

ಕುಂದಾಪುರ: ಗೃಹಲಕ್ಷ್ಮೀ ಅನುದಾನ ಜನವರಿ ತಿಂಗಳದ್ದು ಬಂದಿಲ್ಲ. ಯುವನಿಧಿಗೆ 10.83 ಲಕ್ಷ ರೂ., ಶಕ್ತಿ ಯೋಜನೆಗೆ 2.48 ಕೋಟಿ ರೂ.ಗೂ ಹೆಚ್ಚು, ಗೃಹಜ್ಯೋತಿಗೆ 4.14 ಕೋಟಿ ರೂ., ಅನ್ನಭಾಗ್ಯಕ್ಕೆ 3.40 ಕೋಟಿ ರೂ. ಬಂದಿದೆ ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಹೇಳಿದರು.
ಕುಂದಾಪುರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಂಚ ಗ್ಯಾರಂಟಿ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಲ್ಕು ಗ್ಯಾರಂಟಿಗಳ ಭಾಗವಾಗಿ ಕುಂದಾಪುರಕ್ಕೆ ಜನವರಿಯಲ್ಲಿ 10.14 ಕೋ.ರೂ. ಅನುದಾನ ಬಂದಿದೆ ಎಂದರು. ಅನ್ನಭಾಗ್ಯದ ಅಕ್ಟೋಬರ್ ತಿಂಗಳ ಮೊತ್ತ 3.4 ಕೋ.ರೂ. ಜನವರಿಯಲ್ಲಿ ಬಂದಿದೆ ಎಂದು ಆಹಾರ ನಿರೀಕ್ಷಕ ಸುರೇಶ್ ಹೇಳಿದರು.
ಜನವರಿಯಲ್ಲಿ ಕೆಎಸ್‌ಆರ್‌ಟಿಸಿಯ ಸಾಮಾನ್ಯ ಸಾರಿಗೆಯಲ್ಲಿ 5.28 ಲಕ್ಷ, ವೇಗದೂತದಲ್ಲಿ 1.4 ಲಕ್ಷ ಮಹಿಳಾ ಪ್ರಯಾಣಿಕರು ತೆರಳಿದ್ದು, 2.48 ಕೋ.ರೂ. ಆದಾಯ ಶಕ್ತಿ ಯೋಜನೆಯಿಂದ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದೇ ವೇಳೆ ಹಕ್ಲಾಡಿ, ನೂಜಾಡಿ ಪ್ರದೇಶದ ಬಸ್ ಸಮಸ್ಯೆ ಬಗ್ಗೆ ಅರುಣ್ ಹಕ್ಲಾಡಿ ಗಮನ ಸೆಳೆದರು. ಚಂದ್ರ ಕಾಂಚನ್ ದನಿಗೂಡಿಸಿದರು.
101 ಕೊರಗ ಕುಟುಂಬಗಳು ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಿಲ್ಲ. ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು.
ತಾಪಂ ಇಒ ಡಾ.ರವಿ ಕುಮಾರ್, ಸಹಾಯಕ ಸಂಚಾರ ನಿಯಂತ್ರಣ ಅಧಿಕಾರಿ ಬಿ.ಟಿ.ನಾಯಕ್, ಪ್ರಮುಖರಾದ ವಸುಂಧರ ಹೆಗ್ಡೆ, ವಾಣಿ ಆರ್.ಶೆಟ್ಟಿ, ಮಂಜು ಕೊಠಾರಿ, ಗಣೇಶ್ ಕುಂದಾಪುರ, ಆಶಾ ಕರ್ವೆಲ್ಲೋ, ಸವಿತಾ ಪೂಜಾರಿ, ಅಭಿಜಿತ್ ಪೂಜಾರಿ, ಜಹೀರ್ ಅಹಮದ್ ಹಾಜರಿದ್ದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಕಾರಿ ಡಾ.ರವಿಕುಮಾರ್ ಹುಕ್ಕೇರಿ ಸ್ವಾಗತಿಸಿದರು.