

ಬೆಂಗಳೂರು: ಸಾರ್ವಜನಿಕ ಉದ್ಯಾನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ನಟಿ ಸಂಯುಕ್ತ ಹೆಗ್ಡೆಯನ್ನು ಜನರೇ ಪಾರ್ಕ್ನಲ್ಲಿ ಲಾಕ್ ಮಾಡಿದ್ದಾರೆ. ಅವರ ವರ್ತನೆಗೆ ಭಾರಿ ಆಕ್ಷೇಪವೂ ವ್ಯಕ್ತವಾಗಿ, ವಾಗ್ವಾದಕ್ಕೂ ಕಾರಣವಾಗಿದೆ.
ರಾಜಧಾನಿಯ ಅಗರ ಉದ್ಯನವನದಲ್ಲಿ ಸಂಯುಕ್ತ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪಾರ್ಕ್ಗೆ ವಾಯುವಿಹಾರಕ್ಕೆಂದು ಬಂದಿದ್ದ ಜನರೇ ನಟಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತುಂಡುಡುಗೆಯಲ್ಲಿದ್ದ ಕಿರಿಕ್ ಹುಡುಗಿ: ಸಂಯುಕ್ತ ಹೆಗ್ಡೆ ಮತ್ತಾಕೆಯ ಸಂಗಡಿಗರು ಪಾರ್ಕ್ನಲ್ಲಿ ತುಂಡುಡುಗೆ ತೊಟ್ಟು ಹುಲಾ ಲೂಪ್ ಡಾನ್ಸ್ ಮಾಡಿದ್ದಾರೆ ಎಂದು ಜನರು ಆರೋಪಿಸಿದ್ದಾರೆ. ನಟಿಯ ಈ ವರ್ತನೆಯನ್ನು ಪ್ರಶ್ನಿಸಿದಾಗ ಭಾರಿ ವಾಗ್ವಾದ ನಡೆದಿದೆ. ಜನರು ನಟಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪಾರ್ಕ್ನ ಗೇಟ್ ಬಂದ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದಾರೆ.
ಇದು ಮತ್ತೊಂದು ಸುತ್ತಿನ ವಾಗ್ವಾದಕ್ಕೆ ಕಾರಣವಾಗಿದೆ. ಗೇಟ್ ತೆರೆಯುವಂತೆ ಜನರೊಂದಿಗೆ ನಟಿ ಜಗಳವಾಡಿದ್ದಾರೆ. ಅಲ್ಲಿಗೆ ಬಂದ ಪೊಲೀಸರು ನಟಿಯನ್ನು ಕರೆದುಕೊಂಡು ಹೋಗಿದ್ದಾರೆ.
ಈ ವಿದ್ಯಮಾನವನ್ನೆಲ್ಲ ಸ್ವತಃ ಸಂಯುಕ್ತಾ ಇನ್ಸ್ಟಾಗ್ರಾಂ ಲೈವ್ ಬಂದು ಚಿತ್ರೀಕರಿಸಿದ್ದಾರೆ. ಸ್ಪೋರ್ಟ್ಸ್ ಬ್ರಾ ಧರಿಸಿ ವ್ಯಾಯಾಮ ಮಾಡಿದರೆ ಏನು ತಪ್ಪು ಎಂದು ಪ್ರಶ್ನಿಸಿದ್ದಾರೆ. ಇದಕ್ಕಾಗಿ ಜನರೆಲ್ಲ ನನ್ನ ವಿರುದ್ಧ ತಿರುಗಿ ಬಿದ್ದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.