ಬಿಸಿಯೂಟ ಸೇವಿಸಿ 50ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Food Poison
Published on

ಕುಷ್ಟಗಿ: ಬಿಸಿಯೂಟ ಸೇವಿಸಿ ಸುಮಾರು 50ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡ ಘಟನೆ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಬಿಜಕಲ್‌ ಗ್ರಾಮದಲ್ಲಿ ಶುಕ್ರವಾರ (ಆಗಸ್ಟ್​ 23) ನಡೆದಿದೆ.

ಅಸ್ವಸ್ಥಗೊಂಡಿರುವ ಮಕ್ಕಳು ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಓದುತ್ತಿದ್ದು, ಮಧ್ಯಾಹ್ನ ಊಟ ಬಿಸಿಯೂಟ ಸೇವಿಸಿದ ನಂತರ ಏಕಾಏಕಿ ವಾಂತಿ ಕಾಣಿಸಿಕೊಂಡಿದೆ. ಕೂಡಲೇ ಅಸ್ವಸ್ಥರನ್ನು ಪಕ್ಕದ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಿಜಕಲ್‌ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ಆರಂಭಿಸಲಾಗಿದ್ದು ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಅಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಅಸ್ವಸ್ಥಗೊಂಡ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚುತ್ತಿರುವುದಾಗಿ ವರದಿಯಾಗಿದೆ.

ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ತಹಶೀಲ್ದಾರ್ ಅಶೋಕ ಶಿಗ್ಗಾಂವಿ, ತಾಲ್ಲೂಕು ಆನಂದ್​ ಗೋಟೂರು, ಬಿಇಒ ಸುರೇಂದ್ರ ಕಾಂಬಳೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮಾತನಾಡಿದ ಆರೋಗ್ಯಧಿಕಾರಿ ಆನಂದ್​ ಗೋಟೂರು, ಅಡುಗೆಗೆ ಬಳಸಿದ ಖಾರದ ಪುಡಿಯಿಂದಾಗಿ ಈ ರೀತಿಯಾಗಿದೆ. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ ಹಾಗೂ ಅಡುಗೆ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಅಣಬೆ ತಿಂದು ಅಸ್ವಸ್ಥ!

ತಾಲೂಕಿನ ಶಾಖಾಪುರ ಹೊರವಲಯದ ಮುತ್ತನಗೌಡ ಎನ್ನುವವರಿಗೆ ಸೇರಿದ ದಾಳೆಂಬೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಐವರು ಕೂಲಿಕಾರರು ತೋಟದಲ್ಲಿ ಬೆಳೆದಿದ್ದ ಅಣಬೆ (ಹುಚ್ಚು ಅಣಬೆ) ತಿಂದು ಅಸ್ವಸ್ಥಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ತಾಲೂಕಿನ ಎಂ.ಗುಡದೂರು ಗ್ರಾಮದ ಅಕ್ಕಮ್ಮ ಓತಗೇರಿ, ಸೋಮವ್ವ ದೋಟಿಹಾಳ, ಗಂಗವ್ವ ಕುರಿ, ಶಿಲ್ಪಾ ಓತಗೇರಿ ಹಾಗೂ ಶಿವಮ್ಮ ಗುಡಿಹಿಂದಲ ಅಸ್ವಸ್ಥಗೊಂಡವರು. ತಾಲೂಕು ಆಸ್ಪತ್ರೆಯಲ್ಲಿ ಐವರಿಗೂ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net