

ಬೆಂಗಳೂರು: ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲು ನೀಡದಿದ್ರೆ ರಾಜೀನಾಮೆ ನೀಡಲು ಜನಾಂಗದ ಎಲ್ಲ ಶಾಸಕರು ಸಿದ್ಧರಾಗಿದ್ದಾರೆ.
ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರದಿಂದ ಆಯ್ಕೆಯಾದ ಎಲ್ಲ ಶಾಸಕರು ರಾಜೀನಾಮೆಗೆ ಸಿದ್ಧ ಎಂದು ಘೋಷಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಮಹಾಸಂಸ್ಥಾನ ಮಠದಲ್ಲಿ ಜಗದ್ಗುರು ವಾಲ್ಮೀಕಿ ಶ್ರೀ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮುದಾಯದ ರಾಜ್ಯಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಶ್ರೀಗಳು ತಿಳಿಸಿದಲ್ಲಿ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮ ನೀಡಲು ಸಿದ್ಧ ಎಂದು ಶಾಸಕರ ಘೋಷಿಸಿದ್ದಾರೆ. ಶೇ.7.5 ರಷ್ಟು ಮೀಸಲಿಗಾಗಿ ಹೋರಾಟ ಅನಿವಾರ್ಯ. ಈ ಬಗ್ಗೆ ಸರ್ಕಾರಕ್ಕೆ ಒತ್ತಡ ಹೇರಲು ರಾಜೀನಾಮೆಗೂ ಸಿದ್ಧ ಎಂದು ಶ್ರೀಗಳ ಎದುರು ಪ್ರಮಾಣ ಮಾಡಿದ್ದನ್ನು ಶಾಸಕರು ಪ್ರಸ್ತಾಪಿಸಿದ್ದಾರೆ.
ರಾಜೀನಾಮೆ ಪರಿಹಾರವಲ್ಲ: ಅಧಿಕಾರದಲ್ಲಿದ್ದೇ, ಹೋರಾಟ ಮಾಡಬೇಕು ರಾಜೀನಾಮೆ ನೀಡಿದ್ರೆ ಯಾವುದೇ ಪ್ರಯೋಜನವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ. ಶ್ರೀರಾಮುಲು ಸರ್ಕಾರದಲ್ಲಿದ್ದಾರೆ. ಅವರ ನೇತೃತ್ವದಲ್ಲೇ ಹೋರಾಟ ಮಾಡೋಣ. ಹಲವು ವರ್ಷಗಳಿಂದ ಮೀಸಲು ಹೆಚ್ಚಳಕ್ಕೆ ಹೋರಾಟ ನಡೆಸಿದ್ದೇವೆ. ಆದ್ರೆ, ಸರ್ಕಾರ ಮೇಲ್ವರ್ಗದವರಿಗೆ ಶೇ.10 ಮೀಸಲು ನೀಡಿದ ಎಲ್ಲಿಂದ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.
ಸಚಿವ ಶ್ರೀರಾಮುಲು ಹೇಳಿಕೆ: ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬಂದ್ರೆ, 24 ಗಂಟೆಯಲ್ಲಿ ಶೇ.7.5 ಮೀಸಲು ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದೆ. ಈಗಲೂ ಆ ಮಾತಿಗೆ ಬದ್ಧನಾಗಿದ್ದೇನೆ. ಎಲ್ಲರೂ ಒಗ್ಗಟ್ಟಾಗಿದ್ದರೆ ಇನ್ನಷ್ಟು ಶಕ್ತಿ ಹೆಚ್ಚುತ್ತದೆ. ನ್ಯಾ.ನಾಗಮೋಹನದಾಸ್ ವರದಿಯಲ್ಲಿ ಶೇ.5 ಮೀಸಲಿಗೆ ಶಿಫಾರಸು ಮಾಡಿದ್ದಾರೆ. ಆದ್ರೂ, ಸಿಎಂ ಯಡಿಯೂರಪ್ಪ ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲು ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಶ್ರೀ ಪ್ರಸನ್ನಾನಂದ ಶ್ರೀಗಳ ಹೇಳಿಕೆ: ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಮೀಸಲು ಆಗ್ರಹಕ್ಕಾಗಿ ರಾಜೀನಾಮೆಗೂ ಸಿದ್ಧರಾಗಿದ್ದಾರೆ. ಸತೀಶ್ ಜಾರಕಿಹೊಳಿ, ಶ್ರೀರಾಮುಲು ನೇತೃತ್ವದಲ್ಲಿ ಸೆ.೨೧ಕ್ಕೆ ನಿಯೋಗ ತೆಗೆದುಕೊಂಡು ಹೋಗುತ್ತೇವೆ. ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದರೆ ಅಭಿನಂದನೆ. ಮೀನಮೇಷ ಮಾಡಿದ್ರೆ.. ನಿಮಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತೇವೆ ಎಂದು ಶ್ರೀ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.
ಶಾಸಕರಾದ ಎಸ್.ವಿ. ರಾಮಚಂದ್ರಪ್ಪ, ರಾಜುಗೌಡ, ಗಣೇಶ್, ಇ. ತುಕಾರಾಂ, ರಘುಮೂರ್ತಿ, ಅನಿಲ್ ಚಿಕ್ಕಮಾದು, ಪ್ರತಾಪ್‌ಗೌಡ, ಸಂಸದ ದೇವೇಂದ್ರಪ್ಪ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಇತರರು ಉಪಸ್ಥಿತರರಿದ್ದರು.