ಶಾಸಕ ಬೆಲ್ಲದ್​ ಫೋನ್​ ಕದ್ದಾಲಿಕೆ ಪ್ರಕರಣದ ತನಿಖೆ ಚುರುಕು; ಕರೆ ಮಾಡಿದ್ದು ಯುವರಾಜನೇ?

Untitled-1
Published on

ಬೆಂಗಳೂರು: ಶಾಸಕ ಅರವಿಂದ ಬೆಲ್ಲದ್ ಅವರ ಫೋನ್​ ಕದ್ದಾಲಿಕೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇಂದು ತನಿಖೆ ನಡೆಸಿರುವ ಪೊಲೀಸರು ಶಾಸಕರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಇದನ್ನಾಧರಿಸಿ ತನಿಖೆ ಮುಂದುವರಿದಿದ್ದು, ಪ್ರಕರಣ ಕುತೂಹಲ ಕೆರಳಿಸಿದೆ.

ಶಾಸಕ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಪಿ‌ ಅನುಚೇತ್ ನೇತೃತ್ವದಲ್ಲಿ ಎಸಿಪಿ‌ ಯತಿರಾಜ್ ತಂಡ ತನಿಖೆ ನಡೆಸಿದೆ. ಯುವರಾಜ್ ಹೆಸರಿನ ವ್ಯಕ್ತಿ ಕರೆ ಮಾಡಿರುವ ಬಗ್ಗೆ ಶಾಸಕ ಬೆಲ್ಲದ್ ಹೇಳಿಕೆ ನೀಡಿದ್ದು, ಅವರು ತಮಗೆ ಕರೆ ಬಂದಿದ್ದ ನಂಬರನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ. ಬೆಲ್ಲದ್ ನೀಡಿರುವ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೆಲ್ಲದ್​ ಮಾಹಿತಿ ನೀಡಿರುವ ಆ ಫೋನ್​ ನಂಬರ್ ಯಾರ ಹೆಸರಿನಲ್ಲಿದೆ ಎಂಬುದರ ಜತೆಗೆ ಟವರ್​ ಆಧರಿಸಿ ಲೊಕೇಷನ್​ ಇತ್ಯಾದಿ ವಿವರ ಸಂಗ್ರಹಿಸಿರುವ ಪೊಲೀಸರು, ಅಷ್ಟಕ್ಕೂ ಕರೆ ಮಾಡಿದ್ದು ಯುವರಾಜನೇ ಅಥವಾ ಆತನ ಹೆಸರಿನಲ್ಲಿ ಬೇರೆ ಯಾರಾದರೂ ಕರೆ ಮಾಡಿರಬಹುದೇ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆಸುತ್ತಿದ್ದಾರೆ.

ಈ ನಡುವೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲೂ ಸಂಚಲನ ಉಂಟಾಗಿದೆ. ಒಂದುವೇಳೆ ಕರೆ ಮಾಡಿರುವುದು ಯುವರಾಜ್​ ಆಗಿದ್ದರೆ ಜೈಲು ಸಿಬ್ಬಂದಿ-ಅಧಿಕಾರಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಜೈಲಿನಲ್ಲಿ ಮೊಬೈಲ್​ಫೋನ್ ನಿಷೇಧಿಸಲಾಗಿದ್ದರೂ ಯುವರಾಜ್​ಗೆ ಮೊಬೈಲ್​​ಫೋನ್​ ಸಿಕ್ಕಿದ್ದು ಹೇಗೆ? ಆತನಿಗೆ ಅದನ್ನು ಕೊಟ್ಟಿದ್ದು ಯಾರು? ಎಂಬುದೂ ತನಿಖೆಯಾಗಲಿದೆ. ಮಾತ್ರವಲ್ಲ ಯುವರಾಜ್ ಇನ್ನೂ ಯಾರು ಯಾರಿಗೆ ಕರೆ ಮಾಡಿದ್ದಾನೆ? ಬೆಲ್ಲದ್​ಗೆ ಕರೆ ಮಾಡಿದ್ದರ ಉದ್ದೇಶವೇನು‌? ಎಂಬೆಲ್ಲ ತನಿಖೆ ನಡೆಯಲಿದೆ.

ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮಗಳು ನಡೆಯುತ್ತಿರುವ ಕುರಿತು ಐಪಿಎಸ್​ ಅಧಿಕಾರಿ ರೂಪಾ ಅವರು ಈ ಹಿಂದೆ ಧ್ವನಿ ಎತ್ತಿದ್ದರು. ಇದರಿಂದಾಗಿ ಜೈಲಿನಲ್ಲಿ ಮೊಬೈಲ್​ಫೋನ್​, ಗಾಂಜಾ ಬಳಕೆ ಸೇರಿ ಹಲವು ವಸ್ತುಗಳ ಅಕ್ರಮ ಸರಬರಾಜು ವಿಷಯ ಸದ್ದು ಮಾಡಿತ್ತು. ಆ ಬಳಿಕ ಇಂಥ ಅಕ್ರಮಗಳಿಗೆ ಕೊಂಚ ತೆರೆಬಿದ್ದಿದ್ದರೂ ಅವುಗಳು ಮತ್ತೆ ಮುಂದುವರಿದಿರುವ ಅನುಮಾನ ಯುವರಾಜ್​ ಪ್ರಕರಣದಿಂದ ಮೂಡಿದೆ. ಒಂದುವೇಳೇ ಜೈಲಿನಿಂದ ಯುವರಾಜ್ ಕರೆ ಮಾಡಿದ್ದು ಸಾಬೀತಾದರೆ ಜೈಲು ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆಯೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net