Mysore Dasara| ಚಮಚಾಗಿರಿ, ರಾಜಕಾರಣದ ಘಮಲಿನಿಂದಾಗಿ ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆ ಹಾಳಾಗಿದೆ: ವಿಶ್ವನಾಥ್​ ಕಿಡಿ

H Vishwanath
Published on

ಮೈಸೂರು: ನಾಡಅಧಿದೇವತೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಡೆದ ಮೈಸೂರು ದಸರಾ (Mysore Dasara) ಉದ್ಘಾಟನಾ ಕಾರ್ಯಕ್ರಮ ಬಹುತೇಕ ಮುಡಾ ಕೇಂದ್ರಿಕೃತವಾಗಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನೂ ಈ ಕುರಿತು ಮಾತನಾಡಿರುವ ವಿಧಾನಪರಿಷತ್ (MLC)​ ಸದಸ್ಯ ಎಚ್​. ವಿಶ್ವನಾಥ್ (H Vishwanath)​ ಚಮಚಾಗಿರಿಯ ಭಾಷಣ ಹಾಗೂ ರಾಜಕಾರಣದ ಘಮಲಿನಿಂದಾಗಿ ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆ ಹಾಳಾಗಿದೆ ಎಂದು ಕಿಡಿಕಾರಿದ್ದಾರೆ.

ನಗರದಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ವಿಶ್ವನಾಥ್​, ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆದ ಈ ಬಾರಿಯ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದ ಪಾವಿತ್ರ್ಯತೆಯು ಚಮಚಾಗಿರಿಯ ಭಾಷಣ ಹಾಗೂ ರಾಜಕಾರಣದ ಘಮಲಿನಿಂದಾಗಿ ಹಾಳಾಗಿದೆ. ಆ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡುವುದು ಬೇಕಿರಲಿಲ್ಲ. ಈ ಹಿಂದೆ ಚಾಮುಂಡೇಶ್ವರಿಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ ಸಿದ್ದರಾಮಯ್ಯ ಈಗ ಪದೇ ಪದೇ ಆ ತಾಯಿಯ ಆಶೀರ್ವಾದ ಬೇಡಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ ಎಂದು ಪುನರುಚ್ಚರಿಸುತ್ತಿದ್ದಾರೆ. ಇದರ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.

ದಸರಾ ಉದ್ಘಾಟಿಸಿದ ಸಾಹಿತಿ ಹಂ.ಪ. ನಾಗರಾಜಯ್ಯ ಅವರೂ ರಾಜಕೀಯ ಭಾಷಣ ಮಾಡಿದ್ದಾರೆ. ಭಕ್ತಿ ಭಾವದ ಕಾರ್ಯಕ್ರಮದಲ್ಲಿ ದಸರಾ ಇತಿಹಾಸ, ಮಹಾರಾಜರ ಕೊಡುಗೆ, ನಾಡಹಬ್ಬದ ಐತಿಹಾಸಿಕ ಮಹತ್ವದ ಬಗ್ಗೆ ಮಾತನಾಡದೇ, ಕೆಳಮಟ್ಟಕ್ಕೆ ತರುವ ಕೆಲಸವನ್ನು ನಮ್ಮ ರಾಜಕಾರಣಿಗಳು ಮಾಡಿದ್ದಾರೆ. ಜಿಟಿ ದೇವೇಗೌಡ ಸಿದ್ದರಾಮಯ್ಯರನ್ನು ಹೊಗಳಿರುವುದು ಬೂಟಾಟಿಕೆ ಎನಿಸಿತು. ಅವರೂ ಕೂಡ ಮುಡಾ ಫಲಾನುಭವಿಯೇ. ಅಷ್ಟೆಲ್ಲ ಹೊಗಳುವ ಅವಶ್ಯಕತೆ ಇರಲಿಲ್ಲ. ಇಡೀ ಕಾರ್ಯಕ್ರಮವನ್ನು ಅವರು ಗೊಂದಲಮಯ ಮಾಡಿ, ಹೊಲಸಾಗಿದರು. ಅದಕ್ಕೆ ಕ್ಷಮೆಯೇ ಇಲ್ಲ ಎಂದು​ ಕಿಡಿಕಾರಿದ್ದಾರೆ.

Vishwanath Siddaramaiah

ಮುಡಾ ಹಗರಣದ ಬಗ್ಗೆ ಇಷ್ಟು ದಿನ ಮಾತನಾಡದ ಜಿಟಿಡಿ ಈಗೇಕೆ ಪ್ರತಿಕ್ರಿಯಿಸಿದ್ದಾರೆ. ಮುಡಾ ಫಲಾನುಭವಿ ಆಗಿರುವುದೇ ಇದಕ್ಕೆ ಕಾರಣ. ಅವರದ್ದೂ ಎಷ್ಟೋ‌ ನಿವೇಶನ ಇವೆ ಎಂಬ ಮಾತುಗಳಿವೆ. ಎಲ್ಲ ರಾಜಕಾರಣಿಗಳೂ ಸೇರಿ ಮೈಸೂರನ್ನು ಕಳ್ಳರ ಸಂತೆಯಂತೆ ಬಿಂಬಿಸಿದ್ದಾರೆ. ಜೆಡಿಎಸ್‌ ಶಾಸಕಾಂಗ ‌ಪಕ್ಷದ ನಾಯಕನನ್ನಾಗಿ ಮಾಡದಿದ್ದರಿಂದ ಜಿಟಿಡಿ ಕೋಪಗೊಂಡಿದ್ದಾರೆ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯ (ಇಡಿ) ಮಧ್ಯಪ್ರವೇಶ ಮಾಡುತ್ತಿದ್ದಂತೆಯೇ ಮುಖ್ಯಮಂತ್ರಿ ಪತ್ನಿ ಪಾರ್ವತಿಯವರು 14 ನಿವೇಶನಗಳನ್ನು ವಾಪಸ್ ಮಾಡಿದ್ದಾರೆ. ಅಪರಾಧ ಒಪ್ಪಿಕೊಂಡಾಕ್ಷಣ, ಮಾಡಿರುವ ಅಪರಾಧ ಹೋಗಿಬಿಡುವುದಿಲ್ಲ. ಮುಡಾದಿಂದ ಶೇ 50:50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲ ನಿವೇಶನಗಳ ಬಗ್ಗೆಯೂ ತನಿಖೆ ಆಗಬೇಕು. ನ್ಯಾಯಾಲಯದ ಆದೇಶದಂತೆ ತನಿಖೆಯ ಹಂತದಲ್ಲಿರುವಾಗಲೇ ನಿವೇಶನಗಳನ್ನು ವಾಪಸ್ ಪಡೆದುಕೊಳ್ಳಲು ಮುಡಾ ಆಯುಕ್ತರಿಗೆ ಅಧಿಕಾರ ಏನಿದೆ ಎಂದು ವಿಧಾನಪರಿಷತ್​ ಸದಸ್ಯ ಎಚ್​. ವಿಶ್ವನಾಥ್​ ಪ್ರಶ್ನಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net