20ರಂದು ಸರ್ಕಾರದ ನಡೆ ಕಾರ್ಯಕರ್ತರ ಕಡೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿಕೆ

Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಎರಡು ವಷರ್ ಯಶಸ್ವಿಯಾಗಿ ಪೂರೈಸುತ್ತಿದ್ದು, ಎಲ್ಲ ಗ್ಯಾರಂಟಿಗಳನ್ನು ಈಡೇರಿಸಿ ನುಡಿದಂತೆ ನಡೆದಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತಿಯಲ್ಲಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ’ ಕಾರ್ಯಕ್ರಮ ಗುರುವಾಯನಕೆರೆ ಶಕ್ತಿನಗರ ಮೈದಾನದಲ್ಲಿ ಏ.20ರಂದು ನಡೆಯಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದರು.

ಗ್ಯಾರಂಟಿ ಯೋಜನೆಯಲ್ಲಿ 370 ಕೋಟಿಗೂ ಅಧಿಕ ಹಣ ತಾಲೂಕಿಗೆ ಬಂದಿದೆ. ಆ ಮೂಲಕ ಜನರ ಬದುಕು ಚೇತರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಜಿಪಂ, ತಾಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಬೇಕಾಗಿದ್ದು, ಆ ಚುನಾವಣೆಗೆ ರಣಕಹಳೆ ಮೊಳಗಿಸಿ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ 10 ಸಾವಿರ ಕಾರ್ಯಕರ್ತರು ಭಾಗವಹಿಸಲಿದ್ದು, 4 ಸಾವಿರ ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂಡಾಜೆಯಿಂದ ಧರ್ಮಸ್ಥಳ ಸ್ನಾನಘಟ್ಟ ಸಂಪರ್ಕಿಸುವ ರಸ್ತೆಯಲ್ಲಿ ಮೂರು ಶಿಥಿಲಗೊಂಡ ಸೇತುವೆಗಳಿಗೆ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶಾಸಕರು ವಿಧಾನಸಭೆಯಲ್ಲಿ ದ್ವೇಷ ಭಾಷಣ ಮಾಡಿ ಗಮನ ಸೆಳೆಯುವ ಬದಲು ತಾಲೂಕಿನ ಅಭಿವೃದ್ಧಿ ಬಗ್ಗೆ ಗಮನ ಕೊಡಬೇಕು. ಪುತ್ತೂರಿನಂತಹ ತಾಲೂಕಿಗೆ ಸಾಕಷ್ಟು ಅನುದಾನ ಬಂದಿರುವಾಗ ನಮ್ಮ ತಾಲೂಕಿನ ಅಭಿವೃದ್ಧಿ ಕೊರತೆಯಲ್ಲಿ ಶಾಸಕರ ಇಚ್ಛಾಶಕ್ತಿಯ ಕೊರತೆಯಿದೆ. ಕೆಲವು ರಸ್ತೆಗಳ ತಾಂತ್ರಿಕ ಸಮಸ್ಯೆ ಬಗೆಹರಿಸುವ ಪುರುಸೊತ್ತು ಶಾಸಕರಿಗಿಲ್ಲ. ರಸ್ತೆಯಲ್ಲಿ ರಾಜಕೀಯ ಮಾಡದೆ ಎಲ್ಲ ಸಮುದಾಯಗಳಿಗೆ ಸ್ಪಂದಿಸುವ ಕೆಲಸವನ್ನು ಶಾಸಕರು ಮಾಡಬೇಕು ಎಂದರು.

ನಿಕೇತ್ ರಾಜ್ ಮೌರ್ಯ ದಿಕ್ಸೂಚಿ ಭಾಷಣ ಮಾಡಲಿದ್ದು, ಕೃಷಿ ಸಚಿವ ಚೆಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ ಮತ್ತಿತರರು ಭಾಗವಹಿಸಲಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಗ್ರಾಮ ಸಮಿತಿ, ಬೂತ್ ಸಮಿತಿ ಪುನಾರಚನೆ ಮಾಡಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ, ಜಿಪಂ ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಪ್ರಮುಖರಾದ ಸೆಬಾಸ್ಟಿನ್, ಆಯೂಬ್, ಹಕೀಂ ಕೊಕ್ಕಡ, ಲಕ್ಷ್ಮಣ ಗೌಡ, ಅಝರ್, ನವೀನ್ ಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net