Tirupati Laddu Row| ಸ್ವತಂತ್ರ ತನಿಖೆಗೆ ಆದೇಶಿಸಿದ Supreme Court

Tirupati Laddoo Supreme Court
Published on

ನವದೆಹಲಿ: ತಿರುಪತಿಗೆ ಭೇಟಿ ನೀಡುವ ಭಕ್ತರಿಗೆ ಕೊಡಲಾಗುವ ಲಡ್ಡು (Tirupati Laddu) ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು (Animal Fat) ಬಳಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ ಸ್ವತಂತ್ರ ತನಿಖೆಗೆ ಆದೇಶಿಸಿದೆ.

ಪ್ರಕರಣ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವು ಸ್ವತಂತ್ರ ತನಿಖೆಗೆ ಆದೇಶಿಸಿದ್ದು, ಇದು ಪ್ರಪಂಚದಾದ್ಯಂತದ ಇರುವ ಕೋಟ್ಯಂತರ ಭಕ್ತರ ನಂಬಿಕೆಯ ವಿಚಾರ.  ಇದೊಂದು ರಾಜಕೀಯ ನಾಟಕವಾಗಬಾರದು, ಸ್ವತಂತ್ರ ಸಂಸ್ಥೆ ಇದ್ದರೆ ಆತ್ಮವಿಶ್ವಾಸ ಮೂಡುತ್ತದೆ ಎಂದು ದ್ವಿಸದಸ್ಯ ಪೀಠವು ಅಭಿಪ್ರಾಯಪಟ್ಟಿದೆ.

ತಿರುಪತಿ ಲಡ್ಡು ವಿವಾದದ ಬಗ್ಗೆ ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ್ದು, CBI, ರಾಜ್ಯ ಪೊಲೀಸ್ ಮತ್ತು FSSAIಅಧಿಕಾರಿಗಳನ್ನು ಒಳಗೊಂಡಿರುವ ಹೊಸ ಐದು-ಸದಸ್ಯರ ಸ್ವತಂತ್ರ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರಿದ್ದ ದ್ವಿಸದಸ್ಯ ಪೀಠವು ಆದೇಶಿಸಿದೆ.

ತಿರುಪತಿಗೆ ಭೇಟಿ ಕೊಡುವ ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದಕ್ಕೆ ವಿಶೇಷ ಮಹತ್ವವಿದ್ದು, ಜನರು ಅದನ್ನು ಇಷ್ಟಪಟ್ಟು ಸೇವಿಸುತ್ತಾರೆ. ಆದರೆ, ಇದೀಗ ಭಕ್ತರಿಗೆ ನೀಡಲಾಗುತ್ತಿದ್ದ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಮೀನಿನ ಎಣ್ಣೆ ಬಳಸಲಾಗುತ್ತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದರು.

ಚಂದ್ರಬಾಬು ನಾಯ್ಡು ಅವರ ಆರೋಪ ವಿಶ್ವವ್ಯಾಪಿ ಸಖತ್​ ಸೌಂಡ್​ ಮಾಡಿತ್ತು. ಆರೋಪಕ್ಕೆ ಸಂಬಂಧಿಸಿದಂತೆ 9 ಸದಸ್ಯರಿರುವ ವಿಶೇಷ ತನಿಖಾ ತಂಡವನ್ನು (SIT) ಆಂಧ್ರಪ್ರದೇಶ ಸರ್ಕಾರ ರಚಿಸಿತು. ಲಡ್ಡು ವಿವಾದದ ಕುರಿತ ತನಿಖೆಯನ್ನು ರಾಜ್ಯ ಸರ್ಕಾರ ನೇಮಿಸಿರುವ ಎಸ್‌ಐಟಿ ಮುಂದುವರಿಸಬೇಕೇ ಅಥವಾ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕೇ ಎಂಬುದರ ಕುರಿತು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net