

ಬೆಂಗಳೂರು: ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ 2 ರೂಪಾಯಿ ನೀಡಲು ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮುಲ್) ನಿರ್ಧರಿಸಿದೆ.
ಬೆಂಗಳೂರು, ಬೆಂ,ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆ ವ್ಯಾಪ್ತಿಯ ರೈತರಿಗೆ ಈ ಹೊಸ ದರ ಅನ್ವಯವಾಗಲಿದೆ. ಕರೊನಾ ಹಿನ್ನೆಲೆಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಕಡಿತಗೊಳಿಸಲಾಗಿತ್ತು. ಒಕ್ಕೂಟವು ಈಗ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಶೇ.4.2 ಜಿಡ್ಡಿನಾಂಶ ಇರುವ ಹಾಲಿಗೆ 2 ರೂ. ಹೆಚ್ಚಿಸಿ, ಪ್ರತಿ ಲೀಟರ್ಗೆ 27,40 ರೂ.ನಂತೆ ಖರೀದಿಸಲಿದೆ. ಫೆ.6ರಿಂದ ಇದು ಜಾರಿಗೆ ಬರಲಿದ್ದು, 1.50 ಲಕ್ಷ ರೈತರಿಗೆ ಪ್ರಯೋಜನ ಸಿಗಲಿದೆ. ಈ ಹಿಂದೆ 25,40 ರೂ.ನಂತೆ ಖರೀದಿಸಲಾಗುತ್ತಿತ್ತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬಮುಲ್ ಅಧ್ಯಕ್ಷ ನರಸಿಂಹ ಮೂರ್ತಿ ತಿಳಿಸಿದರು. ಇದನ್ನೂ ಓದಿರಿ ಶ್ರೀಮೈಲಾರ ಜಾತ್ರೆ ರದ್ದು: ಕಾರ್ಣಿಕ ಭವಿಷ್ಯ ಹೇಳೋಕೂ ಅಡ್ಡಿ! ಕಾರಣ ಇಲ್ಲಿದೆ
ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚಿಸುವಂತೆ ಕೆಎಂಎಫ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ಎಲ್ಲ ಒಕ್ಕೂಟಗಳೂ ಹಾಲಿನ ದರ ಹೆಚ್ಚಿಸಲು ಬೇಡಿಕೆ ಇಟ್ಟಿವೆ. ಈ ಬಗ್ಗೆ ಶೀಘ್ರದಲ್ಲೇ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಅಲ್ಲದೆ, ಸರ್ಕಾರ ಕ್ಷೀರ ಯೋಜನೆಯಡಿ ರೈತರಿಗೆ 5 ರೂ. ಪ್ರೋತ್ಸಾಹಧನ ನೀಡುತ್ತಿದೆ. ಇದನ್ನು 6 ರೂ.ಗೆ ಹೆಚ್ಚಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಿಂದಿನ ಸರ್ಕಾರ ಪ್ರೋತ್ಸಾಹ ಧನವನ್ನು ಹೆಚ್ಚಿಸಿದ್ದರೂ ಕಾರಣಾಂತರಗಳಿಂದ ಹಣ ಬಿಡುಗಡೆ ಆಗಿರಲಿಲ್ಲ ಎಂದು ಬಮುಲ್ ಮಾಜಿ ಅಧ್ಯಕ್ಷ ಆಂಜಿನಪ್ಪ ತಿಳಿಸಿದರು.
ಒಕ್ಕೂಟ ವ್ಯಾಪಿಯ ಕನಕಪುರ ಡೇರಿ ಘಟಕ್ಕೆ ಕೇಂದ್ರ ಸರ್ಕಾರದಿಂದ ರಪ್ತು ಪರವಾನಗಿ ಸಿಕ್ಕಿದೆ. ಈ ಘಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯಂತ್ರೋಪರಕಣಗಳನ್ನು ಅಳವಡಿಸಲಾಗಿದೆ. ಮೊಜೆರೆಲ್ಲಾ ಬೆಣ್ಣೆ, ತುಪ್ಪ, ಬೆಣ್ಣೆ, ಹಾಲಿನ ಪುಡಿ ಹಾಗೂ 90 ದಿನಗಳ ಜೀವಿತಾವಧಿಯ ನಂದಿನಿ ತೃಪ್ತಿ ಹಾಲು ಸೇರಿ ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತಿದೆ. ಅಲ್ಲದೆ, ಪ್ರಸ್ತುತ ಸಾಲಿನಲ್ಲಿ ಇದೇ ಘಟಕದಲ್ಲಿ ಪ್ರತಿ ನಿತ್ಯ 6 ಲಕ್ಷ ಲೀಟರ್ ಹಾಲನ್ನು ಪರಿವರ್ತಿಸುವ ಮತ್ತೊಂದು ಘಟಕ ಪ್ರಾರಂಭಿಸಲಾಗುತ್ತಿದೆ. ಇಲ್ಲಿ ಉತ್ಪಾದಿಸುವ ನಂದಿನಿ ಹಾಲಿನ ಉತ್ಪನ್ನಗಳನ್ನು ಹೊರ ದೇಶಗಳಿಗೆ ರಪ್ತು ಮಾಡುವ ಗುರಿ ಹೊಂದಲಾಗಿದೆ ಎಂದು ಬಮುಲ್ ಎಂಡಿ ಡಾ.ಕೆ.ಸ್ವಾಮಿ ತಿಳಿಸಿದರು.