

ಮೂಡುಬಿದಿರೆ: ಕನ್ನಡ ಭವನದಲ್ಲಿ ಚಲನಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಸಂಘಟಕರಿಗೆ ಯಾವುದೇ ರೀತಿಯ ತೊಂದರೆಯಾಗದೆ ಅವರು ಮಾಡಲು ಹೊರಟಿರುವ ಸಮಾಜಮುಖಿ ಕಾರ್ಯವು ಈ ಮೂಲಕ ಯಶಸ್ವಿಯಾಗಲಿ ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ನೇತೃತ್ವದಲ್ಲಿ, ಹೀಲಿಂಗ್ ಹ್ಯಾಂಡ್ಸ್ ಚಾರಿಟೆಬಲ್ ಟ್ರಸ್ಟ್ ಮೂಡುಬಿದಿರೆ ಸಹಭಾಗಿತ್ವದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಏಳು ದಿನಗಳ ಕಾಲ ಪ್ರದರ್ಶನಗೊಳ್ಳಲಿರುವ ತುಳು ಚಲನಚಿತ್ರ ‘ಮಿಡ್ಲ್ ಕ್ಲಾಸ್ ಫ್ಯಾಮಿಲಿ’ ಸಿನಿಮಾಗೆ ಚಾಲನೆ ನೀಡಿ ಮಾತನಾಡಿದರು.
ಡಾ.ಎಂ.ಮೋಹನ ಆಳ್ವ, ಡಾ.ಅಮರಶ್ರೀ ಶೆಟ್ಟಿ ಶುಭ ಹಾರೈಸಿದರು. ಪುರಸಭೆಯ ಉಪಾಧ್ಯಕ್ಷ ನಾಗರಾಜ ಪೂಜಾರಿ, ಉದ್ಯಮಿಗಳಾದ ಕೆ.ಶ್ರೀಪತಿ ಭಟ್, ಅಶ್ವಿನ್ ಜೊಸ್ಸಿ ಪಿರೇರಾ, ಹೇಮಚಂದ್ರ ಆಚಾರ್ಯ, ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್ ಕುಮಾರ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಬಿಂದಿಯಾ ಶರತ್ ಶೆಟ್ಟಿ, ಮಾನವ ಹಕ್ಕು ಮತ್ತು ಭ್ರಷ್ಟಾಚಾರ ಸಂಸ್ಥೆಯ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಉಷಾ ಭಂಡಾರಿ, ಪ್ರಭಾವತಿ ಶೆಟ್ಟಿ, ಸಿನಿಮಾದ ನಿರ್ದೇಶಕ ರಾಹುಲ್ ಅಮೀನ್, ನಟ ವಿನೀತ್ ಹಾಗೂ ವೀಲಿಂಗ್ ಹ್ಯಾಂಡ್ಸ್ ಚಾರಿಟೆಬಲ್ ಟ್ರಸ್ಟ್ ಪದಾಧಿಕಾರಿಗಳಿದ್ದರು.
ಉಳಿಕೆ ಹಣ ಸೇವಾಕಾರ್ಯಕ್ಕೆ ವಿನಿಯೋಗ
ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಹೀಲಿಂಗ್ ಹ್ಯಾಂಡ್ಸ್ ಚಾರಿಟೆಬಲ್ ಟ್ರಸ್ಟ್ ಅಸಹಾಯಕರಿಗೆ, ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಸ್ಪಂದಿಸುತ್ತಾ ಬಂದಿದೆ. ಇದೀಗ ಈ ಚಲನಚಿತ್ರ ಪ್ರದರ್ಶನದಲ್ಲೂ ಉಳಿಕೆಯಾಗುವ ಹಣವನ್ನು ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ಮೀಸಲಿಡಲಿದೆ.