

ಶಿವಮೊಗ್ಗ: ಕರೊನಾ ಅದೆಷ್ಟೊ ಕುಟುಂಬಗಳನ್ನೇ ನಾಶ ಮಾಡಿಬಿಟ್ಟಿದೆ. ಅದೇ ರೀತಿ ಕುಟುಂಬದ ಅಮ್ಮ ಮಗಳಿಬ್ಬರನ್ನೂ ಕೇವಲ ಮೂರು ದಿನಗಳ ಅಂತರದಲ್ಲಿ ಸೋಂಕು ಬಲಿ ತೆಗೆದುಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನಗರದ ಮಲವಗೊಪ್ಪದ ನಿವಾಸಿಯಾಗಿದ್ದ ಸುಷ್ಮಾ (28)ಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಆಕೆಯನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮಂಗಳವಾರದಂದು ಕೊನೆಯುಸಿರೆಳೆದಿದ್ದಾಳೆ. ಮಗಳ ಸಾವಿನ ದುಃಖ ಮರೆಯಾಗುವುದರೊಳಗೆ ತಾಯಿ ರಾಜೇಶ್ವರಿ (48)ಗೂ ಸೋಂಕು ತಗುಲಿದೆ. ಶುಕ್ರವಾರದಂದು ರಾಜೇಶ್ವರಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆಯೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ.
ಕೇವಲ 72 ಗಂಟೆಗಳ ಅಂತರದಲ್ಲಿ ಕುಟುಂಬದ ಇಬ್ಬರು ಮಹಿಳೆಯರು ಅಸು ನೀಗಿದ್ದಾರೆ. ಸುಷ್ಮಾಳ ಪತಿ ಚಾಲಕನಾಗಿದ್ದು ದಂಪತಿಗೆ 7 ವರ್ಷದ ಪುತ್ರ ಮತ್ತು 5 ವರ್ಷದ ಪುತ್ರಿ ಇದ್ದಾರೆ. ಇದೀಗ ಮಕ್ಕಳು ಅಮ್ಮ ಮತ್ತು ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ.