

ವಿಜಯವಾಣಿ ಸುದ್ದಿಜಾಲ ಕಾಸರಗೋಡು
ಕಾಲೇಜು ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಏಡ್ಸ್ ಕುರಿತು ಜಾಗೃತಿ ಮೂಡಿಸಲು 2024 ಆ.12ರಂದು ನಡೆಯುವ ಅಂತರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಮ್ಯಾರಥಾನ್ ಮತ್ತು ಫ್ಲಾಶ್ ಮಾಬ್ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ಕೇರಳ ಏಡ್ಸ್ ನಿಯಂತ್ರಣ ಸೊಸೈಟಿ ಮತ್ತು ಕಾಸರಗೋಡಿನ ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಆಶ್ರಯದಲ್ಲಿ ಪಡನ್ನಕ್ಕಾಡ್‌ನ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಜಿಲ್ಲೆಯ ಕಲಾ ಮತ್ತು ವಿಜ್ಞಾನ ವೃತ್ತಿಪರ ಕಾಲೇಜುಗಳ ಮಕ್ಕಳು ಭಾಗವಹಿಸಿದ್ದರು. ಮ್ಯಾರಥಾನ್ ಬಾಲಕರ ವಿಭಾಗದಲ್ಲಿ ಪಡನ್ನಕ್ಕಾಡ್ ಕೃಷಿ ಕಾಲೇಜಿನ ಜೋಯಲ್ ವರ್ಗೀಸ್, ಪಡನ್ನಕ್ಕಾಡ್‌ನ ನೆಹರು ಆರ್ಟ್ಸ್ ಮತ್ತು ವಿಜ್ಞಾನ ಕಾಲೇಜಿನ ವೈಶಾಖ್, ಪಡನ್ನಕ್ಕಾಡ್ ಕೃಷಿ ಕಾಲೇಜಿನ ಗಜೇಂದ್ರ ಸಿಂಗ್ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರೆ, ಬಾಲಕಿಯರ ವಿಭಾಗದಲ್ಲಿ ಪಡನ್ನಕ್ಕಾಡ್ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ನಿಖಿಲಾ ಸಿ., ಜ್ಯೋತಿಶ್ರೀ ಎಂ.ಮತ್ತು ನೀತು ಕೆ.ವಿ. ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದರು.
ತೃತೀಯಲಿಂಗಿ ವಿಭಾಗದಲ್ಲಿ ಕಾಞಂಗಾಡ್ ನಸಿರ್ಂಗ್ ಶಾಲೆಯ ವಿದ್ಯಾರ್ಥಿ ವರ್ಷಾ ಜಿತಿನ್ ಪ್ರಥಮ ಸ್ಥಾನ ಗಳಿಸಿದ್ದಾರೆ. ತೈಕ್ಕಡಪ್ಪುರಂ ಸ್ಟೋರ್ ಜಂಕ್ಷನ್‌ನಿಂದ ಪಡನ್ನಕ್ಕಾಡ್‌ಗೆ ನೆಹರು ಕಾಲೇಜುವರೆಗೆ ಆಯೋಜಿಸಿದ್ದ ಮ್ಯಾರಥಾನ್ ಕಾಞಂಗಾಡು ನಗರಸಭಾ ಅಧ್ಯಕ್ಷೆ ಸುಜಾತಾ ಕೆ.ವಿ. ಉದ್ಘಾಟಿಸಿದರು. ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನ ಪಡನ್ನಕ್ಕಾಡ್ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಫ್ಲ್ಯಾಶ್ ಮಾಬ್ ಸ್ಪರ್ಧೆಯ ಅಧ್ಯಕ್ಷತೆಯನ್ನು ವಾರ್ಡ್ ಕೌನ್ಸಿಲರ್ ಕೆ.ಕೆ.ಬಾಬು ವಹಿಸಿದ್ದರು.
ಜಿಲ್ಲಾ ಟಿಬಿ ಅಧಿಕಾರಿ ಡಾ.ಸಂತೋಷ್ ಕೆ., ಜಿಲ್ಲಾ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಜಿಲ್ಲಾ ಸಹಾಯಕ ಶಿಕ್ಷಣ ಮತ್ತು ಮಾಧ್ಯಮ ಅಧಿಕಾರಿಗಳಾದ ಪ್ರಶಾಂತ್ ಸಾಯನಾ, ತಾಂತ್ರಿಕ ಸಹಾಯಕ ಚಂದ್ರನ್ ಎಂ., ಆರೋಗ್ಯ ನಿರೀಕ್ಷಕರಾದ ಪ್ರಕಾಶನ್ ಚಂದೇರ, ಸಿಜೋ ಜೋಸ್ ಉಪಸ್ಥಿತರಿದ್ದರು.