More

    ಮೇಲ್ಮನೆ ಮರ್ಯಾದೆ ಮಣ್ಣುಪಾಲು; ರಣರಂಗವಾದ ಪರಿಷತ್, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ…

    ಬೆಂಗಳೂರು: ಮರ್ಯಾದೆ ಮಹಲ್, ಬುದ್ಧಿಜೀವಿಗಳು, ಹಿರಿಯರ ಸದನ ಎಂದು ಗೌರವಿಸಲ್ಪಡುವ ವಿಧಾನಪರಿಷತ್​ನ ಘನತೆ ಸದಸ್ಯರೆನಿಸಿಕೊಂಡವರ ಹೊಯ್ಕೈ, ಉಪಸಭಾಪತಿಯನ್ನು ಪೀಠದಿಂದ ಕೊರಳಿನ ಪಟ್ಟಿ ಹಿಡಿದು ನೆಲಕ್ಕೆ ಕೆಡವಿದಂತಹ ಅಪಚಾರಗಳಿಂದ ಹರಾಜಾಗುವಂತಾಯಿತು. ವಿಧಾನ ಪರಿಷತ್ ಸಭಾಪತಿ ವಿರುದ್ಧದ ಅವಿಶ್ವಾಸ ಮಂಡನೆಗೆ ಸಂಬಂಧಿಸಿದಂತೆ ಮಂಗಳವಾರ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಸಂಘರ್ಷ ಏರ್ಪಟ್ಟು ನಡೆಯಬಾರದ ಘಟನೆಗಳು ನಡೆದುಹೋದವು. ಇದೀಗ ವಿವಾದ ರಾಜಭವನದ ಮೆಟ್ಟಿಲೇರಿದ್ದು, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಇದರಿಂದ ಹೊರಬರಲು ಮುಂದಿನ ದಾರಿ ಏನೆಂಬ ಕುತೂಹಲ ಹೆಚ್ಚಿದ್ದು ರಾಜ್ಯಪಾಲರಿಂದ ಬರುವ ಸಂದೇಶಕ್ಕೆ ಕಾಯುವಂತಾಗಿದೆ. ಮಂಗಳವಾರ ಪರಿಷತ್ ಕಲಾಪ ಆರಂಭವಾಗುತ್ತಲೇ ಭಾರಿ ಕೋಲಾಹಲ ಉಂಟಾಯಿತು. ಸಭಾಪತಿ ಆಗಮಿಸದಂತೆ ತಡೆದು ಉಪ ಸಭಾಪತಿಗಳನ್ನು ಆ ಪೀಠದಲ್ಲಿ ಕುಳ್ಳಿರಿಸಿದ್ದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಅವರನ್ನು ಎಳೆದು ಕೆಳಕ್ಕೆ ಬೀಳಿಸಿದರು. ಬಳಿಕ ಕಾಂಗ್ರೆಸ್ ಸದಸ್ಯರೇ ಆ ಪೀಠದಲ್ಲಿ ಕುಳಿತಿದ್ದರು. ಈ ವೇಳೆ ಪರಸ್ಪರ ಕೈಕೈ ಮಿಲಾಯಿಸಿದ ಘಟನೆ ನಡೆಯಿತು. ಪ್ರಜಾಪ್ರಭುತ್ವದ ದೇಗುಲ ಎನಿಸಿಕೊಂಡ ಸದನದ ಬಾಗಿಲಿಗೆ ಕಾಂಗ್ರೆಸ್ ಸದಸ್ಯರು ಒದ್ದು ಆಕ್ರೋಶ ವ್ಯಕ್ತಪಡಿಸಿದ್ದು, ಮುಷ್ಠಿಯುದ್ಧದಂತಹ ಅತಿರೇಕಗಳೂ ನಡೆದವು. ಸದ್ಯ ಬಿಜೆಪಿ ರಾಜ್ಯಪಾಲರಿಗೆ ದೂರುಕೊಟ್ಟು ಮಧ್ಯ ಪ್ರವೇಶಕ್ಕೆ ಕೋರಿದೆ. ಆದರೆ, ನ್ಯಾಯಾಂಗದಷ್ಟೇ ಪಾವಿತ್ರ್ಯತೆ ಇರುವ ಸ್ಥಾನಕ್ಕೆ ಯಾವುದೇ ನಿರ್ದೇಶನ ಕೊಡುವ ಅಧಿಕಾರ ರಾಜ್ಯ ಪಾಲರಿಗಾಗಲಿ, ನ್ಯಾಯಾಲಯಕ್ಕಾಗಲಿ ಇಲ್ಲ.

    ಕೇವಲ ಸಲಹೆಯನ್ನಷ್ಟೇ ನೀಡಬಹುದು. ಒಂದು ವೇಳೆ ಸಲಹೆ ನೀಡಿದರೂ ಸಭಾಪತಿ ತೀರ್ವನವೇ ಅಂತಿಮವಾಗಿದೆ. ಆದರೆ, ಸಭಾಪತಿ ವಿರುದ್ಧ ಅವಿಶ್ವಾಸ ಮಂಡನೆ ಅರ್ಜಿ ಸದನದಲ್ಲೇ ಬಗೆಹರಿಯಬೇಕು ಮತ್ತು ಆ ಅರ್ಜಿ ಇತ್ಯರ್ಥವಾಗುವ ಮುನ್ನ ಸಭಾಪತಿ ಆ ಸ್ಥಾನದಿಂದ ಬೇರೆ ವ್ಯವಹಾರ ನಡೆಸುವಂತಿಲ್ಲ ಎಂಬ ನಿಯಮ ಎದ್ದು ಕಾಣಿಸುತ್ತಿದೆ. ಹೀಗಾಗಿ ಅಕ್ಷರಶಃ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಜೆಡಿಎಸ್ ಕೂಡ ಸಭಾಪತಿ ವಿರುದ್ಧ ಅವಿಶ್ವಾಸ ಮಂಡಿಸಿರುವುದರಿಂದ ಬೆಳವಣಿಗೆ ಮತ್ತೊಂದು ಮಗ್ಗುಲಿಗೆ ಹೊರಡುವ ಸಾಧ್ಯತೆಯೂ ಇದೆ. ಜೆಡಿಎಸ್ ನಡೆಯಿಂದ ಸಭಾಪತಿಯವರ ಮುಂದಿನ ಹೆಜ್ಜೆ ಏನಿರುತ್ತದೆ ಎಂಬುದು ಪ್ರಶ್ನಾರ್ಹವಾಗಿದೆ.

    ಕಾನೂನು ಪಂಡಿತರ ಪ್ರಕಾರ ಅವಿಶ್ವಾಸ ನಿರ್ಣಯ ಮಂಡನೆ ಅರ್ಜಿ ಇರುವಾಗ ಅರ್ಜಿಯನ್ನು ಸದನದಲ್ಲಿ ಚರ್ಚೆ ಮಾಡದೆ ಸಭಾಪತಿ ತಿರಸ್ಕರಿಸುವಂತಿಲ್ಲ, ಜತೆಗೆ ಈ ರೀತಿ ಅರ್ಜಿ ಪರಿಹರಿಸದೆ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡುವುದು ನಿಯಮಾವಳಿಗೆ ವಿರುದ್ಧ. ಈ ಅಂಶದ ಮೇಲೆ ರಾಜ್ಯ ಸರ್ಕಾರ, ಶೀಘ್ರವೇ ಮತ್ತೆ ಕಲಾಪ ನಡೆಯುವುದನ್ನು ಎದುರು ನೋಡುತ್ತಿದೆ. ಕಲಾಪ ಆರಂಭವಾಗುತ್ತಿದ್ದಂತೆ ನಿಯಮಾವಳಿ ಪ್ರಕಾರ ಮೊದಲು ಸದನದಲ್ಲಿ ತಮ್ಮ ಅವಿಶ್ವಾಸ ಅರ್ಜಿಯನ್ನು ಬಗೆಹರಿಸಿ ಎಂದು ಪಟ್ಟು ಹಿಡಿಯಲಿದೆ.

    ಇದೇ ವೇಳೆ ಕಾಂಗ್ರೆಸ್ ಆಯಾಮದಲ್ಲಿ ನೋಡುವುದಾದರೆ, ಸಭಾಪತಿ ಸದನದಲ್ಲಿ ಅರ್ಜಿಯನ್ನು ಪರಿಗಣಿಸುವ ಮೊದಲೇ ತಿರಸ್ಕರಿಸಿದ್ದಾರೆ. ಹೀಗಾಗಿ ಅವಿಶ್ವಾಸ ಮಂಡಿಸುವುದಿದ್ದರೆ ಮತ್ತೆ ಅರ್ಜಿ ಕೊಡಬೇಕು, ಅದು 14 ದಿನ ಕಳೆದ ಬಳಿಕ ಕಲಾಪ ನಡೆದು ಅಲ್ಲಿ ಚರ್ಚೆಯಾಗಿ ತೀರ್ಮಾನ ಆಗಬೇಕೆಂದು ಹೇಳಲಾಗುತ್ತಿದೆ. ಹೀಗಾಗಿ ಅವರವರ ಮೂಗಿನ ನೇರಕ್ಕೆ ಅವರು ಅಭಿಪ್ರಾಯಗಳನ್ನು ನೀಡುತ್ತಿದ್ದಾರೆ.

    ಇದಕ್ಕೆ ಪ್ರತಿಯಾಗಿ ಬಿಜೆಪಿ ವಾದವೂ ಇದೆ. ಮತ್ತೆ ಅರ್ಜಿ ಕೊಟ್ಟರೆ ಅದನ್ನೂ ತಿರಸ್ಕರಿಸಿ, ತಮಗೆ ಪರಮಾಧಿಕಾರ ಇದೆ ಎಂದರೆ ಹೇಗಾಗುತ್ತದೆ ಎಂಬ ಚಿಂತೆಯಲ್ಲಿ ಕಮಲ ಪಕ್ಷದ ನಾಯಕರಿದ್ದಾರೆ. ಪರಿಷತ್​ನಲ್ಲಿ ನಡೆದ ಘಟನೆ ಆಧರಿಸಿ ಸುಪ್ರೀಂಕೋರ್ಟ್​ನ ಸಾಂವಿಧಾನಿಕ ಪೀಠದಲ್ಲಿ ಪ್ರಕರಣ ಹೂಡಲು ಅವಕಾಶವಿದೆ ಎಂಬ ವಾದವಿದೆ. ಕೋರ್ಟ್ ಕೂಡ ಸಲಹೆ ಕೊಡಬಹುದಷ್ಟೇ ಹೊರತು ನಿರ್ದೇಶನ ಕೊಡಲು ಅವಕಾಶವಿಲ್ಲ ಎಂದು ಹೇಳಲಾಗುತ್ತಿದೆ.

    ರಾಜಭವನದಿಂದ ಮಾಹಿತಿ ಇಲ್ಲ: ಬಿಜೆಪಿ, ಜೆಡಿಎಸ್ ರಾಜಭವನಕ್ಕೆ ದೂರು ಸಲ್ಲಿಸಿದ ನಂತರ ರಾತ್ರಿ ಬಹು ಹೊತ್ತಿನ ತನಕ ರಾಜ್ಯಪಾಲರು ಪರಿಷತ್ ಸಚಿವಾಲಯಕ್ಕೆ ಯಾವುದೇ ಸಂದೇಶ ಕಳುಹಿಸಿಲ್ಲ. ಅಧಿವೇಶನ ಕರೆಯಲು ಸೂಚನೆ ನೀಡಿದರೂ ಸಹ ಕಾರ್ಯಸೂಚಿಯನ್ನು ಕಾರ್ಯಾಂಗವೇ ನಿಗದಿ ಮಾಡಬೇಕಾಗುತ್ತದೆ. ಆದ್ದರಿಂದ ರಾಜ್ಯಪಾಲರು ಸಹ ಕಾನೂನು ತಜ್ಞರ ಅಭಿಪ್ರಾಯ ಪಡೆದು ಸಂದೇಶ ಕಳುಹಿಸಲಿದ್ದಾರೆ.

    ಕರೆಯ ನಿರೀಕ್ಷೆ: ಸಭಾಪತಿ ಪ್ರತಾಪಚಂದ್ರಶೆಟ್ಟಿ ರಾಜ್ಯಪಾಲರಿಂದ ಕರೆಯ ನಿರೀಕ್ಷೆಯಲ್ಲಿದ್ದಾರೆ. ಅಲ್ಲಿಂದ ಕರೆ ಬಂದರೆ ಹೋಗಿ ವಿವರಿಸಿ ಬರುವುದಕ್ಕೆ ಸಿದ್ಧರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ರಾತ್ರಿ ಬಹುಹೊತ್ತಿನ ತನಕ ಅವರಿಗೂ ರಾಜಭವನದ ಕರೆ ಬಂದಿಲ್ಲ ಎಂದು ಪರಿಷತ್ ಮೂಲಗಳು ಖಚಿತಪಡಿಸಿವೆ.

    ಮುಂದಿನ ಸಾಧ್ಯಾಸಾಧ್ಯತೆ

    • ಜೆಡಿಎಸ್ ಕೂಡ ಅವಿಶ್ವಾಸ ವ್ಯಕ್ತಪಡಿಸಿರುವುದರಿಂದ ಸಭಾಪತಿಗಳೇ ರಾಜೀನಾಮೆಗೆ ಮುಂದಾಗಬಹುದು
    • ಮತ್ತೆ ಅಧಿವೇಶನ ನಿಗದಿ ಮಾಡಬಹುದು, ಅವಿಶ್ವಾಸಕ್ಕೆ ಹೊಸದಾಗಿ ನೋಟಿಸ್ ನೀಡಬೇಕಾಗಬಹುದು
    • ನೋಟಿಸ್ ನೀಡಿದ ಹದಿನಾಲ್ಕು ದಿನಗಳ ಬಳಿಕ ಅಧಿವೇಶನವನ್ನು ನಡೆಸಬೇಕಾಗುತ್ತದೆ
    • ರಾಜ್ಯಪಾಲರು ಕಲಾಪ ಮುಂದುವರಿಸಲು ಸೂಚನೆ ಕೊಡಬಹುದು, ಸಭಾಪತಿ ಕಲಾಪ ಕರೆಯಬಹುದು
    • ಕಲಾಪಕ್ಕೆ ಸರ್ಕಾರ ಅಜೆಂಡಾ ನಿಗದಿ ಮಾಡಬೇಕಾಗುತ್ತದೆ. ರಾಜ್ಯಪಾಲರು ಇಂತದ್ದೇ ಅಜೆಂಡಾ ಎಂದು ಹೇಳಲು ಸಾಧ್ಯವಿಲ್ಲ
    • ಮೊದಲು ಸದನದಲ್ಲೇ ಅವಿಶ್ವಾಸ ಅರ್ಜಿ ಇತ್ಯರ್ಥಪಡಿಸಿ ಎಂದು ಬಿಜೆಪಿ ಪಟ್ಟು ಹಿಡಿಯಲಿದೆ
    • ಅರ್ಜಿ ಇತ್ಯರ್ಥವಾಗಿದೆ ಎಂದು ಹೇಳಲು ಸಮರ್ಥವಾದ ಮಂಡನೆಗೆ ಸಭಾಪತಿ ತಯಾರಾಗಬಹುದು
    • ನ್ಯಾಯಾಲಯ ಮೆಟ್ಟಿಲು ಹತ್ತುವ ಬಗ್ಗೆಯೂ ಬಿಜೆಪಿ ಆಲೋಚಿಸಬಹುದು.

    ಸದನಕ್ಕೆ ಕಪ್ಪುಚುಕ್ಕೆ

    ಮೇಲ್ಮನೆ ಮರ್ಯಾದೆ ಮಣ್ಣುಪಾಲು; ರಣರಂಗವಾದ ಪರಿಷತ್, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ...ಉಪ ಸಭಾಪತಿ ಕತ್ತಿಗೆ ‘ಕೈ’ಹಾಕಿ ಎಳೆದಾಡಿದ್ದು, ದೇಶದ ಇತಿಹಾಸದಲ್ಲೇ ಮೊದಲು. ಇದು ಸದನಕ್ಕೆ ಕಪು್ಪ ಚುಕ್ಕೆ ಎಂದು ಸಿಎಂ ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ನಡೆದು ಕೊಂಡ ರೀತಿ, ಆ ಪಕ್ಷದ ಸಂಸ್ಕೃತಿ ತೋರಿಸುತ್ತದೆ. ಅವಿಶ್ವಾಸ ನಿರ್ಣಯ ಮಂಡಿಸಿದ ಮೇಲೆ ಸಭಾಪತಿಗೆ ಆ ಪೀಠದಲ್ಲಿ ಕೂರುವ ಅರ್ಹತೆ ಇಲ್ಲ. ಹೀಗಾಗಿ ಉಪ ಸಭಾಪತಿ ಕೂರಿಸುವ ಬಗ್ಗೆ ಸೋಮವಾರವೇ ಸ್ಪಷ್ಟಪಡಿಸಲಾಗಿತ್ತು. ಬೆಂಬಲಿಸುವುದಾಗಿ ಜೆಡಿಎಸ್ ಲಿಖಿತ ರೂಪದಲ್ಲಿ ತಿಳಿಸಿತ್ತು. ಹೀಗಾಗಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ಕೊಡಿಸುವುದು ಕಾಂಗ್ರೆಸ್​ನ ಕರ್ತವ್ಯವಾಗಿತ್ತು ಎಂದು ಸಿಎಂ ವಾಗ್ದಾಳಿ ನಡೆಸಿದ್ದಾರೆ.

    ನಡೆಯಬಾರದ್ದೆಲ್ಲ ನಡೆದುಹೋಯಿತು

    • ಕೈಕೈ ಮಿಲಾಯಿಸಿದ ಸದಸ್ಯರು ಮುಖಾ ಮೂತಿ ನೋಡದೆ ಹೊಡೆದುಕೊಂಡರು.
    • ದೇವಸ್ಥಾನದಷ್ಟೇ ಪವಿತ್ರವಾದ ಪರಿಷತ್ ಸಭಾಂಗಣದ ಬಾಗಿಲು ಒದ್ದು ಆಕ್ರೋಶ.
    • ಸಭಾಪತಿ ಸೂಚನೆ ಇಲ್ಲದೆಯೇ ಉಪ ಸಭಾಪತಿಯನ್ನು ಪೀಠದಲ್ಲಿ ಕೂರಿಸಿದರು, ಸಭಾಪತಿ ಬಾರದಂತೆ ಬಾಗಿಲು ಹಾಕಿ ತಡೆಯುವ ಪ್ರಯತ್ನ.
    • ಪೀಠಕ್ಕೆ ಗೌರವ ನೀಡದೆ ಅದರ ಮೇಲೇರಿ ಕುಳಿತು ಅನುಚಿತ ವರ್ತನೆ.
    • ಉಪ ಸಭಾಪತಿಯವರನ್ನು ಎಳೆದಾಡಿ, ಕುತ್ತಿಗೆಗೆ ಕೈಹಾಕಿ ಹೊತ್ತೊಯ್ದರು.
      ಮೇಲ್ಮನೆ ಮರ್ಯಾದೆ ಮಣ್ಣುಪಾಲು; ರಣರಂಗವಾದ ಪರಿಷತ್, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ...

    ಕಿತ್ತು ಹೋದ ಗುಂಡಿ

    ಪರಿಷತ್​ನಲ್ಲಿ ನಡೆದ ಘರ್ಷಣೆ ನೂಕು ನುಗ್ಗಲಲ್ಲಿ ಆಯುನೂರು ಮಂಜುನಾಥ್ ಅವರ ಶರ್ಟ್​ನ ಒಂದು ಗುಂಡಿ ಕಿತ್ತು ಹೋಗಿದ್ದು ಅವರಿಗೂ ಮುಜುಗರ ತಂದಿತು. ಸಚಿವ ಮಾಧುಸ್ವಾಮಿ ಶರ್ಟ್ ಗುಂಡಿ ಇದ್ದರೂ ಹಾಕುವುದಿಲ್ಲ. ನಾನು ಹಾಗೆ ಎಂದು ಸಮರ್ಥಿಸಿಕೊಳ್ಳೋಣ ಎಂದು ಹೇಳಿದ್ದಕ್ಕೆ ಅಲ್ಲಿದ್ದ ಬಿಜೆಪಿ ಸದಸ್ಯರು ತಲೆದೂಗಿದರು.

    ಪೀಠದ ಮೇಲೆ ಕುಳಿತವರ ವಿರುದ್ಧ ಬಿಜೆಪಿ ದೂರು

    ಎಂಥದ್ದೇ ಸಂದರ್ಭದಲ್ಲಿ ಸಭಾಪತಿ ಪೀಠದಲ್ಲಿ ಅರ್ಹರಲ್ಲದವರು ಕುಳಿತರೆ, ಅದು ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ ಆಗಿರುವುದರಿಂದ ಈ ಬಗ್ಗೆ ದೂರು ನೀಡಲು ಬಿಜೆಪಿ ತೀರ್ವನಿಸಿದೆ. ಸಭಾಪತಿ ಪೀಠದ ಬಳಿ ನಡೆದ ಘರ್ಷಣೆ ವೇಳೆ ನೂಕುನುಗ್ಗಲಿನಲ್ಲಿ ಇಬ್ಬರು ಸದಸ್ಯರು ಸಭಾಪತಿ ಪೀಠದಲ್ಲಿ ಕುಳಿತಿದ್ದು ದೃಶ್ಯಾವಳಿಗಳು ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಇದಕ್ಕಿಂತ ಸಾಕ್ಷಿ ಬೇರೇನೂ ಬೇಕಿಲ್ಲ. ಆದ್ದರಿಂದ ಆ ಸದಸ್ಯರ ಬಗ್ಗೆ ಅಧಿಕೃತವಾಗಿ ದೂರು ದಾಖಲು ಮಾಡಲಾಗುವುದು ಎಂದು ಬಿಜೆಪಿ ಮೂಲಗಳು ಸ್ಪಷ್ಟಪಡಿಸಿವೆ.

    ಸಭಾಪತಿ ಮಾಡಿದ್ದು ಸರಿಯಲ್ಲ

    ಮೇಲ್ಮನೆ ಮರ್ಯಾದೆ ಮಣ್ಣುಪಾಲು; ರಣರಂಗವಾದ ಪರಿಷತ್, ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿ...ಅವಿಶ್ವಾಸ ಮಂಡನೆ ವಿಚಾರದಲ್ಲಿ ಪರಿಷತ್ ಸಭಾಪತಿ ಮಾಡಿದ್ದು ಸರಿಯಲ್ಲ ಎಂದು ಹಿರಿಯ ವಕೀಲ, ಸಾಂವಿಧಾನಿಕ ತಜ್ಞ ಬಿ.ವಿ.ಆಚಾರ್ಯ ವಿಶ್ಲೇಷಿಸಿದ್ದಾರೆ. ‘ಸ್ಪೀಕರ್ ಅಥವಾ ಸಭಾಪತಿ ಅಥವಾ ಯಾವುದೇ ಸಂಸ್ಥೆಯ ಅಧ್ಯಕ್ಷರ ಮೇಲೆ ಆರೋಪಗಳು ಬಂದಾಗ ಅದನ್ನು ಅವರೇ ನಿರ್ಣಯ ಮಾಡುವಂತಿಲ್ಲ ಎಂಬುದು ಮೂಲಭೂತ ತತ್ವ. ಒಳ್ಳೆಯದಿರಲಿ, ಕೆಟ್ಟದಿರಲಿ. ಆ ಸ್ಥಾನದಲ್ಲಿರುವವರು ಉಪಾಧ್ಯಕ್ಷರನ್ನು ಅಥವಾ ಹಿರಿಯರನ್ನು ತೀರ್ವನಕ್ಕೆ ಬಿಡಬೇಕಾಗುತ್ತದೆ. ನ್ಯಾಯಾಧೀಶರ ವಿಚಾರದಲ್ಲೂ ಹೀಗೇ ಆಗಬೇಕಾಗುತ್ತದೆ ಎಂದಿದ್ದಾರೆ. ಈ ಪ್ರಕರಣದಲ್ಲಿ ಸಭಾಪತಿಯವರ ವಿರುದ್ಧ ಅವಿಶ್ವಾಸ ನಿರ್ಣಯ ಪ್ರಸ್ತಾಪ ಮಾಡಿದಾಗ ಆ ಸ್ಥಾನದಲ್ಲಿ ಇರುವವರು ಉಪ ಸಭಾಪತಿಯವರಿಗೆ ಚರ್ಚೆ ಮಾಡಿ ಸದನದ ನಿರ್ಧಾರ ಅಂತಿಮಗೊಳಿಸಲು ಬಿಡಬೇಕಿತ್ತು’ ಎಂದು ವಿವರಿಸಿದರು.

    ‘ತಮ್ಮ ವಿರುದ್ಧದ ಅವಿಶ್ವಾಸ ಅರ್ಜಿಯನ್ನು ತಾವೇ ತಿರಸ್ಕರಿಸಲು ಹೇಗೆ ಬರುತ್ತದೆ? ಅದು ಸರಿಯಲ್ಲ. ಹಾಗೆಯೇ ಉಪಸಭಾಧ್ಯಕ್ಷರು ಕಲಾಪ ನಡೆಸಲು ಸಭಾಪತಿ ಸೂಚನೆ ಕೊಡಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಉಪಸಭಾಪತಿ ಅವರೇ ನಡೆಸಬೇಕಾಗುತ್ತದೆ. ಇಲ್ಲವೆ ಸಭಾಪತಿ ಸ್ಥಾನದಲ್ಲಿ ಕುಳಿತು ಕಲಾಪ ನಡೆಸುವ ಪ್ಯಾನಲ್​ನಲ್ಲಿರುವವರು ನಡೆಸಬಹುದು. ಅಲ್ಲದೆ ಅವಿಶ್ವಾಸ ಅರ್ಜಿಯ ವಿಚಾರ ಅಜೆಂಡಾದಲ್ಲಿ ತರದೇ, ಅನಿರ್ದಿಷ್ಟಾವಧಿಗೆ ಮುಂದೂಡಿದ್ದು ಸರ್ವತಾ ಸರಿಯಲ್ಲ. ಅವರಿಗೆ ತಮ್ಮ ವಿರುದ್ಧದ ಅರ್ಜಿಯನ್ನು ತಿರಸ್ಕರಿಸುವ ಅವಕಾಶವಿಲ್ಲ ಎಂಬುದು ಮೂಲಭೂತ ತತ್ವ ಎಂಬುದನ್ನು ಪುನರುಚ್ಛರಿಸಲು ಬಯಸುತ್ತೇನೆ’ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts