರವು ಗಣಪತಿ ದೇವಸ್ಥಾನ, ಕಾಟಿಪಳ್ಳ ಗಣಪತಿ ದೇವಸ್ಥಾನ, ಪೊಳಲಿ ದೇವಸ್ಥಾನ, ಪದವಿನಂಗಡಿ ದೈವಕ್ಷೇತ್ರ, ಪುತ್ತೂರು ಗರಡಿ, ಬೆಂದೂರು ಚರ್ಚ್, ಮೊಡಂಕಾಪು ಚರ್ಚ್, ಬಾಂಬಿಲ ಚರ್ಚ್, ಬೋರಿಮಾರ್ ಚರ್ಚ್ ಸೇರಿದಂತೆ ದೇವಸ್ಥಾನ ಚರ್ಚ್ಗಳಿಗೆ ವಿಲ್ಫ್ರೆಡ್ ಡಿಸೋಜ ಬೆಳೆದ ಭತ್ತದ ತೆನೆ ಪೂರೈಕೆಯಾಗುತ್ತಿದೆ. ಅವಿಭಜಿತ ದ.ಕ. ಜಿಲ್ಲೆ ಮಾತ್ರವಲ್ಲದೆ ಮಡಿಕೇರಿ, ಶುಂಠಿಕೊಪ್ಪ ಸೇರಿದಂತೆ ಜಿಲ್ಲೆಯ ಹೊರಭಾಗ, ಕೇರಳ ಗಡಿಭಾಗದಿಂದಲೂ ಜನರು ಅವರ ಮನೆಗೆ ಬಂದು ತೆನೆ ಕೊಂಡೊಯ್ಯುತ್ತಾರೆ. ಕಾಟಿಪಳ್ಳದ ಒಂದೇ ದೇವಸ್ಥಾನಕ್ಕೆ ಪ್ರತಿ ವರ್ಷ ಎರಡು ಪಿಕಪ್ ತೆನೆ ಹೋಗುತ್ತಿದೆ ಎನ್ನುತ್ತಾರೆ ವಿಲ್ಫ್ರೆಡ್.
ತೆನೆಗೆ ಬಾರಿ ಬೇಡಿಕೆ
ಚೌತಿ ಹಬ್ಬದ ಸಮಯಕ್ಕೆ ಹೆಚ್ಚಿನ ಗದ್ದೆ ಖಾಲಿಯಾಗಿರುತ್ತದೆ. ಆದರೆ ವಿಲ್ಫ್ರೆಡ್ ಡಿಸೋಜ ಅವರ ಗದ್ದೆಯಲ್ಲಿ ಭತ್ತದ ಪೈರುಗಳಲ್ಲಿ ತೆನೆ ತೂಗುತ್ತಿರುವುದರಿಂದ ಈ ಸಂದರ್ಭದಲ್ಲಿ ತೆನೆಗೆ ಭಾರಿ ಬೇಡಿಕೆಯಿದೆ. ಮೇ ತಿಂಗಳ ಆರಂಭದಲ್ಲಿ ಮನೆ ಪಕ್ಕದ ಗದ್ದೆಯಲ್ಲಿ ಬೀಜ ಬಿತ್ತನೆ ಮಾಡುತ್ತಾರೆ. 4 ತಿಂಗಳಾಗುವ ಸಮಯದಲ್ಲಿ ತೆನೆ ಬಿಟ್ಟು ಕೊಯ್ಲಿಗೆ ಸಿದ್ಧವಾಗಿರುತ್ತದೆ. ಈಗಾಗಲೇ ಹಿಂದುಗಳ ಚೌತಿ ಹಬ್ಬಕ್ಕೆ ಮೊದಲ ಹಂತದ ಕೊಯ್ಲು ನಡೆದಿದ್ದು, ಕ್ರೈಸ್ತರ ತೆನೆ ಹಬ್ಬಕ್ಕೆ 2ನೇ ಕೊಯ್ಲಿಗೆ ತೆನೆ ಸಿದ್ಧವಾಗಿದೆ. ಭತ್ತದ ತೆನೆಗೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿರುವುದರಿಂದ ವಿಲ್ಫ್ರೆಡ್ 4 ವರ್ಷಗಳಿಂದ ಸ್ಥಳೀಯ ಬಟ್ಟತೋಡಿ ಎಂಬಲ್ಲಿ ಉಮೇಶ್ ಶೆಟ್ಟಿ ಎಂಬುವರ ಎರಡೂವರೆ ಎಕರೆ ವಿಸ್ತೀರ್ಣದ ಜಮೀನು ಗೇಣಿಗೆ ಪಡೆದು ಸಾಗುವಳಿ ಮಾಡುತ್ತಿದ್ದಾರೆ. ಆ ಮೂಲಕ ಉತ್ತಮ ಬೆಳೆಯ ಜತೆಗೆ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಜಿಲ್ಲೆಯ ವಿವಿಧ ದೇವಸ್ಥಾನ ಹಾಗೂ ಚರ್ಚ್ ಗಳಿಗೆ ಹಲವು ವರ್ಷಗಳಿಂದ ಪಚ್ಚಿನಡ್ಕದ ವಿಲ್ಫ್ರೆಡ್ ಡಿಸೋಜ ಅವರು ಭಕ್ತರಿಗೆ ವಿತರಿಸಲು ಭತ್ತದ ತೆನೆ ನೀಡುತ್ತಿದ್ದಾರೆ. ಚೌತಿ ಹಾಗೂ ತೆನೆಹಬ್ಬದ ಸಂದರ್ಭದಲ್ಲಿ ಎಲ್ಲೂ ತೆನೆ ಸಿಗದ ಸಂದರ್ಭ ವಿಲ್ಫ್ರೆಡ್ ಅವರೇ ಆಪತ್ಭಾಂದವರಾಗುತ್ತಿದ್ದಾರೆ. ಸತೀಶ್ ಬಂಟ್ವಾಳ https://www.vijayavani.net/mosaru-kudike-utsava-10 https://www.vijayavani.net/ganesh-festival-religious-gathering-in-kukke