Road Accident| ಟ್ರ್ಯಾಕ್ಟರ್​ಗೆ ಗುದ್ದಿದ​ ಲಾರಿ; 10 ಮಂದಿ ಸಾವು, ಮೂವರು ಗಂಭೀರ

UP Accident
Published on

ಲಖನೌ: ಲಾರಿ ಹಾಗೂ ಟ್ರ್ಯಾಕ್ಟರ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) 10 ಮಂದಿ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರದಲ್ಲಿ (Mirzapur) ನಡೆದಿದೆ.

ಮಿರ್ಜಾಪುರ- ವಾರಾಣಸಿ ಗಡಿಯಲ್ಲಿರುವ ಕಚವನ್ ಮತ್ತು ಮಿರ್ಜಾಮುರಾದ್ ನಡುವಿನ ಜಿ.ಟಿ ರಸ್ತೆಯಲ್ಲಿ ತಡರಾತ್ರಿ ಒಂದು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಭಿನಂದನ್ ಕುಮಾರ್​ ಸಿಂಗ್​, ಭದೋಹಿ ಜಿಲ್ಲೆಗೆ ಕಟ್ಟಡ ನಿರ್ಮಾಣಕ್ಕಾಗಿ ತೆರಳಿದ್ದ 13 ಜನರನ್ನು ಟ್ರ್ಯಾಕ್ಟರ್‌ ಟ್ರಾಲಿಯಲ್ಲಿ ಕರೆತರಲಾಗುತ್ತಿತ್ತು. ವೇಗವಾಗಿ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್​ಗೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ 10 ಮಂದಿ ಮೃತಪಟ್ಟಿದ್ದು, ಮೂವರು ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಸಂಬಂಧ FIR ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಭಿನಂದನ್ ಕುಮಾರ್​ ಸಿಂಗ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net