ವಿಧಾನ ಪರಿಷತ್ ಚುನಾವಣೆ: ಸೇಡು ತೀರಿಸಿಕೊಳ್ಳಲು ಸಜ್ಜಾದ ದಳಪತಿಗಳು...

Election
Published on
ಹಾಸನದಲ್ಲಿ ತಮ್ಮ ಕುಟುಂಬದ ಮೂರನೇ ತಲೆಮಾರಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ವರಿಷ್ಠರು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ದಳಪತಿಗಳು ಮುಂದಾಗಿದ್ದಾರೆ. ಇವರೆಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಹಣಿಸಲು ಕಾಂಗ್ರೆಸ್ ನಾಯಕರು ಪಣತೊಟ್ಟಿದ್ದಾರೆ.

ಕಣದಲ್ಲಿ ಗೌಡರ ಕುಡಿ 

ಹಾಸನ ಕ್ಷೇತ್ರ

| ಮಂಜು ಬನವಾಸೆ ಹಾಸನ

ಜೆಡಿಎಸ್ ಒಂದು ಕುಟುಂಬದ ಪಕ್ಷ ಎನ್ನುವ ವಿರೋಧಿಗಳ ಆರೋಪದ ನಡುವೆಯೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಡಾ.ಸೂರಜ್ ರೇವಣ್ಣ ಕಣಕ್ಕಿಳಿದಿರುವುದು ವಿಧಾನ ಪರಿಷತ್ ಹಾಸನ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯ ಕುತೂಹಲ ಹೆಚ್ಚಿಸಿದೆ. ಕಾಂಗ್ರೆಸ್​ನಿಂದ ಚನ್ನರಾಯಪಟ್ಟಣ ಎಪಿಎಂಸಿ ನಿರ್ದೇಶಕ ಎಂ.ಶಂಕರ್, ಬಿಜೆಪಿಯಿಂದ ಮಾಜಿ ಶಾಸಕ, ಈ ಹಿಂದೆ ಜೆಡಿಎಸ್​ನಲ್ಲೇ ಇದ್ದ ಎಚ್.ಎಂ.ವಿಶ್ವನಾಥ್ ಸ್ಪರ್ಧಿಸಿದ್ದಾರೆ.

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಜೆಡಿಎಸ್ ಸಂಘಟನೆ ಬಲಯುತವಾಗಿದ್ದು, ಪಕ್ಷ ಬೆಂಬಲಿತ ಸ್ಥಳೀಯ ಸಂಸ್ಥೆಗಳ ಸದಸ್ಯರ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕಾಗಿಯೇ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಿರಿಯ ಪುತ್ರನನ್ನು ಮುಖ್ಯವಾಹಿನಿ ರಾಜಕೀಯಕ್ಕೆ ಪರಿಚಯಿಸಲು ಸುರಕ್ಷಿತವಾದ ಪರಿಷತ್ ಚುನಾವಣೆ ಆಯ್ದುಕೊಂಡಿದ್ದಲ್ಲದೆ, ಖುದ್ದು ತಾವೇ ಪ್ರಚಾರದ ಸಾರಥ್ಯ ವಹಿಸಿಕೊಂಡಿದ್ದಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಜೆಡಿಎಸ್ ಸದಸ್ಯರಿದ್ದು, ಅವರೆಲ್ಲರೂ ವರಿಷ್ಠರ ಕುಟುಂಬದ ಪ್ರತಿಷ್ಠೆ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ. ಆದರೆ ಕಾಂಗ್ರೆಸ್​ಗೆ ಜಿಲ್ಲೆಯಲ್ಲಿ ಶಾಸಕರ ಬೆಂಬಲವೇ ಇಲ್ಲ. ಗ್ರಾಪಂ ಚುನಾವಣೆಯಲ್ಲಿ ತೋರಿದ್ದ ಸಮಾಧಾನಕರ ಪ್ರದರ್ಶನ ಸದ್ಯ ಸ್ಪರ್ಧೆಯನ್ನು ತೀವ್ರ ಹಣಾಹಣಿ ಮಟ್ಟಕ್ಕೆ ಕೊಂಡೊಯ್ಯಬಹುದು.

ಜೆಡಿಎಸ್ ಕುಟುಂಬದ ಕಡು ವಿರೋಧಿಗಳಾಗಿರುವ ಕೆಲವು ಬಿಜೆಪಿ ಮುಖಂಡರು ಕಾಂಗ್ರೆಸ್ ಅಭ್ಯರ್ಥಿ ಎಂ.ಶಂಕರ್ ಅವರಿಗೆ ಒಳಗೊಳಗೆ ಸಹಕಾರ ನೀಡುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿ ಬರುತ್ತಿದೆ. ಇದರಿಂದ ಕಾಂಗ್ರೆಸ್ ಬಲವರ್ಧನೆಯಾಗುತ್ತಿರುವ ಲಕ್ಷಣ ಕಾಣಿಸುತ್ತಿವೆ. ಮಿಕ್ಕೆರಡು ಪಕ್ಷಗಳಿಗೆ ಹೋಲಿಸಿದರೆ ಬಿಜೆಪಿ ಪ್ರಚಾರ ಇನ್ನೂ ಟೇಕಾಫ್ ಆಗಿಲ್ಲ. ಹಾಸನ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಶಾಸಕರಿದ್ದಾರೆ. ಆದರೆ ನಗರ ಸುತ್ತಲಿನ 9 ಗ್ರಾಮ ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆ ಚಾಲನೆಯಲ್ಲಿ ಇರುವುದರಿಂದ ಅವುಗಳಿಗೆ ಚುನಾವಣೆ ನಡೆದಿಲ್ಲ. ಇದು ಕ್ಷೇತ್ರದ ಮತದಾರರ ಸಂಖ್ಯೆ ಕಡಿತಗೊಳಿಸಿದೆ. ಒಂದೆರಡು ತಾಲೂಕು ಹೊರತುಪಡಿಸಿದರೆ, ಉಳಿದೆಡೆ ಪಕ್ಷದ ಸಂಘಟನೆಯೂ ಬಲವಾಗಿಲ್ಲ. ಶಾಸಕ ಪ್ರೀತಂ ಗೌಡ ಅಭ್ಯರ್ಥಿ ಪರ ಓಡಾಟ ನಡೆಸುತ್ತಿದ್ದರೆ, ಮಾಜಿ ಸಚಿವ ಎ.ಮಂಜು ಪಕ್ಷದಿಂದ ಒಂದು ಕಾಲು ಹೊರಗಿಟ್ಟಿರುವುದರಿಂದ ಕಾಂಗ್ರೆಸ್ ಲಾಭ ನಿರೀಕ್ಷಿಸುತ್ತಿದೆ. ಇದು ಬಿಜೆಪಿಗೆ ಹಿನ್ನಡೆಯಾಗಿದೆ. ಅಂತಿಮವಾಗಿ ಜೆಡಿಎಸ್-ಕಾಂಗ್ರೆಸ್ ನಡುವೆ ಬಿರುಸಿನ ಸ್ಪರ್ಧೆ ಸಾಧ್ಯತೆ ಕಂಡುಬರುತ್ತಿದೆ.

ದಳಕ್ಕೆ ಕಾಡುತ್ತಿದೆ ಹಿಂದಿನ ಸೋಲು: 2015ರ ಚುನಾವಣೆಯಲ್ಲಿ ಜೆಡಿಎಸ್ ಈಗಿನಷ್ಟೇ ಪ್ರಬಲವಾಗಿತ್ತು. ಅಲ್ಲದೆ ವಿಧಾನಪರಿಷತ್​ನಲ್ಲಿ ಪ್ರಶ್ನೆಗಳ ಮೂಲಕವೇ ವರ್ಚಸ್ಸು ಬೆಳೆಸಿಕೊಂಡಿದ್ದ ಪಟೇಲ್ ಶಿವರಾಂ ಮರು ಆಯ್ಕೆ ಬಯಸಿದ್ದರು. ಅವರ ಹಾದಿ ಅತ್ಯಂತ ಸುಗಮವಾಗಿ ಗೋಚರಿಸಿತ್ತು. ಆದರೆ ಎದುರಾಳಿ ಕಾಂಗ್ರೆಸ್​ನ ಎಂ.ಎ.ಗೋಪಾಲಸ್ವಾಮಿ ಮುಖಂಡರ ಮೂಲಕ ಮತದಾರರನ್ನು ಸಂರ್ಪಸುವ ಸಾಂಪ್ರದಾಯಿಕ ವಿಧಾನ ಕೈಬಿಟ್ಟು ಮತದಾನದ ಹಕ್ಕು ಹೊಂದಿರುವ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ತಲುಪಬೇಕಿದ್ದನ್ನು ನೇರವಾಗಿ ಅವರ ಕೈಗಿಡುವ ಕಾರ್ಯತಂತ್ರ ಅನುಸರಿಸಿದರು. ಸೋರಿಕೆಗೆ ಆಸ್ಪದ ಇಲ್ಲದ ಈ ಮಾರ್ಗ ಯಶಸ್ಸು ತಂದುಕೊಟ್ಟರೆ, ಮುಖಂಡರನ್ನು ನಂಬಿ ಕುಳಿತ ಪಟೇಲ್ ಶಿವರಾಂ ಪರಾಭವಗೊಂಡರು. ಈ ಬಾರಿ ಅಂತಹ ಮೈಮರೆವಿಗೆ ಆಸ್ಪದವಾಗಬಾರದು ಎಂದು ಜೆಡಿಎಸ್ ನಾಯಕರು ಅತೀವ ಎಚ್ಚರಿಕೆ ವಹಿಸಿದ್ದಾರೆ.

ಕುಟುಂಬ ರಾಜಕಾರಣದ ಬಗ್ಗೆ ಟೀಕೆ: ದೇವೇಗೌಡರ ಕುಟುಂಬ ರಾಜಕೀಯವೇ ಕಾಂಗ್ರೆಸ್ ಹಾಗೂ ಬಿಜೆಪಿಗೆ ಕಟು ಟೀಕೆಯ ವಿಷಯವಾಗಿ ದೊರಕಿದ್ದು, ಎಲ್ಲ ಮುಖಂಡರೂ ಜೆಡಿಎಸ್​ನಲ್ಲಿ ಟಿಕೆಟ್ ಪಡೆಯುವ ಯೋಗ್ಯತೆ ಹೊಂದಿರುವ ಬೇರೆ ಕಾರ್ಯಕರ್ತರು ಒಬ್ಬರೂ ಇಲ್ಲವೇ ಎಂದು ಪ್ರಶ್ನಿಸುವ ಮೂಲಕ ಜೆಡಿಎಸ್ ಮತಗಳನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಪರೋಕ್ಷವಾಗಿ ಜೆಡಿಎಸ್ ಅಭ್ಯರ್ಥಿ ಸೂರಜ್ ಅವರ ಆಸ್ತಿ ವಿವರವನ್ನೊಳಗೊಂಡ ಪ್ರಮಾಣಪತ್ರದಲ್ಲಿನ ಕೆಲವು ಅಂಶಗಳನ್ನು ಮುಂದಿಟ್ಟು ಅವರ ವೈಯಕ್ತಿಕ ವಿಷಯಗಳನ್ನು ಬಳಸಿ ಕೆಣಕುವ ಕಾರ್ಯತಂತ್ರವೂ ಚಾಲನೆಯಲ್ಲಿದೆ. ಇದಕ್ಕೆ ಪ್ರತಿಯಾಗಿ ಜೆಡಿಎಸ್ ಮುಖಂಡರು ಪಕ್ಷ ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ನೋಡಿ ಅದಕ್ಕೆ ಕೂಲಿಯಾಗಿ ಮತ ನೀಡುವಂತೆ ಕೋರುತ್ತಿದ್ದಾರೆ. ಉಳಿದೆರಡೂ ಪಕ್ಷಗಳು ಜಿಲ್ಲೆಗೆ ಅನ್ಯಾಯ ಮಾಡಿವೆ ಎಂದು ಜೋರು ಧ್ವನಿಯಲ್ಲಿ ಮಾತನಾಡುತ್ತಿದ್ದಾರೆ.

ಎಲ್ಲರ ಟಾರ್ಗೆಟ್ ದಳ

ಮಂಡ್ಯಕ್ಷೇತ್ರ

| ಕೆ.ಎನ್.ರಾಘವೇಂದ್ರ ಮಂಡ್ಯ

ರಾಜಕೀಯ ಕ್ಷೇತ್ರದಲ್ಲಿ ವಿಭಿನ್ನ, ವಿಶೇಷತೆಗಳಿಂದಲೇ ಹೆಸರುವಾಸಿಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಸದಸ್ಯ ಸ್ಥಾನದ ಆಯ್ಕೆಗೆ ನಡೆಯುತ್ತಿರುವ ಚುನಾವಣೆ ಕಾವೇರಿದೆ. ಪ್ರತಿ ಚುನಾವಣೆಯಲ್ಲಿಯೂ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿರುತ್ತದೆ. ಈ ಬಾರಿ ಎರಡು ಪಕ್ಷಕ್ಕೂ ಠಕ್ಕರ್ ಕೊಟ್ಟು ಕಮಲ ಅರಳಿಸಲು ಬಿಜೆಪಿ ತಂತ್ರ ರೂಪಿಸುತ್ತಿದೆ.

ಜೆಡಿಎಸ್​ನಿಂದ ಹಾಲಿ ಸದಸ್ಯ ಎನ್.ಅಪ್ಪಾಜಿಗೌಡ, ಕಾಂಗ್ರೆಸ್​ನಿಂದ ದಿನೇಶ್ ಗೂಳಿಗೌಡ, ಬಿಜೆಪಿಯಿಂದ ಬೂಕಹಳ್ಳಿ ಮಂಜು ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಜಿ.ಬಿ.ಮಂಜುನಾಥ್ ಕಣದಲ್ಲಿದ್ದಾರೆ. ಪ್ರಮುಖವಾಗಿ ಜಿಲ್ಲೆಯ ಜೆಡಿಎಸ್ ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ ಕಾಂಗ್ರೆಸ್, ಬಿಜೆಪಿಗೆ ದಳದ ಮತಗಳೇ ಟಾರ್ಗೆಟ್ ಆಗಿವೆ. ಅಂತೆಯೇ ದಳ ಪಡೆ ಸೋಲಿಸಲು ರೈತ ಸಂಘದ ಜತೆಗೆ ಸಂಸದೆ ಸುಮಲತಾ ಅಂಬರೀಷ್ ಕೂಡ ಕಾಂಗ್ರೆಸ್ ಅಥವಾ ಬಿಜೆಪಿಗೆ ಬೆಂಬಲ ನೀಡುವುದು ಖಚಿತ.

ಇನ್ನು ಕಾಂಗ್ರೆಸ್​ನಿಂದ ದಿನೇಶ್ ಗೂಳಿಗೌಡ ಹೆಸರನ್ನು ಅಂತಿಮಗೊಳಿಸಿದಾಗ ಅಚ್ಚರಿ ಮೂಡಿಸಿತ್ತು. ಕಾರಣ ಇವರ ಹೆಸರು ಅಷ್ಟೊಂದು ಪ್ರಚಲಿತದಲ್ಲಿರಲಿಲ್ಲ. ಮೂಲತಃ ಮದ್ದೂರಿನವರಾದ ದಿನೇಶ್ ಸುಮಾರು ವರ್ಷ ಕೆಪಿಸಿಸಿಯಲ್ಲಿ ಮಾಧ್ಯಮ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಿದ್ದರು. ಈ ಮಾನದಂಡದ ಆಧಾರದ ಮೇಲೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ. ಇವರ ಬೆನ್ನಿಗೆ ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಸೇರಿ ಮಾಜಿ ಶಾಸಕರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರದಲ್ಲಿಯೂ ಸೋಲು ಅನುಭವಿಸಿರುವುದರಿಂದ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಖುದ್ದು ನಾಯಕರೇ ಅಖಾಡದಲ್ಲಿದ್ದು, ಕ್ಷೇತ್ರವಾರು ಗೇಮ್ ಪ್ಲ್ಯಾನ್ ಮಾಡುತ್ತಿದ್ದಾರೆ.

ಕೆ.ಆರ್.ಪೇಟೆ ವಿಧಾನಸಭೆ ಉಪಚುನಾವಣೆಯ ಗೆಲುವಿನ ಬಳಿಕ ಬಿಜೆಪಿ ಕೂಡ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಇದರಿಂದಲೇ ಜೆಡಿಎಸ್ ಮತ್ತು ಕಾಂಗ್ರೆಸ್​ಗೆ ಠಕ್ಕರ್ ಕೊಡುವ ವಿಶ್ವಾಸದಲ್ಲಿದೆ. ಒಟ್ಟಾರೆ ಪ್ರಸ್ತುತ ತ್ರಿಕೋನ ಸ್ಪರ್ಧೆಯಂತಹ ಸ್ಥಿತಿ ಕಂಡುಬರುತ್ತಿದ್ದರೂ ಮತದಾನದ ದಿನ ಸಮೀಪಿಸುತ್ತಿದ್ದಂತೆ ನಡೆಯುವ ತಂತ್ರಗಾರಿಕೆ ಹಾಗೂ ರಾಜ್ಯಮಟ್ಟದ ನಾಯಕರ ಭಾಷಣಗಳು ಪ್ರಮುಖ ಪಾತ್ರ ವಹಿಸಲಿವೆ. ಪಕ್ಷ ಸಿದ್ಧಾಂತಕ್ಕಿಂತ ಈ ಬಾರಿ ಹಣವೇ ನಿರ್ಣಾಯಕ ಪಾತ್ರವಹಿಸುವ ಲಕ್ಷಣಗಳೂ ಸಕ್ಕರೆ ಜಿಲ್ಲೆಯಲ್ಲಿ ಗೋಚರಿಸುತ್ತಿವೆ.

ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಜೆಡಿಎಸ್: ಕಳೆದ ಲೋಕಸಭಾ ಚುನಾವಣೆ ಸೋಲಿನ ಬಳಿಕ ನಡೆಯುತ್ತಿರುವ ಚುನಾವಣೆ ಹಿನ್ನೆಲೆಯಲ್ಲಿ ತಪ್ಪು ಮರುಕಳಿಸದಂತೆ ಜೆಡಿಎಸ್ ಎಚ್ಚರಿಕೆ ವಹಿಸುತ್ತಿದೆ. ಅಭ್ಯರ್ಥಿ ಎನ್.ಅಪ್ಪಾಜಿಗೌಡ ಅವರಿಗೆ ನಿಖಿಲ್ ಕುಮಾರಸ್ವಾಮಿ, ಆರು ಶಾಸಕರು, ಒಬ್ಬ ಎಂಎಲ್​ಸಿ ಸಾಥ್ ನೀಡುತ್ತಿದ್ದಾರೆ. 2015ರಲ್ಲಿ ನಡೆದಿದ್ದ ಚುನಾವಣೆಯಷ್ಟು ಸುಲಭವಾಗಿಲ್ಲ ಎನ್ನುವ ಅರಿವು ದಳಪತಿಗಳಿಗಿದೆ. ಆದ್ದರಿಂದ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ. ಚುನಾವಣೆ ಪ್ರಾರಂಭದಲ್ಲಿ ಸ್ವಲ್ಪ ಹಿಂದುಳಿದಂತೆ ಕಂಡರೂ ನಂತರ ದಳಪತಿಗಳು ಟೇಕಾಫ್ ಆಗಿದ್ದಾರೆ. ಹೆಚ್ಚು ಸದಸ್ಯರ ಬಲವಿರುವುದರಿಂದ ಮತಗಳು ಬೇರೆ ಪಕ್ಷಕ್ಕೆ ಹೋಗದಂತೆ ನೋಡಿಕೊಳ್ಳುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ತಮ್ಮ ಸೋಲನ್ನು ನೆನಪಿಸಿ ಮತದಾರರನ್ನು ನಿಖಿಲ್ ಕುಮಾರಸ್ವಾಮಿ ಮನವೊಲಿಸುತ್ತಿದ್ದಾರೆ.

ವರ್ಷದಿಂದಲೇ ಬಿಜೆಪಿ ಸಿದ್ಧತೆ: ಚುನಾವಣೆಗೆ ಒಂದು ವರ್ಷವಿರುವಂತೆಯ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಎಲ್ಲ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯರನ್ನು ಮುಖಾಮುಖಿ ಭೇಟಿ ಮಾಡಿ ವಿಶ್ವಾಸ ಗಳಿಸಿಕೊಂಡಿದ್ದಾರೆ. ಈ ವೇಳೆ ಸದಸ್ಯರಿಂದ ಉತ್ತಮ ಸ್ಪಂದನೆ ಸಿಕ್ಕಿರುವುದರಿಂದ ವಿಶ್ವಾಸ ಹೆಚ್ಚಾಗುವಂತೆ ಮಾಡಿದೆ. ಇದಲ್ಲದೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅವರಿಗೂ ಪ್ರತಿಷ್ಠೆ ಪ್ರಶ್ನೆಯಾಗಿರುವುದರಿಂದ ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ ನಾಯಕರು ಮತಯಾಚನೆ ಮಾಡಿದ್ದರಿಂದ ಈ ಚುನಾವಣೆಯಲ್ಲಿ ಸಂಸದೆ ಬೆಂಬಲಿಸುವ ವಿಶ್ವಾಸ ಹೊಂದಿದ್ದಾರೆ. ಬಿಜೆಪಿ ಗೆದ್ದರೆ ಗ್ರಾಪಂ ಸದಸ್ಯರಿಗೆ ವಿಶೇಷ ಸೌಲಭ್ಯ ಒದಗಿಸಿಕೊಡುವುದು ಬೂಕಹಳ್ಳಿ ಮಂಜು ಅವರ ಪ್ರಣಾಳಿಕೆ ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net