ಉಡುಪಿ: ಪತ್ನಿಯ ರೀಲ್ಸ್ ಹುಚ್ಚಾಟ್ಟಕ್ಕೆ ಬೇಸತ್ತು ವ್ಯಕ್ತಿಯೋರ್ವ ಆಕೆಯನ್ನು ಭೀಕರವಾಗಿ ಹೊಡೆದು ಕೊಂದಿರುವ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪಡುಹೋಳಿ ಎಂಬಲ್ಲಿ ನಡೆದಿದೆ.
ಮೃತರನ್ನು ಬೀದರ್ ಮೂಲದ ಜಯಶ್ರೀ (31) ಎಂದು ಗುರುತಿಸಲಾಗಿದ್ದು, ಪತಿ ಕಿರಣ್ ಉಪಾಧ್ಯಾಯನನ್ನು ಕೋಟ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ: ನ್ಯೂಜಿಲೆಂಡ್ ವಿರುದ್ಧ 6 ದಿನಗಳ ಟೆಸ್ಟ್ ಪಂದ್ಯ ಆಡಲಿದೆ ಶ್ರೀಲಂಕಾ; ಹೀಗಿದೆ ಕಾರಣ
ಮೂಲತಃ ಬೀದರ್ ಜಿಲ್ಲೆಯ ದಂಬಳಾಪುರದವರಾದ ಜಯಶ್ರೀ ಅವರನ್ನು ಕಿರಣ್ ಉಪಾಧ್ಯಾಯ 9 ತಿಂಗಳ ಹಿಂದಷ್ಟೇ ವಿವಾಹವಾಗಿದ್ದರು. ಕಳೆದ ಮೂರು ತಿಂಗಳಿನಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪಡುಹೋಳಿಯ ಕಡಿದ ಹೆದ್ದಾರಿ ಎಂಬಲ್ಲಿ ಬಾಡಿಗೆ ಮನೆ ಮಾಡಿಕೊಂಡು ದಂಪತಿ ಜೀವನ ನಡೆಸುತ್ತಿದ್ದರು.
ಮೃತ ಜಯಶ್ರೀ ಸದಾ ಮೊಬೈಲ್‌ನಲ್ಲಿ ಬ್ಯುಸಿ ಇರುತ್ತಿದ್ದರಂತೆ. ರೀಲ್ಸ್ ಮಾಡೋ ಹುಚ್ಚು ಇದ್ದ ಜಯಶ್ರೀ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು. ಪತ್ನಿಯ ಈ ಮೊಬೈಲ್ ಗೀಳು ಪತಿ, ಪತ್ನಿಯ ನಡುವೆ ಆಗಾಗ ಜಗಳಕ್ಕೆ ಕಾರಣವಾಗಿತ್ತು. ಗಂಡ, ಹೆಂಡತಿ ಮಧ್ಯೆ ರೀಲ್ಸ್ ವಿಚಾರವಾಗಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕೋಟ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.