

ಬೆಂಗಳೂರು:ರಾಜ್ಯಾದ್ಯಂತ ಹಿಂಗಾರು ಆರ್ಭಟ ಹಿನ್ನೆಲೆಯಲ್ಲಿ ಕೂಯ್ಲುಗೆ ಬಂದಿದ್ದ ಹಲವು ಬೆಳೆಗಳು ನೀರು ಪಾಲಾದರೆ, ಕಟಾವಿಗೆ ಬಂದಿರುವ ಉಳಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.
ಮೂರು ವರ್ಷದ ಬಳಿಕ ರಾಜ್ಯದಲ್ಲಿ ವಾಡಿಕೆಗಿಂತ ಅಧಿಕ ಮುಂಗಾರು ಮಳೆ ಸುರಿದ ಪರಿಣಾಮ ಈ ಬಾರಿ 70 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಬಿತ್ತನೆ ಮಾಡಲಾಗಿದೆ. 10.28 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ಭತ್ತ, ಜೋಳ, ರಾಗಿ, ಮೆಕ್ಕೆಜೋಳ, ಸಜ್ಜೆ, ಗೋಧಿ ಸೇರಿ ಏಕದಳ ಧಾನ್ಯ ಬಿತ್ತನೆ ಮಾಡಿದರೆ, 11.48 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ದ್ವಿದಳ ಧಾನ್ಯಗಳನ್ನು ಬಿತ್ತನೆ ಮಾಡಲಾಯಿತು. 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳು ಬಿತ್ತನೆ ಮಾಡಲಾಯಿತು. 8.57 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ವಾಣಿಜ್ಯ ಬೆಳೆ ಬೆಳೆಯಲಾಗುತ್ತಿದೆ. ಆದರೆ, ಪೂರ್ವ ಅರಬ್ಬಿ ಸಮುದ್ರದಲ್ಲಿ ತೀವ್ರ ವಾಯುಭಾರ ತೀವ್ರ ಕುಸಿತವಾಗಿರುವ ಪರಿಣಾಮ ಬಿರುಸಾಗಿ ಮಳೆಯಾಗುತ್ತಿದ್ದು ಇನ್ನೇನು ಕೆಲ ದಿನಗಳಲ್ಲಿ ಕಟಾವಾಗಬೇಕಿದ್ದ ಬೆಳೆಗಳಿಗೆ ತೀವ್ರ ಹಾನಿ ಮಾಡುತ್ತಿದೆ.
ಸಾಲದ ಸುಳಿಯಲ್ಲಿ ರೈತ: ರಾಜ್ಯದ ಬಹುತೇಕ ಜಿಲ್ಲೆಗಳ ಜಿಲ್ಲೆಗಳಲ್ಲಿ ಕೂಯ್ಲುಗೆ ಬಂದಿರುವ ಏಕದಳ, ದ್ವಿದಳ ಧಾನ್ಯ ಸೇರಿ ವಾಣಿಜ್ಯ ಬೆಳೆಗಳಿಗೆ ಹಾನಿಯಾಗುತ್ತಿದೆ. ಹಾಗಾಗಿ, ಅಧಿಕ ಮಳೆಯಿಂದ ಬೆಳೆಗಳು ಸರ್ವನಾಶವಾದ ಹಿನ್ನೆಲೆಯಲ್ಲಿ ರೈತರ ಕಂಗಾಲಾಗಿದ್ದಾರೆ. ಈ ಬಾರಿಯಾದರೂ ಸಾಲ ತೀರಿಸುವ ಆಲೋಚನೆಯಲ್ಲಿದ್ದ ರೈತರು, ಇನ್ನಷ್ಟು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
ಅ.18ರಂದು ಆರೆಂಜ್ ಅರ್ಲಟ್: ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ತೀವ್ರ ಕುಸಿತವಾಗಿರುವ ಪರಿಣಾಮ ದಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮುಂದಿನ ಐದಾರು ದಿನ ಜೋರು ಮಳೆಯಾಗಲಿದೆ. ಹಿಂಗಾರು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಅ.1ರಿಂದ ಉತ್ತಮ ಮಳೆಯಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಅ.18ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅರ್ಲಟ್ ಕೊಟ್ಟಿದೆ. ಮುಂದಿನ ನಾಲ್ಕು ದಿನ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆ ಬೀಳಲಿದೆ