

ಕಲಬುರಗಿ: ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಬಂಧಿತರಾಗಿ ಸಿಐಡಿ ವಶದಲ್ಲಿರುವ ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ, ಗೋಲ್ಮಾಲ್ ನಡೆಸಿದ ಯಾವುದೇ ಸಾಕ್ಷಿಗಳು ಸಿಗದಂತೆ ನಾಶಪಡಿಸಲು ಆಳಂದ ಸಮೀಪದ ಅಮರ್ಜಾ ಜಲಾಶಯದಲ್ಲಿ ತನ್ನ ಮೊಬೈಲ್ ಎಸೆದಿರುವುದು ಬೆಳಕಿಗೆ ಬಂದಿದೆ. ಮೊಬೈಲ್ ಎಲ್ಲಿದೆ ಎಂದು ಸಿಐಡಿ ಅಧಿಕಾರಿಗಳು ಪ್ರಶ್ನಿಸಿದಾಗ ಆರಂಭದಲ್ಲಿ ಮಂಜುನಾಥ ಏನೂ ಬಾಯಿ ಬಿಡಲಿಲ್ಲ. ಆದರೆ ಡ್ರಿಲ್ ಚುರುಕಾದಾಗ ಶರಣಾಗಲು ಬರುವ ಮೊದಲು ತನ್ನ ಮೊಬೈಲ್ ಅಮರ್ಜಾ ಡ್ಯಾಂನಲ್ಲಿ ಎಸೆದಿರುವುದಾಗಿ ಹೇಳಿದ್ದಾನೆ. ಇದರ ಬೆನ್ನಲ್ಲೇ ಮೂವರು ಪರಿಣತ ಈಜುಗಾರರನ್ನು ಡ್ಯಾಂಗೆ ಕಳಿಸಿ ಶೋಧ ನಡೆಸಲಾಗಿದೆ. ಈವರೆಗೂ ಮೊಬೈಲ್ ಸಿಕ್ಕಿಲ್ಲ. ಈ ಮೊಬೈಲ್ನಲ್ಲಿ ಏನೇನು ಮಾಹಿತಿ ಇರಬಹುದು? ಯಾರ್ಯಾರ ಜತೆಗೆ ಸಂಪರ್ಕವಿತ್ತು ಎಂಬ ವಿವರ ಸಿಗಬಹುದು? ಮತ್ಯಾರ ಹೆಸರು ಬರಬಹುದೋ ಎನ್ನುವ ಕುತೂಹಲ ಮೂಡಿಸಿದೆ.
ಈ ಮಧ್ಯೆ ಮಂಗಳವಾರ ಡಿವೈಎಸ್ಪಿ ಎಸ್.ವಿ.ಪಾಟೀಲ್, ಪ್ರಕಾಶ ರಾಠೋಡ್, ವೀರೇಂದ್ರ ಅವರುಳ್ಳ ತಂಡ ಸ್ಥಳ ಮಹಜರ್ ಮಾಡಿಸಲು ಮಂಜುನಾಥನನ್ನು ಡ್ಯಾಂ ಪರಿಸರಕ್ಕೆ ಕರೆದುಕೊಂಡು ಹೋದರು. ಮೊದಲಿಗೆ ಬಂಧಿತ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮನೆ, ಅಲ್ಲಿಂದ ಬ್ಲೂ ಟೂತ್ ಎಸೆದ ಕೇಂದ್ರೀಯ ವಿದ್ಯಾಲಯದ ಬಳಿ, ನಂತರ ಹೈಕೋರ್ಟ್ ಮುಂಭಾಗದಲ್ಲಿರುವ ಬಡಾವಣೆಯಲ್ಲಿರುವ ಮಂಜುನಾಥ ಮನೆಗೆ ಕರೆದೊಯ್ದರು. ಈ ವೇಳೆ ಇನ್ನೊಂದು ತಂಡದವರು ಆರ್.ಡಿ.ಪಾಟೀಲ್ ಆಡಿಟರ್ ಚಂದ್ರಕಾಂತ ಕುಲಕರ್ಣಿ, ಪ್ರಭು ಮತ್ತು ಶರಣಪ್ಪ ಅವರನ್ನು ಕರೆದುಕೊಂಡು ಬಂದರು. ಆಗ ಆರ್.ಡಿ.ಪಾಟೀಲ್ಗೆ ಹಣ ಕೊಟ್ಟಿದ್ದು ಸಮೀಪದ ಮರವೊಂದರ ಕೆಳಗಡೆ ಎಂಬ ಸ್ಥಳವನ್ನು ತೋರಿಸಲಾಗಿದೆ. ಎಲ್ಲೆಡೆ ಪಂಚನಾಮೆ ನಡೆಸಲಾಗಿದೆ. ಮೇಳಕುಂದಿ ಮನೆಗೆ ಒಯ್ದು ಸಾಕಷ್ಟು ಶೋಧ ಮಾಡಲಾಯಿತು. ನಂತರ ಅಮರ್ಜಾ ಡ್ಯಾಂ ಸೈಟ್ಗೆ ಕರೆದುಕೊಂಡು ಹೋಗಿ ಎಲ್ಲಿ ಮೊಬೈಲ್ ಎಸೆಯಲಾಗಿದೆ ಎಂಬುದು ತೋರಿಸಲು ಹೇಳಿದರು. ಸುಮಾರು 30 ಮೀಟರ್ ಆಳವಾಗಿರುವ ನಡು ನೀರಿನಲ್ಲಿ ಎಸೆದಿದ್ದಾಗಿ ಹೇಳಿದ. ಅದರ ಪತ್ತೆಗೆ ಟೀಮ್ ಇನ್ನಿಲ್ಲದ ಪ್ರಯತ್ನ ಆರಂಭಿಸಿದೆ. ಪರೀಕ್ಷೆ ಬರೆದ ಹಲವು ಅಭ್ಯರ್ಥಿಗಳು, ಗಣ್ಯರು, ಅಧಿಕಾರಿಗಳು, ರಾಜಕಾರಣಿಗಳು ಹೀಗೆ ಹಲವರ ಜತೆಗೆ ಮಂಜುನಾಥ ನಿಕಟ ಸಂಪರ್ಕ ಹೊಂದಿದ್ದ. ಮೊಬೈಲ್ ಸಿಐಡಿ ಕೈಗೆ ಕೊಟ್ಟರೆ ಸಾಕಷ್ಟು ಸಾಕ್ಷಿ ಸಿಗಲಿವೆ ಎಂದುಕೊಂಡು ಅರೆಸ್ಟ್ ಆಗುವ ಮುನ್ನ ಮೊಬೈಲ್ ಜಲಾಶಯದಲ್ಲಿ ಎಸೆದು ಸಾಕ್ಷಿ ಮುಚ್ಚಿ ಹಾಕುವ ಕೆಲಸ ವ್ಯವಸ್ಥಿತವಾಗಿ ಮಾಡಿರುವಂತಿದೆ. ಸದ್ಯ ಈ ಮೊಬೈಲ್ ಶೋಧಿಸುವುದು ಸಿಐಡಿಗೆ ತಲೆನೋವಾಗಿದೆ.
ಉಳಿದವರಿಗಾದರೂ ಒಳ್ಳೆಯದಾಗಿದೆ: ಪಿಎಸ್ಐ ನೇಮಕಾತಿ ಅಕ್ರಮದಿಂದ ಕೇವಲ 545 ಅಭ್ಯರ್ಥಿಗಳಿಗೆ ಸಮಸ್ಯೆ ಆಗಿರಬಹುದು. ಆದರೆ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯ ಒಳ್ಳೆಯದಾಗಲಿದೆ. 545 ಮಂದಿಗೆ ಅನ್ಯಾಯ ಆಗಿದೆ ಅಂತಾ ನನ್ನ ಮೇಲೆ ಶಾಪ ಹಾಕುತ್ತಿರಬಹುದು. ಆದರೆ, 57 ಸಾವಿರ ಅಭ್ಯರ್ಥಿಗಳಿಗೆ ಒಳ್ಳೆಯದಾಗಿದೆ. ಅಷ್ಟು ಜನರ ಆಶೀರ್ವಾದ ನನ್ನ ಮೇಲೆ ಇದೆ ಎಂದು ಸಹ ಮಂಜುನಾಥ ಮೇಳಕುಂದಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ನನ್ನ ತಮ್ಮನ ಪಿಎಸ್ಐ ಪರೀಕ್ಷೆ ಪಾಸ್ ಮಾಡಿಸಲು ಆಗಲಿಲ್ಲ. ವಯಸ್ಸು ಮೀರಿ ಹೋಯಿತು ಎಂದು ನೋವಿನಿಂದ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಮೇಳಕುಂದಿಗೆ ಮುಳುವಾಯ್ತಾ ಹೊಸ ಮನೆ?: ಬಂಧಿತ ಮಂಜುನಾಥ ಮೇಳಕುಂದಿಗೆ ಹೊಸ ಮನೆಯೇ ಮುಳುವಾಯಿತಾ ಎಂಬ ಚರ್ಚೆ ನಡೆದಿದೆ. ಕಲಬುರಗಿ ಜಯನಗರದ ಇಂಜಿನಿಯರ್ ಕಾಲನಿಯಲ್ಲಿರುವ ಮನೆಯನ್ನು ಇನ್ನೊಬ್ಬರಿಂದ ಮೇಳಕುಂದಿ ಖರೀದಿಸಿದ್ದರು. ಜಾಗದ ವಾಸ್ತು ಸರಿಯಿಲ್ಲದ ಕಾರಣಕ್ಕೆ ಸಿಐಡಿ ಬಲೆಗೆ ಬಿದ್ದಿರಬಹುದು ಎಂಬ ಚಿಂತೆ ಮಂಜುನಾಥಗೆ ಕಾಡುತ್ತಿದೆಯಂತೆ. ಮಹಜರ್ಗೆ ಕರೆದುಕೊಂಡು ಹೋಗುವಾಗ ಸಿಕ್ಕಾಗ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಮುಂದೆ ಹೀಗೆ ಹೇಳಿಕೊಂಡಿದ್ದಾರೆ. ಅಲ್ಲದೆ ಆ ಮನೆಯನ್ನು ಖರೀದಿಸುವಾಗಲೇ ಅನೇಕರು ಬೇಡವೆಂದು ಸಲಹೆ ನೀಡಿದ್ದರು. ಮೂಲ ವಾರಸುದಾರರಿಂದ ಹಿಡಿದು ಈವರೆಗೂ ಖರೀದಿಸಿ ಯಾರೊಬ್ಬರೂ ಉದ್ಧಾರವಾಗಿಲ್ಲವಂತೆ. ಸಿಐಡಿ ಕಸ್ಟಡಿಯಲ್ಲಿರುವ ಮಂಜುನಾಥ ಇದನ್ನು ಹೇಳಿಕೊಂಡು, ನಾನು ಆ ಮನೆ ತೆಗೆದುಕೊಂಡು ಕೆಟ್ಟೆ ಎಂದರು. ಮನೆ ಮಾರಾಟ ಮಾಡುವ ಬಗ್ಗೆಯೂ ಹೇಳಿದ್ದಾನೆ ಎನ್ನಲಾಗಿದೆ.
ಕಲಬುರಗಿ: ಲೋಕೋಪಯೋಗಿ ಇಲಾಖೆ ಕಿರಿಯ ಅಭಿಯಂತರ (ಜೆಇ) ಮತ್ತು ಸಹಾಯಕ ಅಭಿಯಂತರ (ಎಇ) ನೇಮಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದ್ದರ ಕುರಿತು ಮರು ತನಿಖೆ ನಡೆಸಲು ಬೆಂಗಳೂರಿನ ಅನ್ನಪೂರ್ಣೆಶ್ವರಿ ನಗರ ಠಾಣೆ ಪೊಲೀಸರು ಕೇಸ್ ರೀ ಓಪನ್ ಮಾಡಿದ್ದಾರೆ. ಬೆಂಗಳೂರಿನಿಂದ ಬಂದ ಪೊಲೀಸರ ತಂಡ ಕಿಂಗ್ಪಿನ್ ಆರ್.ಡಿ.ಪಾಟೀಲ್ನನ್ನು ವಶಕ್ಕೆ ಪಡೆದುಕೊಂಡಿದೆ. ಎಇ, ಜೆಇ ನೇಮಕ ಪರೀಕ್ಷೆ ಅಕ್ರಮದ ಬಗ್ಗೆ ವಿಜಯವಾಣಿಯ ಸೋಮವಾರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಪ್ರಕರಣದ ತನಿಖೆಯನ್ನು ಒತ್ತಡದಿಂದಾಗಿ ಕೈಬಿಡಲಾಗಿತ್ತು ಎಂದು ಉಲ್ಲೇಖಿಸಿತ್ತು. ಪಿಎಸ್ಐ ಅಕ್ರಮದ ನಡೆಸುತ್ತಿರುವ ಸಿಐಡಿ ಟೀಮ್ ಹಲವು ವಿಷಯ ಬೆಳಕಿಗೆ ತಂದಿರುವ ಬಗ್ಗೆಯೂ ವರದಿಯಲ್ಲಿ ದಾಖಲಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಬೆಂಗಳೂರು ಪೊಲೀಸರು ಸಿಐಡಿ ಜತೆ ಸಮನ್ವಯ ಸಾಧಿಸಿ ಮಾಹಿತಿ ಪಡೆದು ಇನ್ಸ್ಪೆಕ್ಟರ್ ನೇತೃತ್ವದ ತಂಡ ಮಂಗಳವಾರ ಕಲಬುರಗಿಗೆ ಆಗಮಿಸಿ ಕೋರ್ಟ್ ಅನುಮತಿ ಪಡೆದು ಕಿಂಗ್ಪಿನ್ ಆರ್ಡಿಪಿ ವಶಕ್ಕೆ ತೆಗೆದುಕೊಂಡು ಬೆಂಗಳೂರಿಗೆ ಕರೆದೊಯ್ದಿದೆ.
ಪಿಡಬ್ಲ್ಯುಡಿ ಜೆಇ-ಎಇ ನೇಮಕಕ್ಕಾಗಿ 2021ರ ಡಿಸೆಂಬರ್ 14ರಂದು ಜರುಗಿದ ಪರೀಕ್ಷೆಯಲ್ಲಿ ಬೆಂಗಳೂರಿನ ಸೇಂಟ್ ಜಾನ್ ಶಾಲೆ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಅಕ್ರಮವೆಸಗಿರುವುದು ಬೆಳಕಿಗೆ ಬಂದಿತ್ತು. ಇದರಲ್ಲಿ ಸಿಐಡಿ ಬಂಧಿಸಿರುವ ಮಂಜುನಾಥ ಮೇಳಕುಂದಿ ಮತ್ತು ಆರ್.ಡಿ.ಪಾಟೀಲ್ ಗ್ಯಾಂಗ್ ಪ್ರತ್ಯೇಕವಾಗಿ ಅಭ್ಯರ್ಥಿಗಳ ಜತೆ ಡೀಲ್ ಕುದುರಿಸಿ ಬ್ಲೂಟೂತ್ ಮೂಲಕ ಉತ್ತರ ಬರೆಸಿತ್ತು ಎಂದು ಅನ್ನಪೂರ್ಣೆಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಶರಣಗೌಡ ಇತರರನ್ನು ಬಂಧಿಸಿ ನಂತರ ತನಿಖೆ ಮುಗಿಸಿತ್ತು. ಈ ಕೇಸ್ನಲ್ಲಿ ರುದ್ರಗೌಡ 7ನೇ ಆರೋಪಿ. ಬಳಿಕ ಚಾರ್ಜ್ಶೀಟ್ನಲ್ಲಿ ತನ್ನ ಹೆಸರು ಕೈಬಿಡುವಂತೆ ಮನವಿ ಮಾಡಿದ್ದ. ಕಳೆದ ವರ್ಷಾಂತ್ಯಕ್ಕೆ ಜರುಗಿದ ಜಲಸಂಪನ್ಮೂಲ ಇಲಾಖೆ ಇಂಜಿಯರ್ಗಳ ನೇಮಕ ಪರೀಕ್ಷೆಯಲ್ಲೂ ಆರ್ಡಿಪಿ ಗ್ಯಾಂಗ್ ಅಕ್ರಮ ನಡೆಸಿರುವ ಮಾಹಿತಿ ಗೊತ್ತಾಗಿದೆ. ಕಲ್ಯಾಣ ಕರ್ನಾಟಕ ಕೋಟಾದಲ್ಲಿದ್ದ 181 ಹುದ್ದೆಗಳಲ್ಲಿ ಬಹುತೇಕರು 25-40 ಲಕ್ಷ ಹಣ ಕೊಟ್ಟು ನೌಕರಿಗೆ ಸೇರಿರುವ ಶಂಕೆ ವ್ಯಕ್ತವಾಗಿದೆ.
ಪಿಎಸ್ಐ ಪರೀಕ್ಷೆ ಅಕ್ರಮಕ್ಕೆ ಕಾರಣವಾಗಿದ್ದೇ ಜ್ಞಾನಜ್ಯೋತಿ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ ಚಿಲ್. ಆತನನ್ನು ಡೀಲ್ ಮಾಸ್ಟರ್ ಎಂದೇ ಹೇಳಲಾಗುತ್ತಿದೆ. ಕ್ರಿಮಿನಲ್ ಬುದ್ದಿ ಉಪಯೋಗಿಸಿದ ಕಾಶಿನಾಥ, ಸಂಸ್ಥೆ ಕಾರ್ಯದರ್ಶಿ ದಿವ್ಯಾ ಹಾಗರಗಿ ಮನವೊಲಿಸಿ ಶಾಲೆಯ ಉಸ್ತುವಾರಿ ವಹಿಸಿಕೊಂಡು ದೊಡ್ಡ ಮೊತ್ತದ ಹಣ ಲೂಟಿ ಮಾಡಿದ ಆರೋಪ ಕೇಳಿ ಬಂದಿದೆ. ಹೆಡ್ ಮಾಸ್ಟರ್ ಆದ ನಂತರ ಪತ್ನಿಯನ್ನು ಸಹ ಅದೇ ಶಾಲೆಯಲ್ಲಿ ನೌಕರಿಗೆ ಸೇರಿಸಿಕೊಂಡಿದ್ದಾನೆ. ಆದರೆ, ಈ ಪರೀಕ್ಷಾ ಅಕ್ರಮದಿಂದ ಪತ್ನಿಯನ್ನು ಮಾತ್ರ ಸೇಫ್ ಆಗಿ ದೂರವಿರಿಸಿ, ಉಳಿದವರನ್ನು ಬಲಿಪಶು ಮಾಡಿದಂತಿದೆ. ಕೆಲ ವರ್ಷಗಳ ಹಿಂದೆ ಬಡತನದಲ್ಲಿದ್ದ ಕಾಶಿನಾಥ ಅಲ್ಪ ಸಮಯದಲ್ಲಿ ಕೋಟ್ಯಧಿಪತಿಯಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಧಾರವಾಡ: ಪಿಎಸ್ಐ ನೇಮಕ ಪರೀಕ್ಷೆ ಅಕ್ರಮ ಪ್ರಕರಣದ ತನಿಖೆಗಾಗಿ ಸಿಐಡಿ ತಂಡ ಮಂಗಳವಾರ ಬೆಳಗ್ಗೆ ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಆಗಮಿಸಿ ವಿವಿಧ ಕಡೆಗಳಲ್ಲಿ ತನಿಖೆ ನಡೆಸಿದೆ. ಜಿಲ್ಲೆಯಲ್ಲೂ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ 4 ಜನರ ತಂಡ, ಧಾರವಾಡ ಹಾಗೂ ಹುಬ್ಬಳ್ಳಿಯ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆಸಿ, ಒಬ್ಬ ಅಭ್ಯರ್ಥಿಯನ್ನು ವಶಕ್ಕೆ ಸಹ ಪಡೆದಿದೆ. ಈತ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದು, ಸುಮಾರು 3 ತಿಂಗಳ ಹಿಂದಷ್ಟೇ ಕೆಎಎಸ್ ತರಬೇತಿ ಪಡೆಯಲು ಖಾಸಗಿ ಕೋಚಿಂಗ್ ಸೆಂಟರ್ಗೆ ಆಗಮಿಸಿದ್ದ. ಪಿಎಸ್ಐ ನೇಮಕ ಪರೀಕ್ಷೆ ಅಕ್ರಮದಲ್ಲಿ ಈತ ಸಹ ಶಾಮೀಲಾಗಿದ್ದ ಎಂಬ ಸಂಶಯದ ಆಧಾರದಲ್ಲಿ ಅಭ್ಯರ್ಥಿಯನ್ನು ವಶಕ್ಕೆ ಪಡೆದಿದ್ದಾರೆ. ಮಧ್ಯಾಹ್ನದವರೆಗೂ ನಗರದಲ್ಲಿ ಅಭ್ಯರ್ಥಿಯ ವಿಚಾರಣೆ ನಡೆಸಿದ್ದ ಅಧಿಕಾರಿಗಳು, ಸಂಜೆ ಹೊತ್ತಿಗೆ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಪಿಎಸ್ಐ ಅಕ್ರಮ ನೇಮಕಾತಿ ಹಗರಣ ಜಿಲ್ಲೆಗೂ ಅಂಟಿಕೊಂಡಂತಾಗಿದೆ.
ಪಿಎಸ್ಐ ನೇಮಕಾತಿ ಹಗರಣದಲ್ಲಿ ತನಿಖೆ ನಡೆದು ಸತ್ಯಾಂಶ ಹೊರ ಬರಲಿದೆ. ಪ್ರತಿಪಕ್ಷಗಳು ಮಾಡುತ್ತಿರುವ ಆರೋಪ ಗಳೆಲ್ಲ ನಿಜವಲ್ಲ. ಪ್ರಕರಣ ತನಿಖೆ ಹಂತದಲ್ಲಿದ್ದು, ಯಾರು ಯಾರನ್ನು ಟಾರ್ಗೆಟ್ ಮಾಡಿ, ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. | ಆನಂದ್ ಸಿಂಗ್ ಸಚಿವ