ಒಳಮೀಸಲು ಜಾರಿಗೆ ರಾಜ್ಯ ಸರ್ಕಾರ ಹಿಂಜರಿಕೆ: ಆರ್.ಅಶೋಕ್ ಟೀಕೆ

LOP R Ashok
Published on

ಬೆಂಗಳೂರು: ಆಂತರಿಕ ತಿಕ್ಕಾಟ, ಗೊಂದಲಗಳಿಂದ ಪರಿಶಿಷ್ಟ ಜಾತಿ ಒಳಮೀಸಲು ಜಾರಿಯು ರಾಜ್ಯ ಸರ್ಕಾರಕ್ಕೆ ಕಬ್ಬಿಣದ ಕಡಲೆಯಂತಾಗಿದ್ದರೆ, ಮತ್ತಷ್ಟು ಒತ್ತಡ ತರಲು ಪ್ರತಿಪಕ್ಷ ಬಿಜೆಪಿ ಭೂಮಿಕೆ ಸಿದ್ಧಪಡಿಸಿದೆ.

ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಹಿರಿಯ ನಾಯಕರು ಇತ್ತೀಚೆಗೆ ಸಭೆ ಸೇರಿ ಪಕ್ಷದ ನಿಯೋಗ ಮುಖ್ಯಮಂತ್ರಿ ಗೆ ಭೇಟಿಯಾಗಲು ನಿರ್ಧರಿಸಿದೆ. ಸಿಎಂಗೆ ಪತ್ರ ಬರೆದು ಕಾಲಾವಕಾಶ ಪಡೆಯುವ ಜವಾಬ್ದಾರಿಯನ್ನು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ನೀಡಿದೆ.

ಪಕ್ಷದ ನಿಯೋಗ ಭೇಟಿಗೆ ಕಾಲಾವಕಾಶ ಕೋರಿ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ. ಸಾಮಾಜಿಕ ನ್ಯಾಯದ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುವ ಸಿಎಂ ಸಿದ್ದರಾಮಯ್ಯ, ಒಳಮೀಸಲು ಜಾರಿಗೆ ಮೀನಮೇಷ ಎಣಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಖಾರವಾಗಿ ಪ್ರತಿಕ್ರಿಯಿಸಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಎಸ್‌ಸಿ ಮೀಸಲು ವಗೀರ್ಕರಣಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಸಹಮತವಿದೆ. ಈ ಹಿಂದೆ ಬಿಜೆಪಿ ಸರ್ಕಾರ ಎಸ್‌ಸಿ ಮೀಸಲು ನಾಲ್ಕು ಗುಂಪುಗಳಲ್ಲಿ ವಿಂಗಡಿಸಿ ಅನುಷ್ಠಾನಕ್ಕೆ ಪ್ರಯತ್ನಿಸಿತ್ತು ಎಂದು ಹೇಳಿದರು.

ಸಾಮಾಜಿಕ ನ್ಯಾಯದ ಶಂಖನಾದ

ಒಳ ಮೀಸಲಾತಿ ಬಗ್ಗೆ ಸಿಎಂ ಸೇರಿ ಕಾಂಗ್ರೆಸ್ ನಾಯಕರು ದೊಡ್ಡದಾಗಿ ಮಾತನಾಡುತ್ತಾರೆ. ಜಾತಿ ಗಣತಿ ಬಗ್ಗೆ ಶಂಖ ಊದುತ್ತಿರುತ್ತಾರೆ. ರಾಜ್ಯಗಳಿಗೆ ಈ ಅಧಿಕಾರವನ್ನು ನೀಡಿ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ಹೊರಡಿಸಿದ ಮೇಲೂ ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದರು.

ಎಸ್‌ಸಿ ಮೀಸಲು ವಗೀರ್ಕರಣದ ಅಗತ್ಯತೆಯನ್ನು ಮೋದಿಯವರು ಮನಗಂಡಿದ್ದರು. ತೆಲಂಗಾಣಕ್ಕೆ ಭೇಟಿಯಿತ್ತ ವೇಳೆ ಈ ಬಗ್ಗೆ ಸಕಾರಾತ್ಮಕವಾದ ಭರವಸೆ ನೀಡಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಆದರೆ ರಾಜ್ಯದಲ್ಲಿ ಅದೇ ಪಕ್ಷದ ಸರ್ಕಾರ ಹಿಂಜರಿಯುತ್ತಿದೆ. ಸಾಮಾಜಿಕ ನ್ಯಾಯ ಬರೀ ಮಾತಿನಲ್ಲಲ್ಲ, ಕೃತಿಯಲ್ಲೂ ಇರಬೇಕು. ಎಸ್‌ಸಿ ಒಳಮೀಸಲಾತಿ ಹಾಗೂ ಜಾತಿ ಗಣತಿಗೆ ಕಾಂಗ್ರೆಸ್ ಸರ್ಕಾರ ಎಸ್‌ಐಟಿ ರಚಿಸಿದರೂ ಅಚ್ಚರಿ ಏನಿಲ್ಲವೆಂದು ಹಂಗಿಸಿದರು.

ರಾಜ್ಯದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಅನ್ವಯವಾಗುತ್ತದೆ. ಎಸ್‌ಐಟಿ ಮೇಲೆ ಅನುಮಾನ ಹೆಚ್ಚಾಗಿ ಅದನ್ನೇ ತನಿಖೆ ಮಾಡುವ ಸ್ಥಿತಿ ಬಂದಿದೆ. ಬಿಜೆಪಿ ಶಾಸಕ ಮುನಿರತ್ನ ಅವರಿಗೊಂದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಮತ್ತೊಂದು ಕಾನೂನು ಎಸ್‌ಐಟಿ ಬಳಿಯಿರುವಂತಿದೆ ಎಂದು ಆರ್.ಅಶೋಕ್ ಛೇಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net