'ನಾನು ಅತ್ಯಂತ ಮೆಲುದನಿಯಲ್ಲಿ "ಏನೋ ಸುದ್ದಿ ಕೇಳಿದೆ ನಿಜವಾ" ಎಂದು ಸಿಟಿ ರವಿ ಅವರನ್ನು ಪ್ರಶ್ನಿಸಿದೆ..'

Dharme Gowda and Suresh Kumar
Published on

ಬೆಂಗಳೂರು: ವಿಧಾನ ಪರಿಷತ್ತಿನ ಉಪಸಭಾಪತಿ ಎಸ್​.ಎಲ್.ಧರ್ಮೇಗೌಡರ ನಿಧನದ ಸುದ್ದಿ ರಾಜಕೀಯವಾಗಿ ತಲ್ಲಣ ಮೂಡಿಸಿದ್ದು, ಸರಿಯಾದ ಕಾರಣವರಿಯದೇ ಕಂಗಾಲಾಗಿದ್ದಾರೆ ಬಹುತೇಕರು. ಬೆಳ್ಳಂಬೆಳಗ್ಗೆಯೇ ಶಾಕಿಂಗ್ ನ್ಯೂಸ್ ಆಗಿ ಈ ಸುದ್ದಿ ಬಂದೆರಗಿದ ಕಾರಣ ಬಹುತೇಕರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಬೆಳಗ್ಗೆ ಅವರಿಗಾದ ಅನುಭವವನ್ನು ಫೇಸ್​ಬುಕ್​ನಲ್ಲಿ ಹಂಚಿಕೊಂಡದ್ದು ಹೀಗೆ..

ಪರಿಷತ್ತಿನ ಉಪಸಭಾಪತಿ ಶ್ರೀ ಧರ್ಮೇಗೌಡರೇ, ಏಕೆ ಹೀಗಾಯಿತು?

ಇಂದು ಬೆಳಗ್ಗೆ ನಾನು ನನ್ನ ಬೆಳಗಿನ ವ್ಯಾಯಾಮ ಮುಗಿಸಿ ಯಾರಿಗೊ ಮೆಸೇಜ್ ಕಳಿಸಬೇಕೆಂದು ಮೊಬೈಲ್ ತೆರೆದಾಗ ಶ್ರೀ ಧರ್ಮೇಗೌಡ ಅಕಾಲಿಕ ನಿಧನದ ಸುದ್ದಿ ಓದಿದೆ. ನಿಜಕ್ಕೂ ದಿಗ್ಭ್ರಮೆಯಾಯಿತು.

ಆಗ ಸುಮಾರು ಬೆಳಗಿನ ಜಾವ ೫.೩೦. ತಕ್ಷಣ ಅವರ ಸಹೋದರರಾದ, ಮತ್ತೋರ್ವ ವಿಧಾನಪರಿಷತ್ ಸದಸ್ಯರಾದ ಶ್ರೀ ಬೋಜೇಗೌಡರಿಗೆ ಫೋನ್ ಮಾಡಿದೆ. ಆದರೆ ನನ್ನ ಕರೆಯನ್ನು ಸ್ವೀಕರಿಸಿದ್ದು ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿಟಿ ರವಿಯವರು.

ನಾನು ಅತ್ಯಂತ ಮೆಲುದನಿಯಲ್ಲಿ "ಏನೋ ಸುದ್ದಿ ಕೇಳಿದೆ ನಿಜವಾ" ಎಂದು ಸಿಟಿ ರವಿ ಅವರನ್ನು ಪ್ರಶ್ನಿಸಿದೆ.

ಆಗ ರವಿ ಯವರು "ಹೌದು, ನಿನ್ನೆ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ನಿನ್ನೆ ನಾವೆಲ್ಲರೂ ಒಂದೇ ಕಾರ್ಯಕ್ರಮದ ವೇದಿಕೆಯಲ್ಲಿದ್ದೆವು. ಶ್ರೀ ಧರ್ಮೇಗೌಡರು ಆರಾಮಾಗಿ ನಮ್ಮೆಲ್ಲರ ಜೊತೆ ನಗುನಗುತ್ತಾ ಇದ್ದರು. ಡಿಸೆಂಬರ್ 25ರಂದು ನಮ್ಮ ಮನೆಗೂ ಬಂದು ಸ್ವಲ್ಪ ನಮ್ಮೆಲ್ಲರ ಜೊತೆ ಮಾತನಾಡುತ್ತ ಸಮಯ ಕಳೆದಿದ್ದರೂ. ನಿನ್ನೆ ಅವರ ತೋಟದಲ್ಲಿ ಒಂದು ಪೂಜೆ ಸಹ ಮಾಡಿದ್ದರು" ಎಂದೆಲ್ಲ ತಿಳಿಸಿದರು.

ನಂತರ ಏಕೆ ಹೀಗಾಯಿತು? ನಾನು ಕಳೆದ ವಾರ ಧರ್ಮೇಗೌಡ ಜೊತೆ ಮಾತನಾಡಿದ ವಿಷಯಗಳ ಬಗ್ಗೆ ಚರ್ಚಿಸಿದ್ದೆ. ಶ್ರೀ ಧರ್ಮೇಗೌಡ ರು ವಿಧಾನಪರಿಷತ್ತಿನಲ್ಲಿ ನಾನು ನೋಡಿದಂತೆ ಬಹಳ ಶಾಂತ ಸ್ವಭಾವದವರು. ಹೆಚ್ಚು ಮಾತನಾಡುತ್ತಿರಲಿಲ್ಲ. ನಿಜಕ್ಕೂ ಅವರ ಅಕಾಲಿಕ ಸಾವು ಯಾರಿಗಾದರೂ ದಿಗ್ಬ್ರಮೆ ಉಂಟುಮಾಡುವಂತಹದೇ! ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net