Bigg Boss ನೀಡಿದ್ದ ಟಾಸ್ಕ್​ ವೇಳೆ ನಡಯಿತು ಅಚಾತುರ್ಯ; ಇಬ್ಬರು ಆಸ್ಪತ್ರೆಗೆ ದಾಖಲು?

BBK 11
Published on

ಬೆಂಗಳೂರು: ಕನ್ನಡ ಕಿರುತೆರೆಯ ಪ್ರಖ್ಯಾತ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಶುರುವಾಗಿ ನಾಲ್ಕು ದಿನಗಳಾಗಿದ್ದು, ಮೊದಲ ವಾರವೇ ಸ್ಫರ್ಧಿಗಳ ನಡುವಿನ ಕಿತ್ತಾಟದಿಂದಾಗಿ ಕಾರ್ಯಕ್ರಮ ಸಖತ್​ ಸೌಂಡ್​ ಮಾಡುತ್ತಿದೆ. ಈ ಬಾರಿ ಕಾರ್ಯಕ್ರಮವನ್ನು ಸ್ವರ್ಗ-ನರಕ (Hell-Heaven) ಎಂಬ ಥೀಮ್​ ಅಡಿಯಲ್ಲಿ ವಿಂಗಡಿಸಲಾಗಿದ್ದು, ಒಂದಿಲ್ಲೊಂದು ಕಾರಣಕ್ಕೆ ವೀಕ್ಷಕರ ಗಮನ ಸೆಳೆಯುತ್ತಿದೆ. ಆದರೆ, ಇದೀಗ ಬಿಗ್​ಬಾಸ್​ನಲ್ಲಿ ನೀಡಲಾಗಿದ್ದ ಟಾಸ್ಕ್​ ವೇಳೆ ಸ್ಫರ್ಧಿಗಳಿಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್ ಮಾಡಲಾಗಿದೆ. ಸ್ವರ್ಗದಲ್ಲಿ ಇರುವವರಿಗೆ ಸಿಗುತ್ತಿರುವ ಸೌಲಭ್ಯ ನರದಲ್ಲಿ ಇರುವವರಿಗೆ ಸಿಗುತ್ತಿಲ್ಲ. ಈ ಕಾರಣಕ್ಕಾಗಿಯೇ ಸ್ಫರ್ಧಿಗಳ ನಡುವೆ ಕಿತ್ತಾಟವಾಗುತ್ತಿದೆ. ಇದೀಗ ಈ ಎರಡು ತಂಡಗಳಿಗೂ ಬಿಗ್​ಬಾಸ್​ ಟಾಸ್ಕ್​ ಒಂದನ್ನು ನೀಡಿದ್ದು, ಆಟ ಆಡುವಾಗ ಅವಘಡ ಸಂಭವಿಸಿದೆ. ಸದ್ಯ ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ಈ ಬಗ್ಗೆ ತಿಳಿದು ಬಂದಿದೆ.

ಏನೋ ಮಾಡಲು ಹೋಗಿ, ಇನ್ನೇನೋ ಮಾಡಿದ್ರಾ ಮನೆ ಸದಸ್ಯರು ಎಂಬ ಅಡಿಬರಹದಲ್ಲಿ ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ಸ್ಫರ್ಧಿಗಳು ಚೆಂಡನ್ನು ಹಿಡಿದು ಓಡುವುದನ್ನು ನೋಡಬಹುದಾಗಿದೆ. ಈ ವೇಳೆ ಚೆಂಡು ಹಿಡಿದು ಓಡುತ್ತಿದ್ದ ತ್ರಿವಿಕ್ರಂ ಅವರು ಬಿದ್ದಿದ್ದಾರೆ. ಇದರಿಂದ ಅವರಿಗೆ ಪೆಟ್ಟಾಗಿದೆ. ಇದಲ್ಲದೆ ಸ್ಫರ್ಧಿಗಳಾದ ಗೋಲ್ಡ್​ ಸುರೇಶ್​ ಹಾಗೂ ಮಾನಸಾಗೂ ಗಾಯವಾಗಿದ್ದು, ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ಅವರು ನರಳಾಡುತ್ತಿರುವುದನ್ನು ನೋಡಬಹುದಾಗಿದೆ.

ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ತ್ರಿವಿಕಮ್​ ಹಾಗೂ ಗೋಲ್ಡ್​ ಸುರೇಶ್​ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದ ಬಳಿಕ ಮನೆಗೆ ವಾಪಸ್​ ಆಗಿದ್ದಾರೆ. ಉಳಿದಂತೆ ಯಾವ ಸ್ಪರ್ಧಿಗೆ ಪೆಟ್ಟಾಗಿದೆ ಎಂಬುದು ಇನ್ನಷ್ಟೇ ವರದಿಯಾಗಬೇಕಿದೆ. ಇನ್ನೂ ಕಾರ್ಯಕ್ರಮ ಆರಂಭವಾದ ಮೊದಲ ವಾರವೇ ಕಿತ್ತಾಟ ಶುರುವಾಗಿದ್ದು, ಟಾಸ್ಕ್ ವೇಳೆ ಅವಘಡಗಳು ನಡೆಯುತ್ತಿವೆ. ಜಗದೀಶ್​ ಅವರು ಬೇರೆ ಸ್ಫರ್ಧಿಗಳ ವಿರುದ್ಧ ಕೂಗಾಡುತ್ತ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು, ಬಿಗ್​ಬಾಸ್​ಗೆ ಸವಾಲೆಸೆದಿದ್ದಾರೆ. ವಾರಾಂತ್ಯದಲ್ಲಿ ನಿರೂಪಕ ಕಿಚ್ಚ ಸುದೀಪ್​ ನಡೆಸಿಕೊಡುವ ಪಂಚಾಯಿತಿ ಸಂಚಿಕೆಗೆ ವೀಕ್ಷಕರು ಕಾಯುತ್ತಿದ್ದು, ಸ್ಫರ್ಧಿಗಳಿಗೆ ಕ್ಲಾಸ್ ತೆಗೆದುಕೊಳ್ಳೋದು​ ಪಕ್ಕಾ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net